Advertisement

Zakir Hussain; ನಾದಯೋಗಿಯ ನಿನಾದ ಸ್ತಬ್ಧ

12:23 AM Dec 17, 2024 | Team Udayavani |

7ನೇ ವಯಸ್ಸಿಂದಲೇ ಬೆರಳ ತುದಿಯಲ್ಲಿ “ತಕತಿಟತಿಟಕ’ ಆರಂಭಿಸಿದ ತಬಲಾ ವಾದಕ ಜಾಕೀರ್‌ ಹುಸೇನ್‌ ವಿಶ್ವ ಸಂಗೀತಕ್ಕೆ ಹಿಂದೂಸ್ಥಾನಿ ಮಿಶ್ರಗೊಳಿಸಿದ ಉಸ್ತಾದ್‌. 6 ದಶಕ ಕಾಲ ರಂಜಿಸಿದ ಧೀಮಂತ.

Advertisement

ಉಸ್ತಾದ್‌ ಜಾಕೀರ್‌ ಹುಸೇನ್‌ ಹಾಗೂ ತಬಲಾದ ದನಿ ಒಂದನ್ನೊಂದು ಎಷ್ಟು ಬೆಸೆದುಕೊಂಡಿದೆ ಯೆಂದರೆ ಎರಡನ್ನೂ ಬೇರೆ ಬೇರೆಯಾಗಿ ಈ ಜಗತ್ತು ನೋಡಲಾರದು. ಜಾಕೀರ್‌ರ ಬೆರಳುಗಳು ನರ್ತಿಸಲು ಆರಂಭವಾಗುತ್ತಿದ್ದಂತೆ ಸ್ವರ, ಲಯ, ತಾಳಗಳ ಜಾದೂ ಆರಂಭವಾಗುತ್ತಿತ್ತು. 3ನೇ ವರ್ಷದಲ್ಲೇ ತಬಲಾ ವಾದನ ಅಭ್ಯಾಸ ಆರಂಭಿಸಿದ ಜಾಕೀರ್‌, ತನ್ನ ಬೆರಳುಗಳ ಮಾಂತ್ರಿಕತೆಯಿಂದ ಇಡೀ ಜಗತ್ತನ್ನು ಗೆದ್ದರು.

ಜಾಕೀ ರ್‌ ಹುಸೇನ್‌ ಅವರು ತಮ್ಮ ತಬಲಾ ಯಾನವನ್ನು ಅಧಿಕೃತವಾಗಿ ಆರಂಭಿಸಿದಾಗ ಅವರಿಗೆ ಕೇವಲ 7 ವರ್ಷ ವಯಸ್ಸು. ತಂದೆಯೇ ಮೊದಲ ಗುರು. ತಂದೆಯ ತೊಡೆಯ ಮೇಲೆ ಕುಳಿತು ತಬಲಾ ನುಡಿಸುವುದು ಕಲಿತ ಬಾಲಕನ ಹೆಸರು ಕೆಲವೇ ವರ್ಷಗಳಲ್ಲಿ ಜಗತ್ತಿನಾದ್ಯಂತ ಕೇಳಲು ಆರಂಭಿಸಿಸು. 12ನೇ ವಯಸ್ಸಿಗೇ ಅಮೆರಿಕ ಪ್ರವಾಸ ಕೈಗೊಂಡ ಜಾಕೀರ್‌ ತಮ್ಮ ಸಂಗೀತ ಪ್ರೌಢಿಮೆಯ ಮೂಲಕ ಜಗತ್ತನ್ನು ನಿಬ್ಬೆರಗಾಗಿಸಿದರು.

