Advertisement

ಸ್ಪಷ್ಟ ಬಹುಮತ ಇದ್ದರಷ್ಟೇ ಮಸೂದೆ ಕಾಯ್ದೆಯಾಗಲಿದೆ: ಶೋಭಾ ಕರಂದ್ಲಾಜೆ

01:26 AM Nov 20, 2021 | Team Udayavani |

ಉಡುಪಿ: ವಿಧಾನ ಪರಿಷತ್‌ನಲ್ಲಿ ಬಹುಮತ ಇದ್ದಾಗ ಮಾತ್ರ ವಿಧಾನಸಭೆಯಲ್ಲಿ ಅಂಗೀಕೃತಗೊಂಡ ಮಸೂದೆಗಳನ್ನು ಸುಲಭವಾಗಿ ಕಾಯ್ದೆ ರೂಪಕ್ಕೆ ತರಬಹುದು. ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕೇಂದ್ರ ಕೃಷಿ (ರಾಜ್ಯಖಾತೆ) ಸಚಿವೆ ಶೋಭಾ ಕರಂದ್ಲಾಜೆ ಅವರು ಸ್ಥಳೀಯ ಸಂಸ್ಥೆಯ ಬಿಜೆಪಿ ಬೆಂಬಲಿತ ಮತದಾರರಿಗೆ ಕರೆ ನೀಡಿದರು.

Advertisement

ಪುರಭವನದಲ್ಲಿ ಶುಕ್ರವಾರ ನಡೆದ ಜನಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಚುನಾವಣೆ ರಾಜ್ಯದ ಮಿನಿ ಸಮರ. ಸರಕಾರದ ಮಸೂದೆಗಳ ಅಂಗೀಕಾರಕ್ಕೆ ಪರಿಷತ್‌ನಲ್ಲೂ ಬಹುಮತ ಬೇಕು. ಬಹುಮತ ಇಲ್ಲದ್ದರಿಂದ ಗೋಹತ್ಯೆ ಮಸೂದೆ ಅಂಗೀಕಾರ ಕಷ್ಟವಾಗಿತ್ತು. ಆದ್ದರಿಂದ ಈ ಚುನಾವಣೆ ಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಈಗ ವಿಶ್ವದ ನಾಯಕರಾಗಿದ್ದಾರೆ. ನುಡಿದಂತೆ ನಡೆಯುತ್ತಿದ್ದಾರೆ. 2023ರಲ್ಲಿ ಕರ್ನಾಟಕ ಹಾಗೂ 2024ರಲ್ಲಿ ಕೇಂದ್ರದಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಎಸ್‌.ಟಿ. ಸೋಮಶೇಖರ್‌ ಮಾತನಾಡಿ, ವಿಧಾನ ಪರಿಷತ್‌ ಕಲಾಪದ ಸಂದರ್ಭ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಹೊಸ ಸಚಿವರನ್ನು ಅನೇಕ ಬಾರಿ ರಕ್ಷಣೆ ಮಾಡಿದ್ದರು. ಮಾನಸಿಕ ಒತ್ತಡದಲ್ಲಿದ್ದ ಸಚಿವರು ಕಲಾಪದಲ್ಲಿ ಚೆನ್ನಾಗಿ ನಿರ್ವಹಣೆ ಮಾಡುವಂತೆ ಹುರಿದುಂಬಿಸಿದ್ದರು. ಅವರಿಲ್ಲದ ಪರಿಷತ್‌ ಕಲಾಪ ಉಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಪ್ರತ್ಯೇಕ ತನಿಖೆ
ಎಲ್ಲ ರೀತಿಯ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಹಂಚಿಕೆ ಕುರಿತ ತನಿಖೆಯನ್ನು ವಿಧಾನ ಪರಿಷತ್‌ ಚುನಾವಣೆ ಮುಗಿದ ಕೂಡಲೇ ಆರಂಭಿಸಲಿದ್ದೇವೆ. ಇದಕ್ಕಾಗಿ ಉಭಯ ಜಿಲ್ಲೆಗಳಿಗೂ ಪ್ರತ್ಯೇಕ ತಂಡ ರಚನೆ ಮಾಡಲಾಗುತ್ತದೆ. ಪ್ರಸ್ತುತ ಸಹಕಾರ ಸಂಘಗಳಲ್ಲಿ ಕೇಳಿದ ಎಲ್ಲರಿಗೂ ಸಾಲ ಸಿಗುತ್ತಿಲ್ಲ. ಮುಂದೆ ಅದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಸೋಮಶೇಖರ್‌ ಹೇಳಿದರು.

