ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ)ದ ವಿಧೇಯಕ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿದ ಬಂದ್, ರಾಜ್ಯದಲ್ಲಿ ರೋಗಿಗಳ ಮೇಲೆ ಅಷ್ಟೇನೂ ಪ್ರಭಾವ ಬೀರಿಲ್ಲ.
ಶನಿವಾರ ರಾಜ್ಯದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ಹೊರರೋಗಿಗಳ ವಿಭಾಗ (ಒಪಿಡಿ) ಮುಚ್ಚಿ ಬಂದ್‌ಗೆ ಬೆಂಬಲ ನೀಡಿದವು. ಉಳಿದ ಬಹುತೇಕ ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಒದಗಿಸಿವೆ.
ರಾಜ್ಯ ಆರೋಗ್ಯ ಇಲಾಖೆಯ ಎಲ್ಲ ಸರ್ಕಾರಿ ವೈದ್ಯರು ರಜೆಯಿಲ್ಲದೆ ಶನಿವಾರ ಕಾರ್ಯ ನಿರ್ವಹಿಸುವಂತೆ ಆದೇಶ ನೀಡಿದ್ದರ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳ ವೈದ್ಯ ಸಿಬ್ಬಂದಿ ಕೆಲಸದಲ್ಲಿ ನಿರತರಾಗಿದ್ದರು. ಐಎಂಎ ಅಡಿಯಲ್ಲಿ ನೊಂದಾಯಿತ ನಗರದ ಒಟ್ಟು 27 ಸಾವಿರ ಖಾಸಗಿ ವೈದ್ಯರು ಸೇರಿ ರಾಜ್ಯದ 2.5ಲಕ್ಷ ಖಾಸಗಿ ವೈದ್ಯರು ಒಪಿಡಿಗೆ ಹಾಜರಾಗದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಖಾಸಗಿ ವೈದ್ಯರ ಮುಷ್ಕರದಿಂದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿತ್ತು. ರಾಜ್ಯದಲ್ಲಿರುವ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪ್ರತಿನಿತ್ಯಕ್ಕಿಂತ ಶೇ.20 ರಿಂದ 30ರಷ್ಟು ರೋಗಿಗಳು ಹೆಚ್ಚಾಗಿ ಭೇಟಿ ನೀಡಿ ವೈದ್ಯಕೀಯ ಸೇವೆ ಪಡೆದುಕೊಂಡಿದ್ದಾರೆ.
ಮಾಹಿತಿ ಇಲ್ಲದೆ ಪರದಾಡಿದ ರೋಗಿಗಳು:
ವೈದ್ಯಕೀಯ ಸೇವೆ ಪಡೆದುಕೊಳ್ಳಲು ಮುಂಜಾನೆಯೇ ಖಾಸಗಿ ಆಸ್ಪತ್ರೆಗಳಿಗೆ ತೆರಳಿದ ಜನರಿಗೆ ಒಪಿಡಿ ಸೇವೆ ಇಲ್ಲದಿರುವ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಸರಿಯಾದ ಮಾಹಿತಿ ಒದಗಿಸದ ಕಾರಣ ಕೆಲವು ಕಡೆಗಳಲ್ಲಿ ಗೊಂದಲ ಉಂಟಾಯಿತು. ನಗರದಲ್ಲಿ ಕೆಲವು ಕ್ಲಿನಿಕ್‌ಗಳು ಮುಚ್ಚಿದ್ದರಿಂದ ರೋಗಿಗಳು ಹತ್ತಿರದಲ್ಲಿಯೇ ಇದ್ದಂತಹ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಬಹುತೇಕ ಕ್ಲಿನಿಕ್‌ಗಳು ತೆರೆದಿದ್ದರಿಂದ ರೋಗಿಗಳಿಗೆ ಯಾವುದೇ ತೊಂದರೆ ಉಂಟಾಗಿಲ್ಲ.