Advertisement

ಬೇನಾಮಿ ಆಸ್ತಿ ಕಾಯ್ದೆ ಸೋಲಬಾರದು 

05:11 PM Jun 05, 2018 | Team Udayavani |

ಕಾಳಧನದ ಪ್ರವಾಹ ಮತ್ತು ಹಣಕಾಸು ಸಂಬಂಧಿ ಅಕ್ರಮಗಳು ಹಾಗೂ ಶಿಸ್ತಿನ ಉಲ್ಲಂಘನೆಯನ್ನು ತಡೆಯುವ ದೃಷ್ಟಿಯಿಂದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ತೆಗೆದುಕೊಂಡಿರುವ ಬಹುಮುಖ್ಯ ಕ್ರಮಗಳಲ್ಲಿ ನೋಟು ರದ್ದತಿ ಒಂದು. ಇನ್ನೊಂದು ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು. ನೋಟು ರದ್ದತಿಗಿಂತ ಒಂದು ವಾರ ಮುನ್ನ ಜಾರಿಗೆ ಬಂದಿರು ವ ಈ ಕಾನೂನು ಹಲ್ಲಿಲ್ಲದ ಹಾವಾಗುವ ಸ್ಥಿತಿ ಒದಗಿರುವುದು ಶೋಚನೀಯ. ಈ ಕಾನೂನು ಪರಿಣಾಮವಾಗಿ ಅನುಷ್ಠಾನಗೊಳ್ಳುವಂತೆ ಮಾಡುವ ತುರ್ತು ಈಗ ಸರಕಾರಕ್ಕಿದೆ. 

Advertisement

2016ರ ನವೆಂಬರ್‌ 1ರಂದು ಕೇಂದ್ರ ಸರಕಾರ ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾಯಿದೆಯನ್ನು ಜಾರಿಗೆ ತಂದಿತ್ತು. ಇದರ ಪರಿಣಾಮವಾಗಿ ಮುಟ್ಟುಗೋಲು ಹಾಕಿಕೊಳ್ಳಲಾದ ಸ್ವತ್ತುಗಳು ಈಗ ಅಂತಿಮ ಹಂತದ ತೀರ್ಮಾನಕ್ಕೆ ಕಾದು ಕುಳಿತಿವೆ. ಈ ಹಿಂದೆ ಇದ್ದ ಕಾನೂನನ್ನು ಬಿಗಿಗೊಳಿಸಿದ ಪರಿಣಾಮ ವಾಗಿ 860 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 80 ಪ್ರಕರಣಗಳು ಮಾತ್ರ ಇತ್ಯರ್ಥ  ಗೊಂಡಿದ್ದು, 780 ಹಾಗೆಯೇ ಉಳಿದಿವೆ.

ಸಮಸ್ಯೆಯಾಗಿರುವುದು ಇವುಗಳನ್ನುವಿಲೇವಾರಿ ಮಾಡುವುದಕ್ಕೆ ಬೇಕಾದ ತ್ರಿಸದಸ್ಯ ನಿರ್ಧರಣ ಸಮಿತಿಯನ್ನು ನೇಮಕ ಮಾಡದೆ ಇರುವಲ್ಲಿ. ಕಳೆದ ಒಂದೂವರೆ ವರ್ಷದಿಂದ ಪ್ರಕರಣಗಳು ಇತ್ಯರ್ಥ ಗೊಳ್ಳದೆ ಇವೆ. ಒಂದು ವರ್ಷದೊಳಗೆ ಪ್ರಕರಣಗಳನ್ನು ಅಂತಿಮಗೊಳಿಸದೆ ಇದ್ದರೆ ಅವು ಖುಲಾಸೆಯಾಗಿ ಕಾನೂನಿನ ಆಶಯವೇ ವಿಫ‌ಲವಾಗುತ್ತದೆ. ಯಾವುದೇ ಕಾನೂನನ್ನು ರೂಪಿಸಿ ಜಾರಿಗೊಳಿಸುವುದಕ್ಕೆ ಮುಂಚಿತವಾಗಿ ಅದರ ಜಾರಿಗೆ ಸೂಕ್ತವಾದ ಉಪಕ್ರಮಗಳನ್ನು ನಿರ್ಮಿಸದೆ ಇದ್ದರೆ ಎದುರಾಗುವ ಸಮಸ್ಯೆಗಳಿವು. ನೋಟು ರದ್ದತಿಯ ಸೀಮಿತ ಯಶಸ್ಸಿಗೂ
ಕಾರಣವಾಗಿರುವುದು ಇಂಥದ್ದೇ ಕೊರತೆ. ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ತಕ್ಕ ವ್ಯವಸ್ಥೆಗಳನ್ನು ಮಾಡದೇ ಇದ್ದರೆ ಬೇನಾಮಿ ಆಸ್ತಿ ಮುಟ್ಟುಗೋಲು ಕಾಯಿದೆಯೂ ಇದೇ ಹಾದಿ ಹಿಡಿಯುತ್ತದೆ. ಜಾರಿ ಮತ್ತು ಅನುಷ್ಠಾನ ಹಂತದಲ್ಲಿ ನಡೆಯುವ ಈ ವೈಫ‌ಲ್ಯ ಹಲವು ವಿಧವಾದ ಪಶ್ಚಾತ್‌ ಪರಿಣಾಮಗಳನ್ನು ಉಂಟು ಮಾಡುತ್ತದೆ. ಭ್ರಷ್ಟರು, ಅಪ್ರಾಮಾಣಿಕರು ಇದರಿಂದ ಲಾಭವನ್ನೇ ಹೊಂದುತ್ತಾರೆ. ಅದರ ಜತೆಗೆ ಪ್ರಾಮಾಣಿಕರಿಗೂ ಇದು ನಿರುತ್ಸಾಹ, ನಿರುತ್ತೇಜನವನ್ನು ತಂದೊಡ್ಡಿ ಹತ್ತರ ಜತೆಗೆ ಹನ್ನೊಂದಾಗುವ ಮನೋಸ್ಥಿತಿಯನ್ನು ಉಂಟು ಮಾಡುತ್ತದೆ.

