ಬೆಂಗಳೂರು: “ಅನರ್ಹರ ಬಗ್ಗೆ ಪಕ್ಷದ ನಡೆಯನ್ನು ಕಾದುನೋಡಿ. ಸದ್ಯಕ್ಕೆ ಏನೂ ಹೇಳುವಂತಹ ಸ್ಥಿತಿಯಲ್ಲಿ ಇಲ್ಲ’. ಹೀಗೆ ಅಡ್ಡಗೋಡೆ ಮೇಲೆ ದೀಪ ಇಟ್ಟವರು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ. ಅನರ್ಹರನ್ನು ಕೈಬಿಡುವ ಪ್ರಶ್ನೆಯೇ ಇಲ್ಲವೇ ಎಂದು ಕೇಳಿದ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ನಗರದ ಕಾನ್ರಾಡ್ ಹೋಟೆಲ್‌ನಲ್ಲಿ ಸೋಮ ವಾರ ಹಮ್ಮಿಕೊಂಡಿದ್ದ “ಅಸಿಯಾನ್ ಸಮಿಟ್’ನಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರ ಸ್ಪರ್ಧೆಗೆ ಸಂಬಂಧಿಸಿದಂತೆ ಮೊದಲು ಸುಪ್ರೀಂ ಕೋರ್ಟ್ ತೀರ್ಪು ಬರಲಿ. ನಂತರ ಪಕ್ಷ ಸೇರ್ಪಡೆ ಪ್ರಕ್ರಿಯೆ ಆಗಲಿ. ತದನಂತರ ಆ ಪೈಕಿ ಯಾರ್ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಸದ್ಯಕ್ಕೆ ಕಾದುನೋಡಿ’ ಎಂದರು.
ಹಾಗಿದ್ದರೆ, ಅನರ್ಹರು ಬಿಜೆಪಿ ಮೇಲೆ ವಿಶ್ವಾಸ ಇಟ್ಟುಕೊಳ್ಳಬಹುದಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಇಡೀ ಸಮಾಜವೇ ಪಕ್ಷದ ಮೇಲೆ ವಿಶ್ವಾಸ ಇಟ್ಟುಕೊಂಡಿದೆ. ಅನರ್ಹರು ಕೂಡ ಆ ಸಮಾಜದ ಭಾಗವೇ ಆಗಿದ್ದಾರೆ. ಹಾಗಾಗಿ, ಎಲ್ಲರಿಗೂ ಸೂಕ್ತ ಅವಕಾಶ ಸಿಗಲಿದೆ. ಇದೆಲ್ಲವೂ ಸುಪ್ರೀಂ ಕೋರ್ಟ್ ನಿರ್ಣಯದ ಮೇಲೆ ಆಧಾರಿತವಾಗಿದೆ ಎಂದು ಪ್ರತಿಕ್ರಿಯಿಸಿದರು.
ಅನರ್ಹರಿಗೆ ಮಣೆ ಹಾಕುವುದರಿಂದ ಪಕ್ಷದ ಈ ಹಿಂದಿನ ಪರಾಭವಗೊಂಡ ಅಭ್ಯರ್ಥಿಗಳು ಕಾಂಗ್ರೆಸ್‌ನತ್ತ ಮುಖ ಮಾಡುವ ಬಗ್ಗೆ ಕೇಳಿದಾಗ, “ತಮ್ಮ ರಾಜಕೀಯ ಭವಿಷ್ಯದ ಅಳಿವು-ಉಳಿವಿನ ಪ್ರಶ್ನೆಯಿಂದ ಅವರು (ಪಕ್ಷದ ಹಿಂದಿನ ಅಭ್ಯರ್ಥಿಗಳು) ತೆಗೆದುಕೊಳ್ಳುವ ನಿರ್ಧಾರ ಅವರವರಿಗೆ ಬಿಟ್ಟಿದ್ದು. ಈ ಬಗ್ಗೆ ನಾನು ಮಾತನಾಡಲು ಬರುವುದಿಲ್ಲ.
ಆದರೆ ಇಷ್ಟಂತೂ ಸ್ಪಷ್ಟ, ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಉಪ ಚುನಾವಣೆ ನಡೆಯುವ ಎಲ್ಲ 15 ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವ ವಿಶ್ವಾಸ ಇದೆ. ಅಭ್ಯರ್ಥಿ ಘೋಷಣೆಯಾದ ನಂತರ ಈ ಗೊಂದಲಗಳಿಗೆ ಉತ್ತರ ಸಿಗಲಿದೆ. ಇದೆಲ್ಲವೂ ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಮೇಲೆ ಆಧಾರಿತವಾಗಿದೆ ಎಂದು ಸ್ಪಷ್ಟಪಡಿಸಿದರು.