Advertisement
ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಕುರಿತು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಮೀಕ್ಷೆಯ ವರದಿ ಜಾರಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
Related Articles
Advertisement
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿ ಅವರ ಬಳಿ ವರದಿ ಸ್ವೀಕರಿಸಿ ಎಂದು ಹೇಳಿದೆ. ಅದಕ್ಕವರು ಒಪ್ಪಿ ಸಭೆ ಕರೆದು, ವರದಿ ಸ್ವೀಕರಿಸುವ ವಿಚಾರ ಚರ್ಚೆಸಿದರು. ಇದಾದ ಕೂಡಲೇ ಕುಮಾರಸ್ವಾಮಿ ಅವರು ಪುಟ್ಟರಂಗ ಶೆಟ್ಟಿಯವರನ್ನು ವರದಿ ಸ್ವೀಕರಿಸಿದರೆ ಮಂತ್ರಿ ಪದವಿಯಿಂದ ಕಿತ್ತುಹಾಕ್ತೀನಿ ಎಂದು ಹೆದರಿಸಿ, ಸ್ವೀಕರಿಸದಂತೆ ಮಾಡಿದ್ರು.
ಈಗ ಸಿದ್ದರಾಮಯ್ಯ ಅವರೇ ಹೇಳಿ ಬರೆಸಿದ್ದಾರೆ, ಇದನ್ನು ಸದನದಲ್ಲಿ ಏಕೆ ಪ್ರಸ್ತಾಪಿಸಲ್ಲ ಎಂದು ಕುಮಾರಸ್ವಾಮಿ ಅವರು ನನ್ನನ್ನೇ ಪ್ರಶ್ನೆ ಮಾಡ್ತಾರೆ. ಮುಂದೆ ಡಿಸೆಂಬರ್ ನಲ್ಲಿ ಅಧಿವೇಶನ ನಡೆಯುತ್ತೆ ಆಗ ಆರಂಭದಲ್ಲೇ ಈ ವಿಚಾರದ ಬಗ್ಗೆ ಪ್ರಶ್ನಿಸುತ್ತೇನೆ. ನಾನು ಹೇಳ್ತಿರೋದು ಸತ್ಯ, ಹಾಗಾಗಿ ನಾನು ಯಾರಿಗೆ ಏಕೆ ಹೆದರಲಿ? ಸತ್ಯ ಹೇಳಲು, ಸತ್ಯದ ಪರ ಹೋರಾಡಲು ಹೆದರಬಾರದು.
ನಾನು ಅಧಿಕಾರಕ್ಕೆ ಹಿಂಬಾಗಿಲ ರಾಜಕಾರಣ ಮಾಡಿಲ್ಲ. ಅಧಿಕಾರ ಇರಲಿ, ಹೋಗಲಿ ಎಂದೂ ನಾನು ನಂಬಿರುವ ತತ್ವ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಂಡಿಲ್ಲ, ಮುಂದೆಯೂ ರಾಜಿಯಾಗಲ್ಲ. ಇಷ್ಟು ನನ್ನ ಬಗ್ಗೆ ನನಗೆ ಸ್ಪಷ್ಟತೆ ಇದೆ.
ವರದಿ ಸೋರಿಕೆಯಾಗಿದೆ ಎಂಬ ಸುಳ್ಳು, ಇದರಲ್ಲಿ ಒಂದಷ್ಟು ಜಾತಿಗಳಿಗೆ ಅನ್ಯಾಯವಾಗಿದೆ ಎಂಬ ಇನ್ನೊಂದು ಸುಳ್ಳು ಹೀಗೆ ವರದಿ ಬಗ್ಗೆ ಬರೀ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ವರದಿ ಸೋರಿಕೆಯಾಗಿದ್ದರೆ ಅದರ ಮಾಹಿತಿ ಮತ್ತು ಸಾಕ್ಷಿ ತೋರಿಸಿ ನೋಡೋಣ. 55 ಮಾನದಂಡಗಳನ್ನು ಆಧಾರವಾಗಿ ಇಟ್ಟುಕೊಂಡು ವರದಿ ತಯಾರಿಸಲಾಗಿದೆ. ಇಷ್ಟೊಂದು ವೈಜ್ಞಾನಿಕವಾಗಿ ಎಲ್ಲಾ ಜಾತಿಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ ನಡೆಸಿರುವುದು ಭಾರತದಲ್ಲೇ ನಮ್ಮಲ್ಲಿ ಮೊದಲು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ಅವರನ್ನು ಭೇಟಿಯಾಗಿ ಕೇಂದ್ರ ಸರ್ಕಾರವೇ ಜಾತಿ ಆಧಾರಿತ ಸಮೀಕ್ಷೆ ನಡೆಸುವಂತೆ ಮನವಿ ಮಾಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಮೀಕ್ಷೆ ಮಾಡಲಾಗಿತ್ತು. ನಂತರ ಇಂತಹ ಸಮೀಕ್ಷೆ ನಡೆಯಲೇ ಇಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರನ್ನು ಬಿಟ್ಟರೆ ಬೇರೆ ಯಾವ ಜಾತಿಗಳ ಬಗ್ಗೆಯೂ ನಿರ್ಧಿಷ್ಟ ಮಾಹಿತಿ ಇಲ್ಲ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದಿವೆ ಆದರೂ ನಮ್ಮಲ್ಲಿ ಅಸಮಾನತೆ ಜೀವಂತವಾಗಿದೆ. ಈ ತಳ ಸಮುದಾಯಗಳ ಜನರಿಗೆ ಹೆಚ್ಚು ಪ್ರಾಶಸ್ತ್ಯ ಕೊಡಬೇಕೋ ಬೇಡವೋ? ಅವರ ಅಭಿವೃದ್ಧಿಗೆ ಗಕನ ನೀಡದೆ ಹೋದರೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಹೇಗೆ? ಸಮ ಸಮಾಜ ನಿರ್ಮಾಣವಾಗುವುದು ಹೇಗೆ? ಇದಕ್ಕಾಗಿ ಅಂಕಿ ಅಂಶಗಳು ಬೇಕು. ಗೊಂಡ, ರಾಜಗೊಂಡ, ಲಿಂಗಾಯತ, ವಾಲ್ಮೀಕಿ ಸಮಾಜ ಹೀಗೆ ಎಲ್ಲಾ ಸಮಾಜದ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಯ ಬಗ್ಗೆ ಮಾಹಿತಿ ಬೇಕು. ಆಗ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೊಳಿಸಲು ಅನುಕೂಲವಾಗುತ್ತದೆ. ಸಮೀಕ್ಷೆಯ ಮುಖ್ಯ ಉದ್ದೇಶ ಇದೆ ಆಗಿದೆ.
