Advertisement
ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಗೂ ಮುನ್ನವೇ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಅನಂತರ ಮದಲೂರು ಕೆರೆಗೆ ನೀರು ಹರಿಸುವುದು, ಕುಂಚಟಿಗ ಒಕ್ಕಲಿಗ ಸಮುದಾಯ ವನ್ನು 2ಎಗೆ ಸೇರಿಸುವ ಭರವಸೆ ಯೊಂದಿಗೆ ಚುನಾವಣೆ ಎದುರಿಸಿತು. ತಿಂಗಳ ಮುಂಚೆಯೇ ಕ್ಷೇತ್ರದಲ್ಲಿ ಬೀಡುಬಿಟ್ಟು ಐನೂರು ಮತಗಳಿಂದ ಎರಡು ಸಾವಿರ ಮತ ಹೊಂದಿರುವ ಜಾತಿ, ಸಮುದಾಯಗಳ ಸಭೆ ನಡೆಸಿ ಪಕ್ಷದತ್ತ ಸೆಳೆಯುವ ಕಾರ್ಯತಂತ್ರ ರೂಪಿಸಿತ್ತು. ಅದು ಫಲ ನೀಡಿರುವುದು ಫಲಿತಾಂಶ ಸಾಬೀತುಪಡಿಸಿತು.
Related Articles
Advertisement
ಈ ಹಿಂದೆಯೂ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಉಪ ಚುನಾವಣೆಗಳು ನಡೆದಿದ್ದವು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ನಡೆದು ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆ ನಂತರ ಎದುರಾದ ಸಾರ್ವತ್ರಿಕ ಚುನಾವಣೆಯಲ್ಲಿ ಎರಡೂ ಕಡೆ ಕಾಂಗ್ರೆಸ್ ಸೋಲು ಅನುಭವಿಸಿತ್ತು.
ಆಗ ಉಪ ಚುನಾವಣೆ ದಿನಾಂಕ ಘೋಷಣೆ ಯಾದ ನಂತರ ಆಗಿನ ಆಡಳಿತಾರೂಢ ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ನೂರಾರು ಕೋಟಿ ರೂ. ಘೋಷಣೆ ಮಾಡಿತ್ತು. ಇದೀಗ ಬಿಜೆಪಿ ಚುನಾ ವಣಾ ದಿನಾಂಕ ಘೋಷಣೆಗೆ ಮುನ್ನವೇ ಕ್ಷೇತ್ರಗಳಿಗೆ ಹೋಗಿ ಜನರ ನಾಡಿಮಿಡಿತ ಅರಿತು ವೇದಿಕೆ ಸಜ್ಜುಗೊಳಿಸುತ್ತಿದೆ. ಇದು ಹೊಸ ಪ್ರಯೋಗ.
ಕಾಂಗ್ರೆಸ್-ಜೆಡಿಎಸ್‌ಗೆ ಚಿಂತೆ: ಇನ್ನು, ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಉಪ ಚುನಾವಣೆ ಎಂದರೆ ಬೆಚ್ಚಿ ಬಿದ್ದು ಯಾಕಾಗಿ ಬರುತ್ತೋ ಎನ್ನುವಂತಾಗಿದೆ. ನಂಜನಗೂಡು ಹಾಗೂ ಗುಂಡ್ಲು ಪೇಟೆ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಯಲ್ಲಿ ಜೆಡಿಎಸ್ ಸ್ಪರ್ಧೆಯೇ ಮಾಡಿರಲಿಲ್ಲ. ಅದಕ್ಕೂ ಹಿಂದೆಯೂ ಇದೇ ರೀತಿ ಕೆಲವೊಮ್ಮೆ ತೀರ್ಮಾನ ಕೈಗೊಂಡಿತ್ತು. ಉಪ ಚುನಾವಣೆಗಳು ಹೇಗೆ ನಡೆಯುತ್ತವೆ ಗೊತ್ತಿದೆ. ಆ ಚುನಾವಣೆಯಲ್ಲಿ ಹಾಕುವ ಶ್ರಮ ವ್ಯರ್ಥ ಅಲ್ಲಿ ಗೆಲ್ಲುವುದರಿಂದ ರಾಜಕೀಯವಾಗಿ ಏನೂ ಬದಲಾವಣೆ ಅಥವಾ ಕ್ರಾಂತಿ ಆಗುವುದಿಲ್ಲ ಎಂಬ ಸಮರ್ಥನೆ ಕೊಟ್ಟು ಕಣಕ್ಕೆ ಇಳಿಯದಿರುವ ತೀರ್ಮಾನ ಕೈಗೊಂಡಿದ್ದೂ ಇದೆ. ಆದರೆ, ಶಿರಾ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಆ ರೀತಿ ಮಾಡುವಂತಿರಲಿಲ್ಲ. ಇದೀಗ ಯಾವ ನಿಲುವು ತಾಳುತ್ತೋ ಗೊತ್ತಿಲ್ಲ.
