Advertisement

ಕ್ಷೇತ್ರ ದೊಡ್ಡದಾಗಿರುವುದೇ ದೊಡ್ಡ ಸಮಸ್ಯೆ

12:15 PM Apr 08, 2018 | |

ಬೆಂಗಳೂರು: ಅತ್ತ ಬೆಂಗಳೂರು ನಗರವೂ ಅಲ್ಲ, ಇತ್ತ ಗ್ರಾಮಾಂತರವೂ ಅಲ್ಲದ ಸ್ಥಿತಿಯಲ್ಲಿರುವ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ರಾಜ್ಯದ ಅತಿ ದೊಡ್ಡ ಮತ್ತು ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ. ಅದಕ್ಕೆ ತಕ್ಕಂತೆ ಕ್ಷೇತ್ರದಲ್ಲಿ ಸಮಸ್ಯೆಗಳೂ ಅಗಾಧವಾಗಿವೆ. ಹಾಗೇ ಇತ್ತೀಚೆಗೆ ಕ್ಷೇತ್ರ ಸಾಕಷ್ಟು ಪ್ರಗತಿ ಕಾಣುತ್ತಿದೆ.

Advertisement

ಬಿಬಿಎಂಪಿ ವ್ಯಾಪ್ತಿಯ ಏಳೂವರೆ ವಾರ್ಡ್‌ಗಳು ಮಾತ್ರವಲ್ಲದೆ, ಜಿಗಣಿ ಪುರಸಭೆಯ 14 ವಾರ್ಡ್‌ಗಳು, ಹೆಬ್ಬಗೋಡಿ ನಗರಸಭೆಯ 6 ವಾರ್ಡ್‌ಗಳು, 8 ಜಿ.ಪಂ ಕ್ಷೇತ್ರಗಳು, 9 ಗ್ರಾ.ಪಂ.ಗಳನ್ನು ಒಳಗೊಂಡಿರುವ ಕ್ಷೇತ್ರದ ಕೆಲ ಭಾಗ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುವುದೇ ದೊಡ್ಡ ಸಮಸ್ಯೆ.

ಹಾಗೆಂದು ಕ್ಷೇತ್ರದೆಲ್ಲೆಡೆ ಸಮಸ್ಯೆಗಳೇ ಇವೆ ಎಂದು ಹೇಳುವಂತಿಲ್ಲ. ಸಾಕಷ್ಟು ವ್ಯವಸ್ಥಿತ ಬಡಾವಣೆಗಳು, ಅಪಾರ್ಟ್‌ಮೆಂಟ್‌ಗಳಿವೆ. ಮತ್ತಷ್ಟು ಗಗನಚುಂಬಿ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗುತ್ತಿವೆ. ಪ್ರಮುಖ ಪ್ರದೇಶಗಳಲ್ಲಿ ಡಬಲ್‌ ರೋಡ್‌ಗಳಿದ್ದು, ಪಂಚಾಯ್ತಿ ವ್ಯಾಪ್ತಿಗಳಲ್ಲೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ರಸ್ತೆ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಅನೇಕ ಕಡೆ ಸಂಚಾರ ಪರದಾಟವಿದೆ.

ಕ್ಷೇತ್ರದಲ್ಲಿ ಪ್ರಮುಖವಾಗಿರುವುದು ನೀರು ಮತ್ತು ಕಸ ವಿಲೇವಾರಿ ಸಮಸ್ಯೆ. ಅದರಲ್ಲೂ ಪಾಲಿಕೆ ಮತ್ತು ನಗರಸಭೆಗಳಿಗೆ ಹೊಂದಿಕೊಂಡಿರುವ ಗ್ರಾ.ಪಂ ವ್ಯಾಪ್ತಿಗಳಲ್ಲಿ ಇದು ಹೆಚ್ಚಾಗಿದೆ. ಪ್ರಸ್ತುತ ಕಾವೇರಿ ನೀರು ಪೂರೈಕೆಗೆ ಪೈಪ್‌ಲೈನ್‌ಗಳನ್ನು ಅಳವಡಿಸಿದ್ದರೂ ಇನ್ನೂ ನೀರು ಬಾರದಿರುವುದು ನೀರಿನ ಸಮಸ್ಯೆಗೆ ಪ್ರಮುಖ ಕಾರಣ.

ಇನ್ನು ಡಂಪಿಂಗ್‌ ಯಾರ್ಡ್‌ ಸಮಸ್ಯೆ ಆಗಾಗ ತೀವ್ರಗೊಂಡು ಕೆಲವೊಮ್ಮೆ ಕಸ ವಿಲೇವಾರಿ ಸಮಸ್ಯೆ ತಲೆದೋರುತ್ತದೆ. ಹೀಗಾದಾಗ ಬೆಟ್ಟದ ಮೇಲಿನ ಬಡಾವಣೆ ನಿವಾಸಿಗಳು ಕಸವನ್ನು ಕೆಳಗೆ ಸುರಿಯುತ್ತಿದ್ದಾರೆ. ಉದಾಹರಣೆಗೆ ವಸತಂಪುರ ವಾರ್ಡ್‌ ವ್ಯಾಪ್ತಿಯ ಬೆಟ್ಟದ ಮೇಲಿನ ಬಡಾವಣೆಯ ಕಸ ಕೆಳಗೆ ಸುರಿದಿರುವುದರಿಂದ ತ್ಯಾಜ್ಯದ ಕಾಂಪೌಂಡ್‌ ನಿರ್ಮಿಸಿದಂತೆ ಕಾಣುತ್ತದೆ.

