Advertisement

Session: ಅಂದು ಸಚಿವ ಸ್ಥಾನ ಇಲ್ಲವೆಂದಾಗ ಎಸ್‌.ಎಂ.ಕೃಷ್ಣರ ಮನೆ ಬಾಗಿಲು ಒದ್ದಿದ್ದೆ: ಡಿಕೆಶಿ

09:43 PM Dec 12, 2024 | Team Udayavani |

ಬೆಳಗಾವಿ: ಚಳಿಗಾಲ ಅಧಿವೇಶನದ ನಾಲ್ಕನೇ ದಿನವಾದ ಗುರುವಾರ ಕಲಾಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಆರ್‌.ಅಶೋಕ್‌ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು.

Advertisement

ಗುರುವಾರ ಅಧಿವೇಶನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಮಂಗಳವಾರ ನಿಧನ ಹೊಂದಿದ ಮಾಜಿ ಸಿಎಂ ಎಸ್.​ಎಂ ಕೃಷ್ಣರಿಗೆ ನುಡಿ ನಮನ ಸಲ್ಲಿಸುವ ವೇಳೆ ಈ ಹಿಂದೆ ಜ್ಯೋತಿಷಿಯೊಬ್ಬರು ಅಂದು ಎಸ್.​ಎಂ ಕೃಷ್ಣ ಹಾಗೂ ತಮ್ಮ ಬಗ್ಗೆ ನುಡಿದಿದ್ದ ಭವಿಷ್ಯವಾಣಿ ನೆನಪಿಸಿಕೊಂಡರು. ಎಸ್​.​ಎಂ ಕೃಷ್ಣ ರಾಜ್ಯಸಭೆ ಸದಸ್ಯರಾಗುವ ಬಗ್ಗೆ ಜ್ಯೌತಿಷಿ ಹೇಳಿದ್ದರು. ನನಗೂ ಅದೇ ಜ್ಯೌತಿಷಿ , ನೀನು ಇಷ್ಟು ವರ್ಷ ಶಾಸಕ, ಮಂತ್ರಿ ಆಗುತ್ತಿಯಾ, ನಿನಗೆ ಟಿಕೆಟ್ ಸಿಗಲ್ಲ ಎಂಬ ಭವಿಷ್ಯಗಳ ನುಡಿದಿದ್ದರು. ಏನೇನು ಸ್ಥಾನ ಸಿಕ್ಕಿದೆ ಎಂದೂ ಹೇಳಿದ್ದರು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಡಿಕೆಶಿ ಮುಂದುವರಿದು ಮಾತನಾಡಿ ಅಶೋಕ್ ಅವರೇ ಜ್ಯೌತಿಷಿ ಏನೇನು ಹೇಳಿದ್ದಾರೆ ಅಂತ ಇಲ್ಲಿ ಹೇಳಿದರೆ ನಿಮ್ಮ (ಬಿಜೆಪಿ) 25 ಶಾಸಕರು, ದಳದವರು ನಮ್ಮ ಕಡೆ ಬರಲಿದ್ದಾರೆ. ಹಾಗಾಗಿ ಆ ಬಗ್ಗೆ ಇಲ್ಲಿ ಚರ್ಚೆ ಬೇಡ, ಕೊಠಡಿಯಲ್ಲಿ ಮಾತನಾಡೋಣ ಎಂದರು. ಇದರಿಂದ,  ಜ್ಯೌತಿಷಿ ಡಿ.ಕೆ ಶಿವಕುಮಾರ್​ಗೆ ಸಿಎಂ ಆಗುವ ಭವಿಷ್ಯ ನುಡಿದಿದ್ದರೇ ಎಂಬ ಅನುಮಾನ ವ್ಯಕ್ತವಾಗಿದೆ ಎಂದರು. ನಿಮ್ಮ ಮಾತಿಗೆ ಸಹಮತ ಇದೆ. ಬಹುಶಃ ನೀವೇ ನಮ್ಮ ಕಡೆಗೆ ಬರಬಹುದು. ಆಗ ನಾವೆಲ್ಲಾ ನಿಮ್ಮ ಜೊತೆ ಬರುತ್ತೇವೆ ಎಂದು ಆರ್‌. ಅಶೋಕ್‌ ಟಾಂಗ್ ಕೊಟ್ಟರು.

1999ರಲ್ಲಿ ಎಸ್‌.ಎಂ.ಕೃಷ್ಣ ಸರಕಾರದ ಮಂತ್ರಿ ಮಂಡಲ ರಚನೆ ವೇಳೆ ಅಂತಿಮ ಪಟ್ಟಿ ರಾಜ್ಯಪಾಲರಿಗೆ ಹೋಗುವಾಗ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಹಾಗೂ ಜಯಚಂದ್ರ ಹೆಸರಿರಲಿಲ್ಲ. ಆಗ ಜ್ಯೌತಿಷಿ ದ್ವಾರಕನಾಥ್‌ಗೆ ಫೋನ್‌ ಮಾಡಿದೆ. ಆಗ ಅವರು ಅಧಿಕಾರ ಬೇಕಿದ್ರೆ ಒದ್ದು ಕಿತ್ತು ಕೊಳ್ಳಬೇಕು ಅಂದ್ರು. ಬಳಿಕ ಎಸ್‌.ಎಂ.ಕೃಷ್ಣರ ಮನೆಗೆ ತೆರಳಿ ಬಾಗಿಲು ಒದ್ದಿದ್ದೆ. ಆಗ ನನಗೆ ಸಚಿವ ಸ್ಥಾನ ಇಲ್ಲದೇ ಸರಕಾರ ನಡೆಯಲು ಸಾಧ್ಯವಿಲ್ಲ ಎಂದು ಹೇಳಿರುವ ಸನ್ನಿವೇಶ ನೆನಪಿಸಿಕೊಂಡರು.

