ಉಡುಪಿ: “ಉದಯವಾಣಿ’ ದೈನಿಕದ 50ನೇ ವರ್ಷದ ಸಂಭ್ರಮವನ್ನು ಬುಧವಾರ ಮಣಿಪಾಲದ ಉದಯವಾಣಿ ಆಡಳಿತ ಕಚೇರಿಯಲ್ಲಿ ಆಚರಿಸಲಾಯಿತು.ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಆಡಳಿತ ನಿರ್ದೇಶಕ ಟಿ. ಸತೀಶ್ ಯು. ಪೈ, “ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ, ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಕಾರ್ಯನಿರ್ವಾಹಕ ನಿರ್ದೇಶಕ ಟಿ. ಗೌತಮ್ ಪೈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
“ಉದಯವಾಣಿ’ ದೈನಿಕವು ಕಳೆದ 49 ವರ್ಷಗಳಲ್ಲಿ ಕರಾವಳಿ ಪ್ರದೇಶದ ಶಿಕ್ಷಣ, ಸಂಸ್ಕೃತಿ, ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದೆ. ನಮ್ಮ ಸಂಸ್ಥೆಯ ಮೇಲೆ ಗರಿಷ್ಠ ವಿಶ್ವಾಸವನ್ನು ಜನರು ಇರಿಸಿದ್ದಾರೆ. ಇಷ್ಟು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಬದಲಾವಣೆಗೆ ತಕ್ಕಂತೆ ನಾವೂ ಪುನರವಲೋಕನ ನಡೆಸಿ ಮುಂದಿನ 50 ವರ್ಷಗಳ ದೃಷ್ಟಿಯಲ್ಲಿರಿಸಿಕೊಂಡು ಕಾರ್ಯಾಚರಿಸಬೇಕಾಗಿದೆ ಎಂದು ಗೌತಮ್ ಪೈ ಕರೆ ನೀಡಿದರು.
“ಉದಯವಾಣಿ’ಯು ಸಮಾಜದ ಹಿತವನ್ನೇ ಇರಿಸಿಕೊಂಡು ಬೆಳೆದಿದೆ. 50 ವರ್ಷವೆಂದರೆ ಮಧ್ಯವಯಸ್ಸು. ಈಗ ಮತ್ತಷ್ಟು ಪ್ರಬುದ್ಧತೆ, ತಾಳ್ಮೆ ಮೈಗೂಡುವ ಸಮಯ. ಸಹನೆ ಮತ್ತು ಸಾಮಾಜಿಕ ಕಾಳಜಿಯೇ ಪತ್ರಿಕೆಯ ವಿಶ್ವಾಸಾರ್ಹತೆ ಮತ್ತು ಬೆಳವಣಿಗೆಗೆ ಕಾರಣವಾಗಿದೆ. ಇದುವರೆಗಿನ ಸಾಧನೆ ಸಾಧ್ಯವಾದುದು ಸಿಬಂದಿಯ ಸಹಕಾರದಿಂದ. ಇದೇ ರೀತಿ ಸಂಸ್ಥೆಯು ಅಭಿವೃದ್ಧಿ ಹೊಂದಲಿ ಎಂದು
ಡಾ| ಸಂಧ್ಯಾ ಪೈ ಶುಭ ಹಾರೈಸಿದರು.
ಕರಾವಳಿ ಕರ್ನಾಟಕದ ಸಾಂಸ್ಕೃತಿಕ, ಸಾಮಾಜಿಕ ಅಭಿವೃದ್ಧಿಗೆ ವೇದಿಕೆಯಾಗಿ ಉದಯವಾಣಿ ಕಾರ್ಯಾಚರಿಸಿದೆ. ಟಿ. ಸತೀಶ್ ಪೈ, ಟಿ. ಮೋಹನದಾಸ ಪೈ ಅವರು ಸಂಸ್ಥೆಯನ್ನು ಕಟ್ಟಿ ಬೆಳೆಸುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಗಣನೀಯವಾದ ಪ್ರಭಾವ ಬೀರಿದರು. 50 ವರ್ಷಗಳ ಹಿಂದೆಯೇ ಸ್ಥಾಪಕರು ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿದ್ದರು. ಇದೇ ಕಾರಣಕ್ಕಾಗಿ ಲಕ್ಷಾಂತರ ಓದುಗರ ಮನವನ್ನು ಉದಯವಾಣಿ ಸೆಳೆದಿದೆ. ಆರಂಭದಿಂದಲೂ ಜಾಹೀರಾತುದಾರರು ಸಹಕಾರ ಕೊಟ್ಟಿದ್ದಾರೆ. ಸಾವಿರಾರು ಸಿಬಂದಿಗೆ ಉದ್ಯೋಗ ಕಲ್ಪಿಸಿದೆ. ಸ್ಥಾಪಕರ ಉದ್ದೇಶದಂತೆ ಗೌತಮ್ ಪೈಯವರು ಸಂಸ್ಥೆಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಬದಲಾವಣೆ, ಜೀವನಶೈಲಿಯ ಬದಲಾವಣೆಯನ್ನು ಗಮನದಲ್ಲಿರಿಸಿಕೊಂಡು ಸಂಸ್ಥೆಯನ್ನು ಮುನ್ನಡೆಸಬೇಕಾಗಿದೆ. ಇದೊಂದು ಅನೌಪಚಾರಿಕ ಕಾರ್ಯಕ್ರಮವಷ್ಟೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಮಾರಂಭವನ್ನು ಏರ್ಪಡಿಸಲಾಗುವುದು ಎಂದು ಸಂಸ್ಥೆಯ ಸಿಇಒ ವಿನೋದ್ ಕುಮಾರ್ ಪ್ರಸ್ತಾವನೆಯಲ್ಲಿ ತಿಳಿಸಿದರು.
“ಉದಯವಾಣಿ’ಯ 50ನೇ ವರ್ಷದ ಸಂಭ್ರಮವನ್ನು ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಆಡಳಿತ ನಿರ್ದೇಶಕ ಟಿ. ಸತೀಶ್ ಯು. ಪೈ ಉದ್ಘಾಟಿಸಿದರು.