ಸಂಗೀತದಲ್ಲಿ ಡಾಕ್ಟರೇಟ್‌: ವಾಷಿಂಗ್ಟನ್‌ ವಿಶ್ವವಿದ್ಯಾನಿಲಯದಲ್ಲಿ ಸಂಗೀತದಲ್ಲಿ ಡಾಕ್ಟರೇಟ್‌ ಪದವಿ ಪಡೆದ ಜಾಕೀ ರ್‌, ಹಲವು ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸುವ ಮೂಲಕ ಹಿಂದೂಸ್ಥಾನಿ ಸಂಗೀತವನ್ನು ಜಗತ್ತಿಗೆ ಪರಿಚಯಿಸಿದರು. ಹಿಂದೂಸ್ಥಾನಿ ಸಂಗೀತದ ಜತೆಗೆ ವಿಶ್ವ ಸಂಗೀತವನ್ನು ಸಮ್ಮಿಲನಗೊಳಸಿ, ಜಗತ್ತಿನ ಮೂಲೆ ಮೂಲೆಗೂ ತಬಲಾದ ದನಿಯನ್ನು ಹರಡಿದರು.

ಪಂಡಿತ್‌ ರವಿಶಂಕರ್‌ಗೆ ನೆಚ್ಚಿನ ಜತೆಗಾರ: ಜಾಕೀರ್‌ ಅವರು ಸಹ ತಮ್ಮ ತಂದೆ ಉಸ್ತಾದ್‌ ಅಲ್ಲಾ ರಖಾ ಅವರಂತೆಯೇ ಸಿತಾರ್‌ ವಾದಕ ಪಂಡಿತ್‌ ರವಿಶಂಕರ್‌ ಅವರ ಜತೆ ಹಲವು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

Advertisement

ಜಾಕೀರ್‌ ಹುಸೇನ್‌ ಅವರನ್ನು ವಾಷಿಂಗ್ಟನ್‌ನಲ್ಲಿರುವ ಸಿಯಾಟಲ್‌ ವಿಶ್ವವಿದ್ಯಾನಿಲಯದಲ್ಲಿ ಸಂಗೀತ ಶಿಕ್ಷಕನ ಹುದ್ದೆಗೆ ಪಂಡಿತ್‌ ರವಿಶಂಕರ್‌ ಅವರೇ ಸೂಚಿಸಿದ್ದರು. ಪಂಡಿತ್‌ ರವಿಶಂಕರ್‌ ಅವರಷ್ಟೇ ಅಲ್ಲದೇ ಜಾಗತಿಕ ಸಂಗೀತ ಪ್ರತಿಭೆಗಳಾದ ಜಾನ್‌ ಮೆಕ್‌ಲ್ಯಾಗಿನ್‌ ಮತ್ತು ಮಿಕಿ ಹಾರ್ಟ್‌ಗೂ ಸಹ ಜಾಕೀರ್‌ ನೆಚ್ಚಿನ ಜತೆಗಾರ ಆಗಿದ್ದರು.

ಫ್ಯೂಶನ್‌ನ ಪ್ರವರ್ತಕ: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ವಿಶ್ವ ಸಂಗೀತದ ಜತೆ ಸೇರಿಸಿದ ಕೀರ್ತಿ ಸಂಪೂರ್ಣವಾಗಿ ಸಲ್ಲುವುದು ಜಾಕೀರ್‌ ಹುಸೇನ್‌ ಅವರಿಗೆ. ವಿಶ್ವದ ಪ್ರಮುಖ ಸಂಗೀತಗಾರರ ಜತೆ ಸೇರಿ 6 ದಶಕಗಳ ಕಾಲ ವಿಶ್ವದ ಸಂಗೀತ ಪ್ರಿಯರನ್ನು ರಂಜಿಸಿದರು.

ತಂದೆಯಿಂದಲೇ ತಬಲಾದ ಮೊದಲ ಪಾಠ
ಜಾಕೀರ್‌ ಹುಸೇನ್‌ ಅವರು 1951ರ ಮಾ.9ರಂದು ಮಹಾರಾಷ್ಟ್ರದ ಮುಂಬಯಿಲ್ಲಿ ಜನಿಸಿದರು. ಜಾಕೀರ್‌, ಖ್ಯಾತ ತಬಲಾ ವಾದಕ ಅಲ್ಲಾ ರಖಾ ಖಾನ್‌ ಅವರ ಮೊದಲ ಪುತ್ರ. ತಂದೆಯನ್ನು ನೋಡುತ್ತಾ ಬೆಳೆದ ಜಾಕೀರ್‌ ಅವರಿಗೆ ತಬಲಾ ಮೇಲೆ ಆಸಕ್ತಿ ಬೆಳೆಯಲು ಹೆಚ್ಚಿನ ಸಮಯದ ಬೇಕಾಗಲಿಲ್ಲ. ಮೊದಲ ಗುರು­ವಾಗಿ ತಂದೆಯೇ ಜಾಕೀರ್‌ ಅವರಿಗೆ ತಬಲಾ ಕಲಿಸಿದರು.

