ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭಾನುವಾರ ಭೇಟಿಯ ಪರಿಣಾಮ ಸೋಮವಾರವೂ ಮುಂದುವರಿದಿದೆ. ಚುನಾವಣೆ ಸಮೀಪಿಸುತ್ತಿರುವ ವೇಳೆ ಪಕ್ಷದ ಮುಖಂಡರು ಮನಬಂದಂತೆ ಹೇಳಿಕೆ ನೀಡುವುದಕ್ಕೆ ಕಡಿವಾಣ ಹಾಕಿರುವ ಬಿಜೆಪಿ, ಇದೀಗ ಟಿವಿ ಮಾಧ್ಯಮಗಳ ಪ್ಯಾನಲ್‌ಗಳಲ್ಲಿ ಕುಳಿತು ಮುಜುಗರಕ್ಕೆ ಕಾರಣವಾಗುವ ಚರ್ಚೆಗಳನ್ನು ನಡೆಸದಂತೆ ಸೂಚನೆ ನೀಡಿದೆ.
ಈ ಕುರಿತಂತೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ರಾಷ್ಟ್ರೀಯ ವಕ್ತಾರ ಜಿ.ವಿ.ಎಲ್.ನರಸಿಂಹನ್ ಮತ್ತು ಬಿಜೆಪಿ ಮಾಹಿತಿ ತಂತ್ರಜ್ಞಾನ ರಾಷ್ಟ್ರೀಯ ಪ್ರಕೋಷ್ಠದ ಸಂಚಾಲಕ ಅಮಿತ್ ಮಾಳವೀಯ ಅವರು ಸೋಮವಾರ ಪಕ್ಷದ ಮಾಧ್ಯಮ ವಿಭಾಗ, ವಕ್ತಾರರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಪ್ರಮುಖರಿಗೆ ಹೇಗೆ ಮಾತನಾಡಬೇಕು ಎಂಬ ಬಗ್ಗೆ ಪಾಠ ಮಾಡಿದ್ದಾರೆ. ಅಲ್ಲದೆ, ಮೈಚಳಿ ಬಿಟ್ಟು ಕೆಲಸ ಮಾಡುವಂತೆ ನಿರ್ದೇಶನ ನೀಡಿದ್ದಾರೆ.
ನಿಮ್ಮ ಮೇಲೆ ಮೊದಲು ಇಟ್ಟಿದ್ದ ವಿಶ್ವಾಸ ಈಗ ಇಲ್ಲ ಎನ್ನುವಂತಾಗಿದ್ದು, ಸಾಮರ್ಥ್ಯದ ಅರಿವಾಗಿದೆ. ನೀವು ಈಗ ಹೋಗುತ್ತಿರುವ ರೀತಿ ನೋಡಿದರೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ. ಗುಜರಾತ್‌ನಲ್ಲಿ ಕೂಡಾ ಇದೇ ಪರಿಸ್ಥಿತಿ ಇತ್ತಾದರೂ ಅದನ್ನು ನಮ್ಮ ಕಡೆ ತಿರುಗಿಸಿಕೊಂಡೆವು. ಇಲ್ಲಿಯೂ ಅದು ಸಾಧ್ಯವಾಗುತ್ತದೆ. ಅದಕ್ಕಾಗಿ ನಿಮ್ಮ ಕಾರ್ಯವೈಖರಿ ಬದಲಿಸಿಕೊಳ್ಳಿ. ನಾವು ಯೋಜನೆಗಳನ್ನು ರೂಪಿಸುತ್ತೇವೆ. ಅದನ್ನು ಕಾರ್ಯರೂಪಕ್ಕೆ ತರಲು ರೊಬೋಟ್‌ಗಳಂತೆ ಕೆಲಸ ಮಾಡಿ ಎಂದು ಸಭೆಯಲ್ಲಿ ತಾಕೀತು ಮಾಡಿದ್ದಾರೆ.
