ವರದಿ: ಕೆ. ನಿಂಗಜ್ಜ
ಗಂಗಾವತಿ: ತಾಲೂಕಿನ ಆನೆಗೊಂದಿ ಕಿಷ್ಕಿಂದಾ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಜಲಪಾತಗಳು ಸೃಷ್ಟಿಯಾಗಿದ್ದು, ಇಲ್ಲಿಯ ಪ್ರಕೃತಿ ಸೌಂದರ್ಯವನ್ನು ಹೆಚ್ಚಳ ಮಾಡಿವೆ.
ವಾಲಿಕಿಲ್ಲಾ ಹತ್ತಿರದ ಜಂಜೀರ್ ಬೆಟ್ಟದ ಮೇಲಿಂದ ಬೀಳುವ ಮಳೆ ನೀರಿನಿಂದಾಗಿ ಹಲವು ಫಾಲ್ಸ್‌ಗಳು ಸೃಷ್ಟಿಯಾಗಿದ್ದು ಇಲ್ಲಿಗೆ ಆಗಮಿಸುವ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಈ ಭಾಗದ ದೇಗುಲಗಳಲ್ಲಿ ದರ್ಶನಕ್ಕೆ ನಿಷೇಧವಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗರು ಫಾಲ್ಸ್‌ಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಜಂಜೀರ್ ಬೆಟ್ಟ ಅತ್ಯಂತ ಎತ್ತರವಾಗಿದ್ದು, ಬೃಹತ್ ಬಂಡೆಗಳಿಂದ ಕೂಡಿದೆ.
ಮುನಿರಾಬಾದ್ -ಗಂಗಾವತಿ ರಸ್ತೆ ಮಾರ್ಗಕ್ಕೆ ಈ ಬೆಟ್ಟ ಹೊಂದಿಕೊಂಡಿದ್ದು, ಬೆಟ್ಟದ ಕೆಳಗೆ ಎತ್ತರದ ತಾಳೆ ಮರಗಳಿವೆ. ಬೆಟ್ಟದ ಮೇಲಿಂದ ಬೀಳುವ ಮಳೆ ನೀರು ಜೋಗಫಾಲ್ಸ್‌ನ್ನು ನೆನಪಿಸುತ್ತಿದೆ. ವಿರೂಪಾಪುರಗಡ್ಡಿಯಲ್ಲಿರುವ ರಾಮ್ ಬೀಳು ಪ್ರದೇಶದ ಋಷಿಮುಖ ಪರ್ವತ, ದ್ವಾಮಾರಾಕುಂಟಿ, ಜಂಗ್ಲಿ ರಂಗಾಪೂರ, ಸಾಣಾಪೂರ ಕೆರೆ ಹಿಂಭಾಗದ ಬೆಟ್ಟಗಳಲ್ಲಿಯೂ ಮಳೆಗಾಲದಲ್ಲಿ ವೇಳೆ ಅನೇಕ ಜಲಪಾತಗಳು ಸೃಷ್ಟಿಯಾಗುತ್ತವೆ. ಇವುಗಳ ವೀಕ್ಷಣೆಗೆ ಅನೇಕ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ವಾರಾಂತ್ಯದ ರಜೆ ನೆಪದಲ್ಲಿ ಇಲ್ಲಿಗೆ ಬರುವ ಐಟಿ, ಬಿಟಿ ಉದ್ಯೋಗಿಗಳು ಸಾಣಾಪೂರ, ಹನುಮನಹಳ್ಳಿ, ಜಂಗ್ಲಿ ರಂಗಾಪೂರ, ಅಂಜಿನಳ್ಳಿ, ಹೊಸಪೇಟೆ, ನಾರಾಯಣಪೇಟೆ, ಗಂಗಾವತಿ ಆನೆಗೊಂದಿ ಭಾಗದಲ್ಲಿರುವ ರೆಸಾರ್ಟ್ ಗಳಲ್ಲಿ ತಂಗಿ ಸುತ್ತಲಿನ ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಾರೆ. ಮಳೆಗಾಲವಾಗಿದ್ದರಿಂದ ಕಿಷ್ಕಿಂದಾ ಏಳು ಗುಡ್ಡ ಪ್ರದೇಶದಲ್ಲಿರುವ ಬೃಹತ್ ಬೆಟ್ಟಗಳಲ್ಲಿ ಸೃಷ್ಟಿಯಾಗುವ ಸಣ್ಣಪುಟ್ಟ ಜಲಪಾತ ಕಣ್ತುಂಬಿಕೊಳ್ಳುತ್ತಾರೆ.