ಬೆಂಗಳೂರು: ಕನ್ನಡ ಭಾಷೆ, ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಲಾವಿದರನ್ನು ಉಳಿಸಲು ಪೂರಕವಾಗುವಂತೆ ರಾಜ್ಯ ಸರ್ಕಾರ ಡಬ್ಬಿಂಗ್ ವಿರುದ್ಧ ಮಸೂದೆಯನ್ನು ತರಬೇಕು ಎಂದು ವಾಟಾಳ್ ಒತ್ತಾಯಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬ್ಬಿಂಗ್ ವಿರೋಧಿಸಿ ಮಾರ್ಚ್ 9ರಂದು ಕನ್ನಡ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಸಿನಿಮಾ ಹಾಗೂ ಕಿರುತೆರೆಯ ಕಲಾವಿದರು ಈ ಪ್ರತಿಭಟನೆಯಲ್ಲಿ ತಪ್ಪದೆ ಪಾಲ್ಗೊಳ್ಳಬೇಕೆಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
“ಈ ಹಿಂದೆ ಮಾರ್ಚ್ 11 ರಂದು ಪ್ರತಿಭಟನೆ ನಡೆಸುವುದಾಗಿ ಹೇಳಲಾಗಿತ್ತು. ಆದರೆ, ಅಂದು ಐದು ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬೀಳುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮಾರ್ಚ್ 9ರಂದು ಹಮ್ಮಿಕೊಳ್ಳಲಾಗಿದೆ. ಅಂದು ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂ ಪಾರ್ಕ್‌ವರೆಗೂ ಮೆರವಣಿಗೆ ನಡೆಯಲಿದೆ. ಪ್ರತಿಭಟನೆಯಲ್ಲಿ ಕನ್ನಡ ಚಿತ್ರರಂಗದ ನಟ, ನಟಿಯರು, ಕಿರುತೆರೆಯ ಕಲಾವಿದರು, ತಂತ್ರಜ್ಞರು ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಪ್ರತಿಭಟನೆ ಕುರಿತು ಚರ್ಚಿಸಲು ಮಾರ್ಚ್ 6ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಗೆ ಕನ್ನಡದ ಸಿನಿಮಾ ಕಲಾವಿದರು, ಕಿರುತೆರೆಯ ನಟ,ನಟಿಯರು ತಪ್ಪದೆ ಭಾಗವಹಿಸಬೇಕು. ಯಾವೊಬ್ಬ ನಟರು, ತಂತ್ರಜ್ಞರು ತಪ್ಪಿಸುವಂತಿಲ್ಲ. ಈ ಪ್ರತಿಭಟನೆಯಿಂದ ಏನೂ ಆಗುವುದಿಲ್ಲ ಅಂದುಕೊಂಡು ಮನೆಯಲ್ಲಿ ಕೂರದೆ, ಸಭೆಗೆ ಆಗಮಿಸಿ, ತಮ್ಮ ಅಭಿಪ್ರಾಯ ಮಂಡಿಸಿ, ಬೃಹತ್ ಪ್ರತಿಭಟನಾ ಮೆರವಣಿಗೆಗೆ ಬೆಂಬಲ ನೀಡಬೇಕು ಎಂದರು.
ಹಂಚಿಕೆ ಪಾಳೆಗಾರಿಕೆ ವಿರುದ್ಧವೂ ಹೋರಾಟ: ಕನ್ನಡ ಸಿನಿಮಾಗಳ ಹಂಚಿಕೆಯಲ್ಲಿ ಪಾಳೆಗಾರಿಕೆ ಇದೆ. ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗೆ ಜಾಗ ಮಾಡಿಕೊಡದೆ, ಪರಭಾಷೆ ಚಿತ್ರಗಳಿಗೆ ಮಣೆ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂಚಿಕೆ ಪಾಳೆಗಾರಿಕೆ ವಿರುದ್ಧವೂ ಕನ್ನಡ ಒಕ್ಕೂಟ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕನ್ನಡ ಸೇನೆ ಅಧ್ಯಕ್ಷ ಕುಮಾರ್, ಕನ್ನಡ ಒಕ್ಕೂಟದ ಗಿರೀಶ್‌ಗೌಡ ಮತ್ತಿತರರು ಇದ್ದರು.