ಪಕ್ಷದಿಂದ ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಕುರಿತಂತೆ ಪಕ್ಷದ ವಕ್ತಾರರು, ಮಾಧ್ಯಮ ಪ್ರಮುಖರೊಂದಿಗೆ ಸುಮಾರು ಎರಡು ಗಂಟೆ ಸಭೆ ನಡೆಸಿದ ನಾಯಕರು, ಎಲ್ಲರನ್ನೂ ಪ್ರತ್ಯೇಕವಾಗಿ ಪರಿಚಯ ಮಾಡಿಕೊಂಡು ಯಾರಿಗೆ ಯಾವ ವಿಷಯದ ಮೇಲೆ ಹಿಡಿತವಿದೆ? ಯಾರು ಯಾವ ವಿಷಯವನ್ನು ಸಮರ್ಥವಾಗಿ ಮಂಡಿಸಬಲ್ಲರು ಎಂಬ ಮಾಹಿತಿ ಖುದ್ದಾಗಿ ಕೇಳಿ ತಿಳಿದುಕೊಂಡರು. ಅಲ್ಲದೆ, ಇನ್ನು ಮುಂದೆ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಶಾಂತಾರಾಮ್ ಮತ್ತು ವಕ್ತಾರ ಅಶ್ವತ್ಥನಾರಾಯಣ ಅವರು ಯಾರ ಹೆಸರನ್ನು ಕೊಡುತ್ತಾರೋ ಅವರು ಮಾತ್ರ ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಾಕೀತು ಮಾಡಿದರಲ್ಲದೆ, ಇನ್ನೆರಡು ತಿಂಗಳು ರಾಜ್ಯ ಸರ್ಕಾರದ ಮೇಲೆ ಸವಾರಿ ಮಾಡಬೇಕು. ಸರ್ಕಾರದ ಪ್ರತಿ ಹುಳುಕುಗಳನ್ನು ಎತ್ತಿ ಮಾತಾಡಬೇಕು ಎಂದು ಸೂಚಿಸಿದರು.
ಇದಾದ ಬಳಿಕ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದೊಂದಿಗೆ ಬಿಜೆಪಿ ಮಾಹಿತಿ ತಂತ್ರಜ್ಞಾನ ರಾಷ್ಟ್ರೀಯ ಪ್ರಕೋಷ್ಠದ ಸಂಚಾಲಕ ಅಮಿತ್ ಮಾಳವೀಯ ನೇತೃತ್ವದಲ್ಲಿ ಸಭೆ ನಡೆಸಿದ ಪ್ರಮುಖರು, ಸಾಮಾಜಿಕ ಜಾಲತಾಣವನ್ನು ಯಾವ ರೀತಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ಇದಕ್ಕೆ ಪಕ್ಷದ ಮಾಹಿತಿ ತಂತ್ರಜ್ಞಾನ ರಾಷ್ಟ್ರೀಯ ಪ್ರಕೋಷ್ಠದ ನೆರವು ಪಡೆಯುವಂತೆಯೂ ಸಲಹೆ ನೀಡಿದರು.
ಗೋ.ಮಧುಸೂಧನ್ ಬಗ್ಗೆ ಅಸಮಾಧಾನ
ವಿಧಾನ ಪರಿಷತ್ ಸದಸ್ಯ ಗೋ.ಮಧುಸೂಧನ್ ಅವರು ಮಾಧ್ಯಮಗಳಲ್ಲಿ ಮನಬಂದಂತೆ ಹೇಳಿಕೆ ನೀಡುತ್ತಿರುವ ಬಗ್ಗೆ ಪ್ರಕಾಶ್ ಜಾವಡೇಕರ್ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಅಲ್ಲದೆ, ಯಾರ ಅನುಮತಿಯೂ ಇಲ್ಲದೆ ಮತ್ತು ಪಕ್ಷದ ಹಿರಿಯ ನಾಯಕರ ಒಪ್ಪಿಗೆಯನ್ನೂ ಪಡೆಯದೆ ಟಿವಿ ಮಾಧ್ಯಮಗಳಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವ ಗೋ.ಮಧುಸೂಧನ್ ನೀಡುತ್ತಿರುವ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತರುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಕಡಿವಾಣ ಹಾಕುವಂತೆ ಸೂಚನೆಯನ್ನೂ ನೀಡಿದ್ದಾರೆ.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಧ್ಯೆ ಅಸಮಾಧಾನ ಉಂಟಾಗಿದ್ದ ವೇಳೆ ಸಂತೋಷ್ ಕುರಿತು ಮಧುಸೂಧನ್ ಕೇವಲವಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ವಕ್ತಾರ ಸ್ಥಾನದಿಂದ ತೆರವುಗೊಳಿಸಲಾಗಿತ್ತು. ಮತ್ತೆ ಅವರನ್ನು ವಕ್ತಾರರನ್ನಾಗಿ ನೇಮಕ ಮಾಡಲಾಯಿತಾದರೂ ಅವರು ಮಾಧ್ಯಮಗಳ ಮುಂದೆ ಮನಬಂದಂತೆ ಹೇಳಿಕೆ ನೀಡಿದ್ದರಿಂದ ಕೆಲ ದಿನಗಳ ಬಳಿಕ ಆ ಜವಾಬ್ದಾರಿಯಿಂದ ದೂರವಿಡಲಾಗಿತ್ತು. ಹೀಗಾಗಿ ಸೋಮವಾರ ನಡೆದ ಮಾಧ್ಯಮ ಪ್ರಮುಖರು, ವಕ್ತಾರರ ಸಭೆಗೂ ಗೋ.ಮಧುಸೂಧನ್ ಗೈರಾಗಿದ್ದರು.