ಬೆಂಗಳೂರು: ಬೂತ್ ಮಟ್ಟದಿಂದ ಪಕ್ಷದ ಸಂಘಟನೆಯನ್ನು ಬಲಗೊಳಿಸಲು ರಾಜ್ಯಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ವಿಸ್ತಾರಕ ಯೋಜನೆಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.
ಜುಲೈ 1ರಿಂದ ಆರಂಭವಾಗಿರುವ ವಿಸ್ತಾರಕ ಯೋಜನೆ ನಿಗದಿಯಂತೆ ಮಂಗಳವಾರಕ್ಕೆ (ಜು. 25) ಕೊನೆಗೊಳ್ಳಬೇಕಿತ್ತು. ಈ ಅವಧಿಯಲ್ಲಿ ವಿಸ್ತಾರಕರು ಕನಿಷ್ಠ 15 ದಿನ ತಮ್ಮ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಿತ್ತು. ಆದರೆ, ಕೆಲವೆಡೆ ವಿಸ್ತಾರಕರು 15 ದಿನಗಳನ್ನು ಪೂರೈಸದ ಕಾರಣ ಮತ್ತು ಇನ್ನೂ ಕೆಲವೆಡೆ ಯೋಜನೆಗೆ ಹೆಚ್ಚಿನ ಜನಮನ್ನಣೆಸಿಕ್ಕಿರುವುದರಿಂದ ಇನ್ನಷ್ಟು ದಿನ ಮುಂದುವರಿಸಬೇಕು ಎಂಬ ಬೇಡಿಕೆ ಬಂದಿದ್ದರಿಂದ ಜುಲೈ 31ರವರೆಗೆ ಅದನ್ನು ವಿಸ್ತರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಆಗಸ್ಟ್ 12ರಿಂದ ಮೂರು ದಿನಗಳ ಕಾಲ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ವಿಸ್ತಾರಕ ಯೋಜನೆಯ ಪ್ರಗತಿ ಕುರಿತು ಅವರಿಗೆ ವರದಿ ಸಲ್ಲಿಸಬೇಕಾಗಿದೆ. ಯೋಜನೆ ನಿಗದಿಯಂತೆ ನಡೆಯದಿದ್ದರೆ ಶಾ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಸ್ತಾರಕ ಯೋಜನೆಯನ್ನು ಜುಲೈ ಅಂತ್ಯದವರೆಗೂ ನಡೆಸುವಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ನಿಗದಿಯಂತೆ ವಿಸ್ತಾರಕರು ಮನೆ ಮನೆಗೆ ಭೇಟಿ ನೀಡುವ ಮತ್ತು ಬೂತ್ ಮಟ್ಟದಲ್ಲಿ ಸಂಘಟನೆಗೆ ಪ್ರಯತ್ನಿಸುವ ಕೆಲಸ ಮಾಡದಿದ್ದರೆ ಅಂಥವರಿಗೆ ಮುಂದಿನ ದಿನಗಳಲ್ಲಿ ಪಕ್ಷದ ಜವಾಬ್ದಾರಿ ನೀಡುವ ಬಗ್ಗೆ ಯೋಚಿಸಬೇಕಾಗುತ್ತದೆ
ಎಂಬ ಸಂದೇಶವನ್ನು ಯಡಿಯೂರಪ್ಪ ರವಾನಿಸಿದ್ದಾರೆ ಎನ್ನಲಾಗಿದೆ.