Advertisement

ಹಾಲು ಉತ್ಪಾದಕರ ಒಕ್ಕೂಟವನ್ನು ಪ್ರತ್ಯೇಕಿಸುವ ಚರ್ಚೆಯೂ ಆರಂಭವಾಗಿದೆ. ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ ಮೊದಲಾದೆಡೆಗಳಲ್ಲಿ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ಮಾಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ವನಿತಾ ಹಾಕಿ; ರಾಣಿಗೆ ವಿಶ್ರಾಂತಿ ಸವಿತಾ ಪುನಿಯಾ ಭಾರತದ ನಾಯಕಿ

ಸಚಿವ ಎಸ್‌. ಅಂಗಾರ, ಬಿಜೆಪಿ ಸಂಭಾವ್ಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ, ರಾಜ್ಯ ಕಾರ್ಯದರ್ಶಿ ವಿನಯ್‌ ಬಿದರೆ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಶಾಸಕರಾದ ಸುಕುಮಾರ ಶೆಟ್ಟಿ, ಉಮಾನಾಥ ಕೋಟ್ಯಾನ್‌, ಲಾಲಾಜಿ ಆರ್‌. ಮೆಂಡನ್‌, ಕೆ. ರಘುಪತಿ ಭಟ್‌, ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ಶಂಕರಪ್ಪ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ ಉಪಸ್ಥಿತರಿದ್ದರು.

ರಾಷ್ಟ್ರಪತಿ ಆಯ್ಕೆಯಲ್ಲಿ ಸಂಸದರು, ವಿಧಾನ ಪರಿಷತ್‌ ಸದಸ್ಯರ ಆಯ್ಕೆಯಲ್ಲಿ ಶಾಸಕರು ತಪ್ಪು ಮಾಡುತ್ತಾರೆ. (ಅಡ್ಡ ಮತದಾನ). ಆದರೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಈ ತಪ್ಪು ಮಾಡಬಾರದು.
– ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿಗೆ ಮಾನವ ದಿನಗಳ ಸೃಜನೆ ಹೆಚ್ಚಾಗಿದೆ. ಭ್ರಷ್ಟಾ ಚಾರಕ್ಕೆ ಕಡಿವಾಣ ಹಾಕಲಾಗಿದೆ. ಕೇಂದ್ರ ಸರಕಾರದಿಂದ ಬರುವ ಅನುದಾನವೂ ಹೆಚ್ಚಾಗಿದೆ. 2025ಕ್ಕೆ ದೇಶದ ಪ್ರತಿಯೊಬ್ಬರಿಗೂ ಸೂರು ಒದಗಿಸಲು ಸರಕಾರ ಬದ್ಧವಾಗಿದೆ. ಹೊಸ ಶಿಕ್ಷಣ ನೀತಿ ಶೈಕ್ಷಣಿಕ ಹಾಗೂ ಔದ್ಯೋಗಿಕ ರಂಗದಲ್ಲಿ ಹಲವು ಬದಲಾವಣೆ ತರಲಿದೆ.
ಡಿ.ವಿ. ಎಸ್‌. ಮಾಜಿ ಕೇಂದ್ರ ಸಚಿವ

ಚುನಾವಣೆ ಸಂದರ್ಭ ವಿರೋಧಿಗಳು ಆಮಿಷ, ಅಪಪ್ರಚಾರದ ಜತೆಗೆ ಜಾತಿ, ಹಣದ ವಿಚಾರವಾಗಿಯೂ ಆಮಿಷ ಒಡ್ಡುತ್ತಾರೆ. ಗ್ರಾ.ಪಂ. ಸಹಿತವಾಗಿ ಸ್ಥಳೀಯ ಸಂಸ್ಥೆಗಳು ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಹಾಗೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಕಾರ್ಯಕರ್ತರು ಹಲವು ರೀತಿಯಲ್ಲಿ ಶ್ರಮಿಸಿದ್ದಾರೆ. ಅದರ ಫ‌ಲವಾಗಿ ನೀವುಗಳು ಸದಸ್ಯರಾಗಿದ್ದೀರಿ. ಈಗ ನೀವು ಬಿಜೆಪಿ ಅಭ್ಯರ್ಥಿಯನ್ನು ಸ್ಪಷ್ಟ ಬಹುಮತದಿಂದ ಗೆಲ್ಲಿಸಿ, ಕಾರ್ಯಕರ್ತರ ಶ್ರಮಕ್ಕೆ ಇನ್ನಷ್ಟು ಶಕ್ತಿ ತುಂಬಬೇಕು.
– ವಿ. ಸುನಿಲ್‌ ಕುಮಾರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next