ಮುಂಬಯಿಯಲ್ಲಿ ಶಿಕ್ಷಣ ಪಡೆದುಕೊಂಡ ಅವರ ಸೆಂಟ್‌ ಕ್ಸೇವಿಯರ್‌ ಕಾಲೇಜಿನಲ್ಲಿ ಪದವಿ ಪಡೆದುಕೊಂಡರು. ಇದಾದ ಬಳಿಕ ವಾಷಿಂಗ್ಟನ್‌ ವಿವಿಯಲ್ಲಿ ಸಂಗೀತದಲ್ಲಿ ಡಾಕ್ಟರೆಟ್‌ ಪಡೆದುಕೊಂಡರು. 1978ರಲ್ಲಿ ಜಾಕೀ ರ್‌ ಅವರು ಖ್ಯಾತ ಕಥಕ್‌ ನೃತ್ಯಗಾರ್ತಿ ಆ್ಯಂ­ಟೋನಿಯಾ ಮಿನಿಕೋಲಾ ಎಂಬುವವರನ್ನು ವಿವಾಹವಾದರು. ಜಾಕೀರ್‌ ಅವರಿಗೆ ಅನಿಕಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ ಎಂಬ ಇಬ್ಬರು ಮಕ್ಕಳಿದ್ದಾರೆ.

ಪ್ರಾರ್ಥನೆ ಬದಲು ಕಿವಿಯ ಬಳಿ ಸಂಗೀತ
ಜಾಕೀರ್‌ ಹುಸೇನ್‌ ಹುಟ್ಟಿದ ಸಮಯದಲ್ಲಿ ಅವರ ಸಂಪ್ರದಾಯದಂತೆ ಕಿವಿಯ ಬಳಿ ಪವಿತ್ರ ಪ್ರಾರ್ಥನೆಯನ್ನು ತಂದೆ ಹೇಳಬೇಕಿತ್ತು. ಆದರೆ ಸ್ವತಃ ಖ್ಯಾತ ತಬಲಾ ವಾದಕರಾದ ಅಲ್ಲಾ ರಖಾ ಅವರು ಪ್ರಾರ್ಥನೆ ಬದಲು ತಬಲಾದ ತಾಳವನ್ನು ಹಾಡಿದರು. ಇದಕ್ಕೆ ಜಾಕೀರ್‌ ಅವರ ತಾಯಿ ವಿರೋಧ ವ್ಯಕ್ತಪಡಿಸಿದ್ದರಂತೆ. ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಅಲ್ಲಾರಖಾ, ತಬಲಾ ನಮಗೆ ದೇವರು, ಅದರ ದನಿಯನ್ನು ನಾನು ಹೇಳಿಕೊಟ್ಟಿದ್ದೇನೆ ಎಂದು ಅಲ್ಲಾ ರಖಾ ಹೇಳಿದ್ದರು. ಈ ವಿಷಯವನ್ನು ಸ್ವತಃ ಜಾಕೀರ್‌ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಅಪ್ಪನ ಬದಲು ಮಗನೇ ಬರುತ್ತಾನೆ!
12ನೇ ವಯಸ್ಸಿಗೆ ಜಾಕೀರ್‌ ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಗೀತ ಕಛೇರಿ ನೀಡಿ ಮೆಚ್ಚುಗೆ ಗಳಿಸಿದ್ದರು. ಒಮ್ಮೆ ಉಸ್ತಾದ್‌ ಅಲ್ಲಾ ರಖಾ ಅವರಿಗೆ ಸಂಗೀತ ಕಛೇರಿ ನಡೆಸಿಕೊಡುವಂತೆ ಆಯೋಜಕರು ಪತ್ರ ಬರೆದಿದ್ದರು. ಆ ಪತ್ರಕ್ಕೆ ಉತ್ತರಿಸಿದ್ದ ಜಾಕೀರ್‌, “ಅಲ್ಲಾ ರಖಾ ಅವರ ಅಲಭ್ಯತೆಯ ಕಾರಣ ಅವರ ಮಗ ಬಂದು ಪ್ರದರ್ಶನ ನೀಡಬಹುದೇ’ ಎಂದು ಪ್ರಶ್ನಿಸಿ ಮರುಪತ್ರ ಬರೆದಿದ್ದರು. ಇದಕ್ಕೆ ಆಯೋಜಕರೂ ಒಪ್ಪಿಗೆ ನೀಡಿದ್ದರು. ಜಾಕೀರ್‌ಗೆ ಇನ್ನೂ 12 ವರ್ಷ ಎಂದು ಇವರು ಅಲ್ಲಿಗೆ ಹೋದಾಗಲೇ ಗೊತ್ತಾಗಿದ್ದು!