ಆದರೆ, ಕಾಂಗ್ರೆಸ್ ಹಾಗೆ ಮಾಡಲು ಸಾಧ್ಯವಿಲ್ಲ. ರಾಷ್ಟ್ರೀಯ ಪಕ್ಷವಾಗಿ ಕಣಕ್ಕಿಳಿಯಲೇಬೇಕು. ಶಿರಾ ಹಾಗೂ ರಾಜರಾಜೇಶ್ವರಿ ನಗರದ ಪ್ರಚಾರ ಕಣದಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರ ಪ್ರಸ್ತಾಪವಾಗಿ ಎಲ್ಲೆಲ್ಲಿ ಡ್ಯಾಮೇಜ್ ಆಗಬೇಕೋ ಆಯಿತು. ಇದರ ಮಧ್ಯೆ, ಶಿರಾದಲ್ಲಿ ಡಾ| ಜಿ.ಪರಮೇಶ್ವರ್ ಸರಿಯಾಗಿ ಕೆಲಸ ಮಾಡಲಿಲ್ಲ ಎಂದೂ ಮತ್ತೂಬ್ಬ ಉಸ್ತುವಾರಿ ಕೆ.ಎನ್.ರಾಜಣ್ಣ ಹೇಳುವ ಮೂಲಕ ಅಲ್ಲಿ ಒಗ್ಗಟ್ಟಿನ ಕೆಲಸ ನಡೆಯಲಿಲ್ಲ ಎಂಬುದನ್ನೂ ಹೊರ ಹಾಕಿದ್ದಾರೆ. ಇದೇ ಕಾರಣಕ್ಕೆ ಹಿರಿಯ ನಾಯಕ ಖರ್ಗೆ ಅವರು, ನಮ್ಮ ನಮ್ಮಲ್ಲೇ ಸಮಸ್ಯೆ ಇದೆ. ಪಕ್ಷದ ನಾಯಕರಲ್ಲಿ ಒಗ್ಗಟ್ಟು ಇಲ್ಲವಾಗಿದೆ. ಇದು ಮುಂದುವರಿದರೆ ಭವಿಷ್ಯದಲ್ಲಿ ಕಷ್ಟವಾಗಿದೆ ಎಂದು ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ.
ಇದೀಗ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಹೇಗೆ ಸಜ್ಜಾಗುತ್ತದೆ. ಯಾವ ರೀತಿಯ ಕಾರ್ಯತಂತ್ರ ರೂಪಿಸುತ್ತದೆ ಎಂಬುದು ನೋಡ ಬೇಕಾಗಿದೆ. ಏಕೆಂದರೆ, ಇದುವರೆಗೂ ಕಾಂಗ್ರೆಸ್ ನಡೆಸುತ್ತಿದ್ದ ಚುನಾವಣೆಯ ಧಾಟಿ ಬೇರೆ ಇದೀಗ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿಯ ಪಟ್ಟುಗಳೇ ಬೇರೆ. ಇದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಎಷ್ಟರ ಮಟ್ಟಿಗೆ ಪ್ರತಿತಂತ್ರ ರೂಪಿಸುತ್ತದೆ ಎಂಬುದರ ಮೇಲೆ ಆ ಪಕ್ಷಗಳ ಯಶಸ್ಸು ಅವಲಂಬಿಸಿದೆ.