Advertisement

ಉತ್ತರಹಳ್ಳಿ, ಯಳಚೇನಹಳ್ಳಿ, ಬೇಗೂರು, ಕೊಟ್ಟಿಗೆರೆ, ಕೋಣನಕುಂಟೆ, ಅಂಜನಾಪುರ, ವಸಂತಪುರ ವಾರ್ಡ್‌ಗಳು ಮತ್ತು ಸಿಂಗಸಂದ್ರ ವಾರ್ಡ್‌ನ ಅರ್ಧ ಭಾಗ ಹೊಂದಿರುವ ಈ ಕ್ಷೇತ್ರದಲ್ಲಿ ಆರು ಬಿಜೆಪಿ ಮತ್ತು ಇಬ್ಬರು ಕಾಂಗ್ರೆಸ್‌ ಕಾರ್ಪೊರೇಟರ್‌ಗಳಿದ್ದಾರೆ. 8 ಜಿ.ಪಂ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್‌ ಸದಸ್ಯರಿದ್ದಾರೆ.

ಕ್ಷೇತ್ರದ ಬೆಸ್ಟ್‌ ಏನು?: ಅಭಿವೃದ್ಧಿ ಮತ್ತು ಮೂಲ ಸೌಕರ್ಯ ದೃಷ್ಟಿಯಿಂದ ಕೋಣನಕುಂಟೆ ವಾರ್ಡ್‌ ವ್ಯಾಪ್ತಿಯ ಶ್ರೀನಿಧಿನಗರ ಅತ್ಯುತ್ತಮ ಬಡಾವಣೆಗಳಲ್ಲಿ ಒಂದು ಎಂಬ ಖ್ಯಾತಿ ಹೊಂದಿದೆ. ಕ್ಷೇತ್ರದ ಎಲ್ಲ ದೇವಸ್ಥಾನಗಳೂ ಅಭಿವೃದ್ಧಿಯಾಗಿವೆ. ಪ್ರಮುಖ ಪ್ರದೇಶಗಳಲ್ಲಿ ದ್ವಿಮುಖ ರಸ್ತೆಗಳನ್ನು ನಿರ್ಮಿಸಲಾಗಿದೆ. ಕ್ಷೇತ್ರದ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲೂ ಒಳಚರಂಡಿ ವ್ಯವಸ್ಥೆ ಇರುವುದು ವಿಶೇಷ.

ಕ್ಷೇತ್ರದ ದೊಡ್ಡ ಸಮಸ್ಯೆ?: ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವುದು, ಅತಿ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಕ್ಷೇತ್ರವಾಗಿರುವುದೇ ಬಹುದೊಡ್ಡ ಸಮಸ್ಯೆ. ಡಂಪಿಂಗ್‌ ಯಾರ್ಡ್‌ ಸಮಸ್ಯೆಯಿಂದಾಗಿ ಆಗಾಗೆ ಕಸ ವಿಲೇವಾರಿ ಅಸ್ತವ್ಯಸ್ತಗೊಳ್ಳುತ್ತದೆ. ಅಭಿವೃದ್ಧಿ ಕೆಲಸಗಳಲ್ಲೂ ಸಣ್ಣ ಪುಟ್ಟ ರಾಜಕೀಯ ಇರುವುದರಿಂದ ಕೆಲಸ ಆರಂಭವಾದರೂ ಪೂರ್ಣಗೊಂಡಿರದ ಹಲವು ನಿದರ್ಶನಗಳು ಕಣ್ಣಿಗೆ ರಾಚುತ್ತವೆ

ಕ್ಷೇತ್ರ ಮಹಿಮೆ: ಕ್ಷೇತ್ರದಲ್ಲಿ ಕೈಗಾರಿಕೆ, ಸಿದ್ಧ ಉಡುಪು ತಯಾರಿಕೆ ಕಂಪನಿಗಳು ಹೆಚ್ಚಾಗಿದ್ದು, ಕಾರ್ಮಿಕ ವರ್ಗ ಹೆಚ್ಚು ವಾಸಿಸುವ ಕಾಲೋನಿಗಳಿವೆ. ಒಂದು ಕಾಲದಲ್ಲಿ  ಹೆಚ್ಚು ಕೆರೆಗಳಿದ್ದ ಕ್ಷೇತ್ರದಲ್ಲಿ ಈಗ ಕೆರೆಗಳು ಮಾಯವಾಗಿ ಅಪಾರ್ಟ್‌ಮೆಂಟ್‌ಗಳು, ಗಗನ ಚುಂಬಿ ಕಟ್ಟಡಗಳು ಹೆಚ್ಚಿವೆ.