ಮಲಯಾಳ ಸಿನೆಮಾಕ್ಕೆ ಸಂಗೀತ ನಿರ್ದೇಶನ
ಸಿನೆಮಾ ಕ್ಷೇತ್ರಕ್ಕೂ ಜಾಕೀರ್‌ ಕಾಲಿಟ್ಟಿದ್ದು, ಖ್ಯಾತ ನಟ ಮೋಹನ್‌ ಲಾಲ್‌ ನಟನೆಯ ಮೆಲಯಾಳ ಚಿತ್ರ “ವಾನಪ್ರಸ್ಥಂ’ ಸಿನೆಮಾಕ್ಕೆ ಸಂಗೀತ ನಿರ್ದೇಶನದಿಂದ. ಇದಲ್ಲದೆ 1983ರಲ್ಲಿ “ಹೀಟ್‌ ಅಂಡ್‌ ಡಸ್ಟ್‌’ ಸಿನೆಮಾಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಜಾಕೀ ರ್‌ ಸಿನೆಮಾ ರಂಗವನ್ನು ಪ್ರವೇಶಿಸಿದರು. ಇದೇ ಸಿನೆಮಾದಲ್ಲಿ ಅವರು ನಟನಾಗಿಯೂ ಕಾಣಿ ಸಿಕೊಂಡಿದ್ದರು. ಇದಾದ ಬಳಿಕ 1993ರಲ್ಲಿ “ಇನ್‌ ಕಸ್ಟಡಿ’, 2001ರಲ್ಲಿ “ಮಿಸ್ಟಿಕ್‌ ಮೆಝರ್‌’ ಸಿನೆಮಾಗಳಿಗೆ ಸಂಗೀತ ಸಂಯೋಜಿಸಿದರು.

ಮೊದಲ ಸಂಭಾವನೆ 5 ರೂ.
ಜಾಕೀರ್‌ ತಮ್ಮ ಮೊದಲ ಪ್ರದರ್ಶನಕ್ಕೆ ಪಡೆದಿದ್ದು ಕೇವಲ 5 ರೂಪಾಯಿ. ಆದರೆ ಅವರ ಖ್ಯಾತಿ ವಿಶ್ವಾದ್ಯಂತ ಹೆಚ್ಚಾಗುತ್ತಾ ಅವರ ಸಂಭಾವನೆಯೂ ಏರಿಕೆ ಕಂಡಿತ್ತು. ಬಳಿಕ ಒಂದು ಸಂಗೀತ ಕಛೇರಿಗೆ 5ರಿಂದ 10 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು. ಪ್ರಸ್ತುತ ಅವರ ಸಂಪತ್ತಿನ ನಿವ್ವಳ ಮೌಲ್ಯ ಸುಮಾರು 85 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಕಡಿದ ಸರೋದ್‌ ತಂತಿ; ತಬಲಾದ್ದೇ ಮೋಡಿ
ಖ್ಯಾತ ಸರೋದ್‌ ವಾದಕ ಅಲಿ ಅಕºರ್‌ ಖಾನ್‌ ಅವರೊಂದಿಗೆ ಒಮ್ಮೆ ಸಂಗೀತ ಕಛೇರಿ ನಡೆಸಿಕೊಡುತ್ತಿದ್ದರು. ಜನರು ಹೆಚ್ಚಾಗಿ ಅಲಿ ಅವರ ಸರೋದ್‌ ಕೇಳಲೆಂದೇ ಬಂದಿದ್ದರು. ಆದರೆ ಈ ವೇಳೆ ಸರೋದ್‌ ತಂತಿ ಕಡಿದು ಹೋಗಿದ್ದರಿಂದ ಅವರು ಸರಿ ಮಾಡುವವರೆಗೆ, ಇಡೀ ಶ್ರೋತೃಗಳನ್ನು ಜಾಕೀ ರ್‌ ತಮ್ಮ ತಬಲಾ ವಾದನ ಮೂಲಕ ಮಂತ್ರಮುಗ್ಧಗೊಳಿಸಿದ್ದರು.