ರಾಜಕಾರಣದಲ್ಲಿ ಇಂತಿಂಥ ಸಮುದಾಯದ ಮತಗಳು ನಮ್ಮದೇ ಜಹಗೀರ್. ಎಲ್ಲ ಮತಗಳು ನಮ್ಮ ಕಿಸೆಯಲ್ಲೇ ಇವೆ ಎಂಬ ಅತಿಯಾದ ಆತ್ಮವಿಶ್ವಾಸ ಅಥವಾ ನಮ್ಮನ್ನು ಬಿಟ್ಟು ಎಲ್ಲಿ ಹೋಗುತ್ತೆ ಆ ಮತಬ್ಯಾಂಕ್ ಎಂಬ “ಟೇಕನ್ ಫಾರ್ ಗ್ರಾಂಟೆಡ್’ ಕಾಲ ಮುಗಿದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ತನ್ನ ಕಾರ್ಯತಂತ್ರ ಬದಲಿಸಬೇಕಾದ ಅನಿವಾರ್ಯತೆಯೂ ಇದೆ. ಇಲ್ಲದಿದ್ದರೆ ಕಳೆದುಹೋಗಬೇಕಾಗುತ್ತದೆ.ಚುನಾವಣೆ ಸಮರದಲ್ಲಿ ನಮ್ಮ ಪಕ್ಷ ಗೆಲ್ಲಬೇಕು ಎಂಬುದು ಮುಖ್ಯವಾಗಬೇಕೇ ಹೊರತು ಮತ್ತೂಬ್ಬರು ಸೋಲಲಿ ಎಂಬ ಗುರಿ ಅಥವಾ ಉದ್ದೇಶದಿಂದ ಕೆಲಸ ಮಾಡಿದರೆ ಎಲ್ಲರೂ ಮುಳುಗುತ್ತಾರೆ ಎಂಬುದು ಅಂತಿಮ ಸತ್ಯ. ಕುತೂಹಲ ಮೂಡಿಸಿದ ಭೇಟಿ
ಶಿರಾ ಹಾಗೂ ರಾಜರಾಜೇಶ್ವರಿ ಉಪ ಚುನಾವಣೆಗೆ ಮುನ್ನ ಎಚ್.ಡಿ.ಕುಮಾರಸ್ವಾಮಿ ಬಿ.ಎಸ್.ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದರು. ಅನಂತರ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧದ ಕಚೇರಿಯಲ್ಲೂ 2ನೇ ಬಾರಿ ಭೇಟಿ ಮಾಡಿದ್ದರು. ರಾಮನಗರ, ಚನ್ನಪಟ್ಟಣ ಸೇರಿದಂತೆ ಜೆಡಿಎಸ್ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ವಿಚಾರಕ್ಕೆ ಭೇಟಿಯಾಗಿದ್ದೆ ತಪ್ಪೇನು ಎಂದು ಸಮರ್ಥಿಸಿಕೊಂಡಿದ್ದರು. ಕಾಂಗ್ರೆಸ್ ಈ ಭೇಟಿಯನ್ನೇ ಮುಂದಿಟ್ಟು ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಅಸ್ತ್ರ ಪ್ರಯೋಗಿಸಿತು. ಅದು ಎಷ್ಟರ ಮಟ್ಟಿಗೆ “ಎಫೆಕ್ಟ್’ ನೀಡಿತು ಎಂಬುದನ್ನು ಫಲಿತಾಂಶ ಸಾಬೀತುಮಾಡಿದೆ. ಇದೀಗ ಮತ್ತೂಂದು ಉಪ ಚುನಾವಣೆ ಹೊಸ್ತಿಲಲ್ಲೇ ಕುಮಾರಸ್ವಾಮಿ ಯಡಿಯೂರಪ್ಪ ಅವರನ್ನು ಮತ್ತೆ ಭೇಟಿ ಮಾಡಿದ್ದಾರೆ. ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿ ಹಾಗೂ ಮಂಡ್ಯ ಡಿಸಿಸಿ ಬ್ಯಾಂಕ್ ವಿಚಾರ ಎಂದೂ ಸ್ಪಷ್ಟನೆ ನೀಡಲಾಗಿದೆ. ಆದರೆ ಈ ಭೇಟಿಯ ಹಿಂದಿನ ರಹಸ್ಯ ಏನು? ಮುಂದೆ ಇದು ಯಾವ ರೀತಿಯ ಸ್ವರೂಪ ಪಡೆಯುತ್ತದೆ ಎಂಬುದೂ ಕುತೂಹಲ ಮೂಡಿಸಿರುವುದಂತೂ ಹೌದು. ಎಸ್.ಲಕ್ಷ್ಮಿನಾರಾಯಣ