ಈಗಲೂ ಹಾಂಗೇ ಮಾಡ್ತೀರಾ? ಅಶೋಕ್‌ ಟಾಂಗ್‌: 
ಡಿ.ಕೆ.ಶಿವಕುಮಾರ್ ಮಾತಿಗೆ ಪ್ರತಿಕ್ರಿಯಿಸಿದ ಆರ್‌. ಅಶೋಕ್, ಅಧಿಕಾರನ ಕಿತ್ತುಕೊಳ್ಳಬೇಕು ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿ ಈಗಿನ ಮುಖ್ಯಮಂತ್ರಿ ಸ್ಥಾನ ವಿಚಾರವಾಗಿಯೂ ಇದೇ ರೀತಿ ಒದ್ದು ಕಿತ್ತುಕೊಳ್ಳುತ್ತೀರಾ? ಯಾವಾಗ ಒದ್ದು ಕಿತ್ತುಕೊಳ್ಳುತ್ತೀರಾ, ಯಾವಾಗ ಮುಹೂರ್ತ ಇಟ್ಟಿದ್ದೀರಾ ಎಂದು ಪ್ರಶ್ನಿಸಿದರು. ನಿಮ್ಮ ಜ್ಯೌತಿಷಿ ಯವರು ಒದ್ದು ಕಿತ್ತುಕೊಳ್ಳಬೇಕು ಎಂದು ಹೇಳಿದ್ದಾರೆ ಅಂತ ಗೊತ್ತು. ನೀವು ಎಲ್ಲಿ ಹೋಗುತ್ತಿರ ಅಂತ ಗೊತ್ತಿದೆ. ಅವರು ನನಗೆ ಹೇಳಿದರು ಡಿಕೆ ಶಿವಕುಮಾರ್‌ಗೆ ಹೇಳಿದ್ದೇನೆ ನೋಡಪ್ಪ ಜನವರಿ ಒಳಗಡೆ ಆದ್ರೆ ಆಗ್ತಿಯಾ ಆಮೇಲೆ ಕಷ್ಟ ಇದೆ ಎಂದು ಹೇಳಿದ್ದಾರೆ. ಜನವರಿ ಬಳಿಕ ಅವರ ಗ್ರಹಗತಿ ಸರಿ ಇಲ್ಲ ಅಂತ ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ರನ್ನು ಅಶೋಕ್‌ ಕಿಚಾಯಿಸಿದರು.

Advertisement

ಹುಟ್ಟಿದ ಮನುಷ್ಯ ಸಾಯಲೇಬೇಕು: 
ಡಿಸಿಎಂ ಡಿಕೆಶಿ ಮಾತು ಮುಂದುವರಿಸಿ ಎಸ್ಎಂ. ಕೃಷ್ಣ ನಿಧನ ನನಗೆ ದುಃಖ ತಂದಿಲ್ಲ, ಬದಲಿಗೆ ಸಂತೋಷ ತಂದಿದೆ. ಹುಟ್ಟಿದ ಮೇಲೆ ಒಬ್ಬ ಮನುಷ್ಯ ಸಾಯಲೇಬೇಕು. ಕೃಷ್ಣ ಅವರು 92 ವರ್ಷಗಳ ತುಂಬು ಜೀವನ ನಡೆಸಿದ್ದಾರೆ. ಕೊನೆಯ ನಾಲ್ಕು ತಿಂಗಳು ಮಾತ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಮ್ಮದು ರಾಜಕೀಯ ನಂಟು, ವೈಯಕ್ತಿಕ ಸಂಬಂಧ. ಅವರ ಬದುಕು ಬಹಳ ಹತ್ತಿರದಿಂದ ನೋಡಿದ್ದೇನೆ. ನಾನು ಕೃಷ್ಣರಿಂದ ರಾಜಕೀಯ ಶುರು ಮಾಡಲಿಲ್ಲ. ನಾನು ಬಂಗಾರಪ್ಪ ಅವರಿಂದ ವಿದ್ಯಾರ್ಥಿ ರಾಜಕೀಯ ಆರಂಭ ಮಾಡಿದ್ದು. ಬಂಗಾರಪ್ಪ ಹೊಸ ಪಕ್ಷ ಕಟ್ಟಿದಾಗ ನಾನು ಕೃಷ್ಣರ ಜೊತೆ ಹೋದೆ. ಆಗ ನಾನು ರಾಜಕೀಯದಲ್ಲಿದ್ದೆ, ಶಾಸಕ ಆಗಿದ್ದೆ. ನಮ್ಮಿಬ್ಬರದ್ದು ತಂದೆ ಮಗನ ಸಂಬಂಧ ತರಹ ಇತ್ತು. ಒಂದೆರಡು ಮೂರು ವಿಚಾರಗಳಲ್ಲಿ ನನಗೂ ಕೃಷ್ಣರಿಗೂ ಭಿನ್ನಾಭಿಪ್ರಾಯ ಇತ್ತು, ಅದೇನು ಅಂತ ನಾನು ಇಲ್ಲಿ ಹೇಳುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next