ಅತ್ಯಂತ “ಮೋಹಕ ವ್ಯಕ್ತಿ’ಯಾಗಿ ಆಯ್ಕೆ
“ಜಂಟಲ್‌ವುನ್‌’ ನಿಯತಕಾಲಿಕೆ 1994ರಲ್ಲಿ ನಡೆಸಿದ್ದ ಅತ್ಯಂತ ಮೋಹಕ ವ್ಯಕ್ತಿ ಸ್ಪರ್ಧೆಯಲ್ಲಿ ಜಾಕೀರ್‌ ಹುಸೇನ್‌ ಜಯಗಳಿಸಿದ್ದರು. ಇದೇ ಸ್ಪರ್ಧೆಯಲ್ಲಿದ್ದ ಅಮಿತಾಭ್‌ ಬಚ್ಚನ್‌ಗಿಂತ ಜಾಕೀರ್‌ಗೆ ಹೆಚ್ಚು ಮತ ಸಿಕ್ಕಿದ್ದವು. ಈ ಬಗ್ಗೆ ಒಮ್ಮೆ ಮಾತನಾಡಿದ್ದ ಜಾಕೀರ್‌, ಪತ್ರಿಕೆಯವರು ಒಂದು ದಿನ ಬಂದು ಶರ್ಟ್‌, ಪ್ಯಾಂಟ್‌ ತೊಡಿಸಿ ಫೋಟೋ ಶೂಟ್‌ ಮಾಡಿಕೊಂಡು ಹೋದರು. ಅಮಿತಾಭ್‌ಗಿಂತ ಹೆಚ್ಚು ಓಟ್‌ ಬಂದಿದ್ದು ನೋಡಿ ನನಗೆ ಅಚ್ಚರಿಯಾಗಿತ್ತು ಎಂದಿದ್ದಾರೆ.

ಜಾಕೀರ್‌ ಬಲವಾಗಿದ್ದ “ಶಕ್ತಿಬ್ಯಾಂಡ್‌’
ಜಾಕೀರ್‌ ಹುಸೇನ್‌, ಭಾರತದ ಪಿಟೀಲು ವಾದಕ ಎಲ್‌.ಶಂಕರ್‌ ಮತ್ತು ಇಂಗ್ಲೆಂಡ್‌ನ‌ ಗಿಟಾರಿಸ್ಟ್‌ ಜಾನ್‌ ಮೆಕ್‌ಲಾಗಿನ್‌ ಸೇರಿ ಆರಂಭಿ­ಸಿದ ಫ್ಯೂಶನ್‌ ಬ್ಯಾಂಡೇ “ಶಕ್ತಿ ಬ್ಯಾಂಡ್‌’. ಇದು ಭಾರತದ ಸಂಗೀತವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿತ್ತು. 1977ರಲ್ಲಿ ಬ್ಯಾಂಡ್‌ ಬಿಡುಗಡೆ ಮಾಡಿದ ಆಲ್ಬಂ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತು.