ಇಂತಹ ವೈಫ‌ಲ್ಯಗಳು ನಿಧಾನವಾಗಿ ಎಲ್ಲ ಅಕ್ರಮ, ಭ್ರಷ್ಟಾಚಾರದ ಬಗೆಗೆ ಅಭೇದದ ಸ್ಥಿತಿಯನ್ನು ನಿರ್ಮಾಣ ಮಾಡುತ್ತವೆ. ಇದೆಲ್ಲದಕ್ಕಿಂತ ಮಿಗಿಲಾದ ಅಪಾಯ ಇಂತಹ ವೈಫ‌ಲ್ಯಗಳು ಜನಮಾನಸದಲ್ಲಿ ಉಂಟು ಮಾಡಬಹುದಾದ ಸಿನಿಕತನ. ಎಲ್ಲ ಸರಕಾರಗಳ ಬಗ್ಗೆ ಜನರು ಅಪಾರ ನಿರೀಕ್ಷೆ ಹೊಂದಿರುತ್ತಾರೆ. ಅದರಲ್ಲೂ ಭ್ರಷ್ಟಾಚಾರ, ಕಾಳಧನದ ವಿಚಾರದಲ್ಲಿ ಮೋದಿ ಸರಕಾರದ ಬಗ್ಗೆ ತುಂಬು ಆಶಯದಿಂದಿದ್ದಾರೆ. ಅವುಗಳನ್ನು ತಡೆಯುವ ಕಾನೂನು ಕ್ರಮಗಳು ಒಂದರ ಮೇಲೊಂದು ಅನುಷ್ಠಾನ ಹಂತದಲ್ಲಿ ವಿಫ‌ಲವಾದರೆ ಎಲ್ಲ ಸರಕಾರಗಳಂತೆ ಇದೂ ಒಂದು ಎಂಬ ಭಾವನೆ ಜನರಲ್ಲಿ ಮೂಡಿತಾದರೆ ಅದಕ್ಕಿಂತ ದೊಡ್ಡ ಅಪಾಯ ಇನ್ನೊಂದಿಲ್ಲ. ಈ ಎಲ್ಲ ಕಾರಣಗಳಿಂದ ಬೇನಾಮಿ ಆಸ್ತಿ ಮುಟ್ಟುಗೋಲು ಕಾಯಿ ದೆಯ ಮೂಲಕ ವಶವಾದ ಆಸ್ತಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಬೇಕಾದ ವ್ಯವಸ್ಥೆಗಳನ್ನು ಸರಕಾರ ತುರ್ತಾಗಿ ರೂಪಿಸಬೇಕು. ಮುಂದಿನ ದಿನಗಳಲ್ಲೂ ಅನುಷ್ಠಾನ ವ್ಯವಸ್ಥೆಗಳನ್ನು ಸೂಕ್ತವಾಗಿ ರೂಪಿಸಿಯೇ ಕಾನೂನುಗಳ ಜಾರಿಗೆ ಮುಂದಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next