ಹಿಂದಿನ ಫ‌ಲಿತಾಂಶ
-ಎಂ.ಕೃಷ್ಣಪ್ಪ (ಬಿಜೆಪಿ)- 102207
-ಆರ್‌.ಪ್ರಭಾಕರರೆಡ್ಡಿ (ಜೆಡಿಎಸ್‌)- 72045 
-ಡಾ.ತೇಜಸ್ವಿನಿ ಗೌಡ (ಕಾಂಗ್ರೆಸ್‌)- 63849

ಶಾಸಕರು ಏನಂತಾರೆ?
ಬಿಬಿಎಂಪಿ ಮತ್ತು ಸರ್ಕಾರದಿಂದ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹಳ್ಳಿಗಳಲ್ಲೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿದ್ದು, ಕಾವೇರಿ ನೀರು ಪೂರೈಸಲು ಪೈಪ್‌ಲೈನ್‌ ಕಾರ್ಯ ಪೂರ್ಣಗೊಂಡಿದೆ. ರಸ್ತೆಗಳ ವಿಸ್ತರಿಸಿ ಸಂಚಾರ ಸಮಸ್ಯೆಗೆ ಪರಿಹಾರ ಒದಗಿಸುವ ಆಸೆಯಿದೆಯಾದರೂ ಪಾಲಿಕೆ ಟಿಡಿಆರ್‌ ಕೊಡದ ಕಾರಣ ಸಾಧ್ಯವಾಗುತ್ತಿಲ್ಲ.
-ಎಂ.ಕೃಷ್ಣಪ್ಪ

ಟಿಕೆಟ್‌ ಆಕಾಂಕ್ಷಿಗಳು
-ಬಿಜೆಪಿ- ಎಂ.ಕೃಷ್ಣಪ್ಪ
-ಕಾಂಗ್ರೆಸ್‌- ಶುಷ್ಮಾ ರಾಜಗೋಪಾಲ್‌, ಆರ್‌.ಕೆ.ರಮೇಶ್‌ ಅಥವಾ ಹೊಸ ಮುಖ
-ಜೆಡಿಎಸ್‌- ಆರ್‌.ಪ್ರಭಾಕರರೆಡ್ಡಿ

ಜನ ದನಿ
ವಸಂತಪುರ ವಾರ್ಡ್‌ನಲ್ಲಿ ಕಸ ಮತ್ತು ನೀರಿನ ಸಮಸ್ಯೆ ವ್ಯಾಪಕವಾಗಿದೆ. ಒಳಚರಂಡಿ ವ್ಯವಸ್ಥೆ ಕಾಮಗಾರಿ ನಡೆದಿರುವುದು ಉತ್ತಮ ಬೆಳೆವಣಿಗೆ. ಆದರೆ, ರಸ್ತೆಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ಶೀಘ್ರ ಸರಿಪಡಿಸಬೇಕು.
-ಶಶಿಕುಮಾರ್‌ ವೈ.ಎಸ್‌.

ಆಯಕಟ್ಟಿನ ಜಾಗದಲ್ಲಿ ಸಿಸಿಟಿವಿ ಹಾಕಿರುವುದರಿಂದ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಆದರೆ, ಆಟದ ಮೈದಾನಗಳೇ ಇಲ್ಲದಿರುವುದರಿಂದ ಯುವಕರಿಗೆ ಸಮಸ್ಯೆಯಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಪಾರ್ಕ್‌ಗಳು ಬೇಕು.
-ಅರುಣ್‌ ಕುಮಾರ್‌

ಬೇಗೂರಿನಲ್ಲಿ ರಸ್ತೆಗಳು, ತ್ಯಾಜ್ಯ ವಿಲೇವಾರಿ ಸಮಾಧಾನಕರವಾಗಿದೆ. ಆದರೆ, ನೀರಿನ ಸಮಸ್ಯೆ ತೀವ್ರವಾಗಿದ್ದು, ಜನ ಹಣ ನೀಡಿ ಟ್ಯಾಂಕರ್‌ ಮೂಲಕ ತರಿಸಿಕೊಳ್ಳುವ ಸ್ಥಿತಿಯಿದೆ. ಮೈದಾನ ಮತ್ತು ಉದ್ಯಾನವನ ಅಗತ್ಯವಿದೆ.
-ದಿನೇಶ್‌

ನಮ್ಮ ವಾರ್ಡ್‌ ಶ್ರೀನಿಧಿ ಬಡಾವಣೆ ಪಕ್ಕದಲ್ಲೇ ಇದೆ. ಆ ಬಡಾವಣೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಆದರೆ, ಮಳೆ ಬಂದರೆ ನಮ್ಮ ಇಡೀ ಪ್ರದೇಶ ಕೊಚ್ಚೆಯಾಗುತ್ತದೆ. ಮನೆಗಳಿಗೆ ನೀರು ನುಗ್ಗುತ್ತದೆ. ಕಾವೇರಿ ನೀರು ಬರುತ್ತಿಲ್ಲ.
-ಸರೋಜಾ ದೇವಿ

* ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next