Advertisement

ರಕ್ತಸಿಕ್ತ ಹಸೇನ್‌ ಹುಸೇನ್‌ ಆಚರಣೆ

09:52 PM Sep 17, 2019 | Lakshmi GovindaRaju |

ದೊಡ್ಡಬಳ್ಳಾಪುರ: ನಗರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಮೊಹರಂ ಅಂಗವಾಗಿ ನಡೆದ ಹಸೇನ್‌ ಹುಸೇನ್‌ ಧಾರ್ಮಿಕ ವಿಧಿ ವಿಧಾನಗಳನ್ನು ಧರ್ಮಗುರುಗಳ ನೇತೃದಲ್ಲಿ ನೆರವೇರಿಸಲಾಯಿತು. ಮೊಹರಂ ಮುಗಿದ 7 ದಿನಕ್ಕೆ ನಡೆಯುವ ಈ ಆಚರಣೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಶಿಯಾ ಮುಸ್ಲಿಂ ಬಾಂಧವರು ಬ್ಲೇಡು, ಕತ್ತಿ ಮೊದಲಾದ ಹರಿತ ಆಯುಧಗಳಿಂದ ಎದೆ ಚಚ್ಚಿಕೊಳ್ಳುವ ಮೂಲಕ ರಕ್ತಸಿಕ್ತ ದೇಹವನ್ನು ಹುಸೇನ್‌ ದೇವರಿಗೆ ಅರ್ಪಿಸುವ ದೃಶ್ಯ ಮೈಜುಮ್ಮೆನಿಸುವಂತಿತ್ತು.

Advertisement

ದೊಡ್ಡಬಳ್ಳಾಪುರದಲ್ಲಿ ಇದನ್ನು ಸುಮಾರು 260 ವರ್ಷಗಳಿಂದ ಆಚರಿಸುತ್ತಾ ಬರಲಾಗುತ್ತಿದ್ದು, ನೈತಿಕತೆಗಾಗಿ ಕರ್ಬಾಲಾದಲ್ಲಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಪ್ರವಾದಿ ಮೊಹಮ್ಮದ್‌ ಅವರ ಮೊಮ್ಮಗ ಹಜ್ರತ್‌ ಇಮಾಮ್‌ ಹುಸೇನ್‌ ಮತ್ತು ಅವರ ಒಡನಾಡಿಗಳ ಹುತಾತ್ಮ ದಿನದ ಸ್ಮರಣಾರ್ಥ ಮೊಹರಂ ಆಚರಿಸಲಾಗುತ್ತದೆ. ಇದು ಮುಸಲ್ಮಾನರಿಗೆ ಶೋಕಾಚರಣೆಯ ಸಂದರ್ಭವಾಗಿದೆ.

ಹತ್ತು ದಿನಗಳ ಧಾರ್ಮಿಕ ಕೈಂಕರ್ಯಗಳು, ಉಪವಾಸ ಇತ್ಯಾದಿಗಳ ಅನುಷ್ಠಾನದ ಅಂತಿಮ ದಿನವಾಗಿ ಇಂದು ತಾಝಿಯಾ ಪ್ರದರ್ಶನಗಳು, ಮೆರವಣಿಗೆಗಳು ನಡೆಯುತ್ತಿವೆ. ಜೊತೆಗೆ ಕರ್ಬಾಲದಲ್ಲಿ ಹುತಾತ್ಮರಾದವರ ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಳ್ಳುವ ಧಾರ್ಮಿಕ ಸಭೆ ಮಜಾಲಿಸ್‌ಗಳು ನಡೆಯುತ್ತವೆ. ಇಮಾಮ್‌ ಹುಸೇನ್‌ ತ್ಯಾಗ ಬಲಿದಾನಗಳನ್ನು ಅಂದು ಸ್ಮರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿಯೇ ದೊಡ್ಡಬಳ್ಳಾಪುರ ಈ ಆಚರಣೆ ನಡೆಯುವ ಪ್ರಮುಖ ಸ್ಥಳವಾಗಿದ್ದು, ದೇಶದ ವಿವಿಧ ಮೂಲೆಗಳಿಂದ ಹಾಗೂ ವಿದೇಶಗಳಿಂದ ಮುಸ್ಲಿಂಬಾಂಧ‌ವರು ಆಗಮಿಸಿ ಈ ಆಚರಣೆಯಲ್ಲಿ ಭಾಗವಹಿಸುವುದು ವಿಶೇಷ.

ನಗರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಅಂಜುಮನ್‌ ಎ ಹೈದರಿಯ ಸಂಘಟನೆ ಮತ್ತು ಹುಸೇನ್‌ ಕಮಿಟಿ ನೇತೃದಲ್ಲಿ ಮೊಹರಂ ಶೋಕಾಚರಣೆ ನಡೆಸಲಾಗುತ್ತದೆ. ನಂತರದ ದಿನಗಳಲ್ಲಿ ಕಿಲ್ಲಾ ಮಸೀದಿಯಲ್ಲಿ ನಡೆಯುವ ವಿವಿಧ ಪೂಜಾ ಕಾರ್ಯಗಳಲ್ಲಿ ಮುಸ್ಲಿಂ ಬಾಂಧವರಲ್ಲದೇ ಹಿಂದೂಗಳು ಸಹ ಪಾಲ್ಗೊಂಡು ಬಾಬಯ್ಯನಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ವ್ರತಾಚರಣೆ ಮಾಡಿ ಹೂವು ಸಮರ್ಪಿಸಿ, ಪ್ರಸಾದ ಹಂಚಲಾಗುತ್ತದೆ.

ಐತಿಹ್ಯ: ಪಾಪದ ಜೀವನಕ್ಕಿಂತ ಗೌರವದ ಸಾವು ಲೇಸು ಎಂದು ಸತ್ಯ, ಅಹಿಂಸೆ, ಧರ್ಮಕ್ಕಾಗಿ ತನ್ನ ಮತ್ತು ತನ್ನ ಕುಟುಂಬದವರ ಪ್ರಾಣ ಬಲಿದಾನದ ಐತಿಹ್ಯ ಸಾರುವ ಈ ಇಮಾಮ್‌ ಹುಸೇನ್‌ ತ್ಯಾಗ ಬಲಿದಾನದ ಸ್ಮರಣೆಗಾಗಿ ಆತನ ಜೀವನದ ಚರಿತ್ರೆಯಲ್ಲಿ ಬರುವ ಯುದ್ಧದ ಸನ್ನಿವೇಶದಲ್ಲಿ ಆದ ಅಚಾತುರ್ಯಕ್ಕೆ ಪಶ್ಚಾತ್ತಾಪ ಸಲ್ಲಿಸುವ ಸಲುವಾಗಿ ನಡೆಯುವ ಹಸೇನ್‌ ಹುಸೇನ್‌ ಆಚರಣೆ ಬೆಳೆದು ಬಂದಿದ್ದು, ಈ ಆಚರಣೆಗೆ 1400 ವರ್ಷಗಳ ಇತಿಹಾಸವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next