ಬೆಳ್ತಂಗಡಿ: ತಾಲೂಕಿನ ಎಲ್ಲ ಸರಕಾರಿ ಶಾಲಾ -ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದ್ದು ಇದರ ಹಿಂದಿರುವ ಶಿಕ್ಷಕರ, ಉಪನ್ಯಾಸಕರ ಶ್ರಮ ಪ್ರಶಂಸನೀಯ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ನಡ ಸರಕಾರಿ ಪ.ಪೂ. ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಎಲ್ಲ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ನಡ ಕಾಲೇಜು ತಾಲೂಕಿನಲ್ಲಿ ಉತ್ತಮ ಕಾಲೇಜುಗಳಲ್ಲೊಂದು. ಶಿಕ್ಷಕರ ಶ್ರಮ, ಹೆತ್ತವರ ಪ್ರೋತ್ಸಾಹ ಇದ್ದಲ್ಲಿ ಎಲ್ಲ ಸರಕಾರಿ ಶಾಲೆಗಳು ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು ತಿಳಿಸಿದರು.
ಇದೇ ಸಂದರ್ಭ ಶಾಲೆಯ ಮೂಲ ಸೌಕರ್ಯಕ್ಕಾಗಿ ಶಾಸಕರಿಗೆ ಮನವಿ ನೀಡಲಾಯಿತು. ನಡ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ. ರಾಜಶೇಖರ ಅಜ್ರಿ, ನಡ ಗ್ರಾಮಪಂಚಾಯತ್ ಉಪಾಧ್ಯಕ್ಷ ಸುಧಾಕರ್, ಸದಸ್ಯರಾದ ಯತೀಶ್ ಗೌಡ, ಸುಧಾ, ವೇದಾವತಿ, ಮಂಜುಳಾ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ವಿಟ್ಠಲ ಶೆಟ್ಟಿ ನಡ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಪುರಸ್ಕಾರ ನೀಡಲಾಯಿತು. ಸಾಂಸ್ಕೃತಿಕ ಸ್ಪರ್ಧೆ ಹಾಗೂ ಆಟೋಟ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ಕಾಲೇಜು ಪ್ರಾಚಾರ್ಯೆ ಲಿಲ್ಲಿ ಪಿ.ವಿ. ಸ್ವಾಗತಿಸಿದರು. ಬೆಳ್ತಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಮುನಿರಾಜ ಅಜ್ರಿ ಪ್ರಸ್ತಾವಿಸಿದರು. ಉಪನ್ಯಾಸಕಿ ವಸಂತಿ ಪಿ. ವರದಿ ವಾಚಿಸಿದರು.
ಉಪನ್ಯಾಸಕಿ ಪವಿತ್ರಾ ದತ್ತಿ ನಿಧಿ ಪುರಸ್ಕಾರದ ಪಟ್ಟಿಯನ್ನು, ಉಪನ್ಯಾಸಕಿ ನವಿನಾಕ್ಷಿ ಸಾಂಸ್ಕೃತಿಕ ಸ್ಪರ್ಧಾ ಪಟ್ಟಿ ವಾಚಿಸಿದರು. ಉಪನ್ಯಾಸಕರಾದ ಮೋಹನ ಗೌಡ ಕಾರ್ಯಕ್ರಮ ನಿರೂಪಿಸಿ, ಜಯಲಕ್ಷ್ಮೀ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮೂಲ ಸೌಕರ್ಯಕ್ಕೆ ಅನುದಾನ ಶೀಘ್ರ ಮಂಜೂರು
ಕಾಲೇಜಿನ ಮೂರು ಕೊಠಡಿಗೆ ಹಾಗೂ ಬಾಲಕರ ಶೌಚಾಲಯ ನಿರ್ಮಾಣಕ್ಕಾಗಿ ಮನವಿ ನೀಡಲಾಗಿದ್ದು, ಇದನ್ನು ಸಂಬಂಧ ಪಟ್ಟ ಇಲಾಖೆಗೆ ಕಳುಹಿಸಿ, ಶೀಘ್ರ ಮಂಜೂರಾತಿಗೆ ಪ್ರಯತ್ನಿಸುತ್ತೇನೆ.
– ಕೆ. ವಸಂತ ಬಂಗೇರ, ಶಾಸಕ