ಸಂಗೀತದೊಂದಿಗೆ ಸಿನಿಮಾಗಳ‌ಲ್ಲಿಯೂ ನಟನೆ
ಸಂಗೀತದ ಹೊರತಾಗಿ ಹುಸೇನ್‌ ನಟನೆಯಲ್ಲೂ ಮಿಂಚಿದ್ದಾರೆ. ಅವರು “ಹೀಟ್‌ ಆ್ಯಂಡ್‌ ಡಸ್ಟ್‌’ (1983) ಮತ್ತು “ಸಾಜ್‌’ (1998) ಚಿತ್ರಗಳಲ್ಲಿ ನಟಿಸಿದ್ದಾರೆ. “ಮೊಘಲ್‌-ಎ-ಆಜಾಮ್‌’ (1960) ಚಿತ್ರದಲ್ಲಿನ ಅವರ ನಟನೆ ಎಲ್ಲರನ್ನೂ ಮೋಡಿ ಮಾಡಿತ್ತು.

ಶ್ವೇತಭವನದಲ್ಲಿ ಕಛೇರಿ: ಮೊದಲ ಭಾರತೀಯ 2016ರಲ್ಲಿ ಆಲ್‌ ಸ್ಟಾರ್‌ ಗ್ಲೋಬಲ್‌ ಕನ್ಸರ್ಟ್‌ನಲ್ಲಿ ಭಾಗವಹಿಸಲು ಅಮೆರಿಕದ ಆಗಿನ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಶ್ವೇತಭವನಕ್ಕೆ ಆಹ್ವಾನಿಸಿದ್ದರು. ಹೀಗೆ ಆಹ್ವಾನಿಸಲ್ಪಟ್ಟ ಮೊದಲ ಭಾರತೀಯ ಸಂಗೀತಗಾರ ಜಾಕೀ ರ್‌ ಹುಸೇ ನ್‌.

ಎಂದಿಗೂ ಮರೆಯಲಾಗದ ವಾಹ್‌ ತಾಜ್‌
ತಬಲಾ ವಾದನವಷ್ಟೇ ಅಲ್ಲದೇ 1990ರ ದಶಕದಲ್ಲಿ ಜಾಕೀ ರ್‌ ಹುಸೇನ್‌ ಅವರು ಪ್ರತಿ ಮನೆಯ ಮಾತಾಗಿದ್ದರು. ಇದಕ್ಕೆ ಕಾರಣವಾಗಿದ್ದು, “ವಾಹ್‌ ತಾಜ್‌’ ಎಂಬ ಜಾಹೀರಾತು. ಬ್ರೂಕ್‌ ಬಾಂಡ್‌ ಅವರ ತಾಜ್‌ಮಹಲ್‌ ಟೀ ಪುಡಿಗಾಗಿ ಈ ಜಾಹೀರಾತು ತಯಾರು ಮಾಡಲಾಗಿತ್ತು. ಜಾಕೀರ್‌ ಅವರ ತಬಲಾ ವಾದನಕ್ಕೆ ಮನಸೋಲುವ ಬಾಲಕ “ವಾ ಉಸ್ತಾದ್‌’ ಎಂದು ಹೇಳಿದ್ದರೆ, ಅದಕ್ಕೆ ಪ್ರತಿಕ್ರಿಯಿಸುವ ಜಾಕೀರ್‌, “ವಾಹ್‌ ತಾಜ್‌ ಎಂದು ಹೇಳಿರಿ’ ಎನ್ನುವರು. ಈ ಜಾಹೀರಾತು 90ರ ದಶಕದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿತ್ತು.

ಟಾಪ್‌ 05 ಸಂಗೀತ
ದಿ ತ್ರಿ ಆಫ್ ರಿದಮ್‌ ಫೇಸ್‌ ಟು ಫೇಸ್‌ ಮ್ಯೂಸಿಕ್‌ ಆಫ್ ದಿ ಡೆಸರ್ಟ್‌ ,ಸಾಂಗ್‌ ಫಾರ್‌ ಎವ್ರಿಒನ್‌ ರಿಮೆಂಬರ್‌ ಶಕ್ತಿ

Advertisement

Udayavani is now on Telegram. Click here to join our channel and stay updated with the latest news.

Next