ಚಿಕ್ಕಬಳ್ಳಾಪುರ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತ ಕೊನೆಗೊಳ್ಳಲಿದ್ದು, ಮತ್ತೆ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿನೂತನವಾಗಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದ ಗ್ರಹಣ ಮಾಡುವ ಮೂಲಕ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನವಚೈತನ್ಯ ತುಂಬಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ತಿಳಿಸಿದರು.
ನಗರದ ಎಂಜಿ ರಸ್ತೆಯಲ್ಲಿರುವ ಪಂಚಗಿರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕು ಮಾರ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹಮ್ಮದ್ ಅಧಿಕಾರ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಜ್ಞಾ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಾಯದ ಮೇಲೆ ಬರೆ: ಬಿಜೆಪಿ ಸುಳ್ಳು ಹೇಳಿ ಕೊಂಡು ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಆದರೆ ಕೊರೊನಾ ಸಂದರ್ಭದಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮ, ಕಾಯ್ದೆಗಳೇ ಇಂದು ಜನರ ಕೈ ಹಿಡಿದಿವೆ ಎಂದರು. ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ ಅಂಜಿ ನಪ್ಪ, ಜಿಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಪಂಚಗಿರಿ ಶಿಕ್ಷಣ ದತ್ತಿ ಅಧ್ಯಕ್ಷ ನವೀನ್ ಕಿರಣ್, ಅಲ್ಪಸಂಖ್ಯಾತರ ಘಟಕದ ಸೈಯದ್ ಅಮಾನುಲ್ಲಾ, ಮಹಿಳೆ ಮು ಖಂಡರಾದ ಮಮತಮೂರ್ತಿ, ಕಿಸಾನ್ ಖೇತ್ ಮಜ್ದೂರ್ ಸಂಘದ ರಾಮಕೃಷ್ಣಪ್ಪ ಇದ್ದರು.
ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞಾ ಸ್ವೀಕಾರ: ಪ್ರದೇಶ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕಾರ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಜ್ಞಾ ಕಾರ್ಯಕ್ರಮ ಶಿಸ್ತು ಬದ್ಧವಾಗಿ ನಡೆಯಿತು. ಕೆಪಿಸಿಸಿಯಿಂದ ರವಾನೆಯಾಗಿದ್ದ ಮಾರ್ಗಸೂಚಿಯಂತೆ ಕಾರ್ಯಕ್ರಮ ನಡೆಯಿತು. ರಾಷ್ಟ್ರಧ್ವಜ, ಕಾಂಗ್ರೆಸ್ ಧ್ವಜ ರಾರಾಜಿಸಿತು.
ಕಾರ್ಯಕ್ರಮದ ಆರಂಭದಲ್ಲಿ ವಂದೇ ಮಾತರಂ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು. ಸಂವಿಧಾನ ಪೀಠಿಕೆ ಹಾಗೂ ಕಾಂಗ್ರೆಸ್ ಪಕ್ಷದ ಪೀಠಿಕೆ ಓದಿ ಪ್ರತಿಜ್ಞಾ ಸ್ವೀಕರಿಸಲಾಯಿತು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ವೀಕ್ಷಣೆಗೆ ಜೂಮ್ ಆ್ಯಪ್ ಮೂಲಕ ಎಲ್‌ಇಡಿ ಅಳವಡಿಸಿ ವ್ಯವಸ್ಥೆ ಮಾಡಲಾಗಿತ್ತು.