ಯಾವುದೇ ಒಂದು ಜಾತಿ ತಾವು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಬೇಕು ಎಂದು ಕೇಳಿದಾಗ ಮೊದಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಅರ್ಜಿ ಹಾಕಬೇಕು. ನಂತರ ಆಯೋಗ ಅದನ್ನು ತುಲನೆ ಮಾಡಿ, ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ಈ ವರದಿ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಳ್ಳುತ್ತೆ. ಇದು ಈಗಿರುವ ಕಾನೂನು. ಈ ನಿರ್ಣಯ ಕೈಗೊಳ್ಳುವ ಹಕ್ಕನ್ನು ರಾಜ್ಯಗಳಿಗೆ ಬಿಡಬೇಕು ಎಂದು ಇತ್ರೀಚೆಗೆ ಸಂಸತ್ತಿನಲ್ಲಿ ಕಾನೂನು ಅಂಗೀಕಾರವಾಗಿದೆ.
ಕೋಲಿ ಸಮಾಜವನ್ನು ಎಸ್.ಟಿ ಗೆ ಸೇರಿಸಬೇಕು, ತಳವಾರ, ಪರಿವಾರ, ಕಾಡುಗೊಲ್ಲರನ್ನು ಎಸ್.ಸಿ ಗೆ ಸೇರಿಸಬೇಕು, ಗೊಂಡ, ರಾಜಗೊಂಡ ಸಮುದಾಯವನ್ನು ಎಸ್.ಟಿ ಗೆ ಸೇರಿಸಬೇಕು ಎಂದು ಶಿಫಾರಸು ಮಾಡಿದ್ದು ನಮ್ಮ ಸರ್ಕಾರ. ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದೆ, ಆಗ ಕೆಲವರು ಗೊಂಡ, ರಾಜಗೊಂಡ, ಕಾಡು ಕುರುಬ, ಜೇನು ಕುರುಬ, ತಳವಾರ, ನಾಯ್ಕ, ನಾಯಕ ಎಂಬ ಬೇರೆ ಬೇರೆ ಸರ್ಟಿಫಿಕೇಟ್ ತಗೊಂಡಿದ್ದಾರೆ, ಅವರ ಮೇಲೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೆ, ಶಿಕ್ಷೆಗೆ ಒಳಪಡಿಸದೆ, ಕ್ರಮಿನಲ್ ಕೇಸ್ ಇದ್ದರೆ ಅದನ್ನು ವಾಪಸ್ ಪಡೆದು ಯಥಾಸ್ಥಿತಿಯನ್ನು ಮುಂದುವರೆಸಬೇಕು ಎಂದು ಆದೇಶ ನೀಡಲು ಶ್ರಮಿಸಿದ್ದು ನಾನು ಮತ್ತು ಸಚಿವರಾಗಿದ್ದ ವೀರಣ್ಣ ಅವರು. ಇದು ಜಾರಿಯಾಗಿದ್ದು ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ.
1994-95 ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲಾಯಿತು. ಇದಕ್ಕಾಗಿ ಒಂದು ಸಂಪುಟ ಉಪಸಮಿತಿ ರಚನೆ ಮಾಡಲಾಗಿತ್ತು. ಆ ಉಪಸಮಿತಿಯಲ್ಲಿ ನಾನು, ಎಂ.ಪಿ ಪ್ರಕಾಶ್, ಸಿಂಧ್ಯಾ, ನಾಣಯ್ಯ, ಬೈರೇಗೌಡ ಅವರು ಸದಸ್ಯರಾಗಿದ್ದೆವು. ನಾನು ಪ್ರೊ. ರವಿವರ್ಮ ಕುಮಾರ್ ಅವರ ಜೊತೆ ನಿರಂತರ ಚರ್ಚೆ ನಡೆಸಿ, ಮೀಸಲಾತಿ ಪ್ರಮಾಣ ನಿಗದಿ ಮಾಡಿದ್ದೆ. ಜೊತೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿದ್ದು ನಮ್ಮ ಸಮಿತಿ. ಇದನ್ನು ವಿರೋಧಿಸಿದವರು ಬಿಜೆಪಿಯ ರಾಮಾ ಜೋಯಿಸ್. ಬಿಜೆಪಿ ಮೀಸಲಾತಿ ವಿರೋಧಿ ಎನ್ನಲು ಇಂತಹಾ ಸಾಕಷ್ಟು ನಿದರ್ಶನಗಳಿವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.