Advertisement

ಯೋಗದ ಮೂಲ ತತ್ವವೇ ಅಹಿಂಸೆ

12:21 PM Oct 03, 2018 | |

ಬೆಂಗಳೂರು: ಯೋಗದ ಮೂಲ ತತ್ವವೇ ಅಹಿಂಸೆಯಾಗಿದ್ದು, ಯೋಗವನ್ನು ಜೀವವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಹಿಂಸೆ ಹಾಗೂ ಒತ್ತಡ ಮುಕ್ತ ಸುಂದರ ಜೀವನ ನಡೆಸಬಹುದು ಎಂದು ಆರ್ಟ್‌ ಆಫ್ ಲಿವಿಂಗ್‌ ಸಂಸ್ಥಾಪಕ ರವಿಶಂಕರ್‌ ಗುರೂಜಿ ತಿಳಿಸಿದ್ದಾರೆ.

Advertisement

ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್ ಲಿವಿಂಗ್‌ನಲ್ಲಿ ನಡೆಯುತ್ತಿರುವ “ಹಿಂಸೆ ಮತ್ತು ಭಯೋತ್ಪಾದನೆ ವಿರುದ್ಧದ ಜಾಗತಿಕ ಸಮಾವೇಶ’ದಲ್ಲಿ ಮಾತನಾಡಿದ ಅವರು, ಯೋಗ ಐದು ಮೂಲ ತತ್ವಗಳನ್ನು ಒಳಗೊಂಡಿದೆ. ಅವುಗಳಲ್ಲಿ ಮೊದಲನೆಯದು ಅಹಿಂಸಾ ತತ್ವ.

ಯಾರು ಯೋಗವನ್ನು ಅಳವಡಿಸಿಕೊಂಡಿರುತ್ತಾರೋ ಅವರು ಶಾಂತಿ ಚಿಂತನೆಗಳನ್ನು ಹೊಂದಿರುತ್ತಾರೆ. ಹೀಗಾಗಿ, ಯೋಗವೇ ಅಹಿಂಸಾ ತತ್ವವನ್ನು ಜೀವದಲ್ಲಿ ಸುಲಭವಾಗಿ ಅಳವಡಿಸಿಕೊಳ್ಳುವ ಪ್ರಮುಖ ಮಾರ್ಗ ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು. 

ಹಿಂಸಾ ಪ್ರವೃತ್ತಿ ವಯಕ್ತಿಕ ಒತ್ತಡದ ಜತೆಗೆ ಸಮಾಜದ ಒತ್ತಡಕ್ಕೂ ಕಾರಣವಾಗುತ್ತದೆ. ವಿಶ್ವದ ಅನೇಕ ರಾಷ್ಟ್ರಗಳು ಯುದ್ಧದ ಹೆಸರಿನಲ್ಲಿ ಹಿಂಸೆಯನ್ನು ಪ್ರಚೋದಿಸಿ ಸಾಕಷ್ಟು ಪಾಠವನ್ನು ಕಲಿತಿವೆ. ಇವುಗಳಿಗೆ ಸೂಕ್ತ ಉದಾಹರಣೆಯಾಗಿ ಮೊದಲನೆ ಹಾಗೂ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ದೇಶಗಳಿವೆ.

ಇಂದು ಆ ದೇಶಗಳು ಅಹಿಂಸಾ ತತ್ವವನ್ನು ಪಾಲಿಸಿಕೊಂಡು ಹಿಂಸೆ, ಒತ್ತಡ ಮುಕ್ತ ಸದೃಢ ಜೀವನವನ್ನು ನಡೆಸುತ್ತಿವೆ. ಇನ್ನು ಅಹಿಂಸೆ ಎಂಬುದು ದುರ್ಬಲತೆ ಅಲ್ಲ, ಅದೊಂದು ಶಕ್ತಿ. ಅದರಿಂದ ನಮ್ಮ ಜೀವನ ಹಾಗೂ ಸಮಾಜವನ್ನು ಶಾಂತಿ ಹಾಗೂ ಸುಂದರ ಮಾಡಿಕೊಳ್ಳಬಹುದು. ಅಲ್ಲದೇ ಇದೇ ಅಹಿಂಸಾ ಮಾರ್ಗದಿಂದಲೇ ಗಾಂಧಿ ವಿಶ್ವವನ್ನೇ ಗೆದ್ದರು ಎಂದು ತಿಳಿಸಿದರು.     

Advertisement

ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಮತ್ತು ಟಿವಿ ಮಾಧ್ಯಮಗಳಲ್ಲಿ ಆಕ್ರಮಣಕಾರಿ ವಿಷಯಗಳನ್ನು ಹೆಚ್ಚಾಗಿ ತೋರಿಸಲಾಗುತ್ತಿದೆ. ಅಲ್ಲಿನ ನಾಯಕ ಮತ್ತು ನಾಯಕಿಯರ ಗುಣಗಳನ್ನೇ ಜನರು ಅನುಸರಿಸುವ ಮೂಲಕ ತಾವೂ ಸಹ ಆಕ್ರಮಣಕಾರಿಗಳಾಗುವುದರ ಜತೆಗೆ ಖನ್ನತೆಗೆ ಒಳಗಾಗುತ್ತಿದ್ದಾರೆ.

ಮದ್ಯಪಾನ, ಮಾದಕ ವಸ್ತುಗಳ ಸೇವನೆಯಿಂದಾಗಿ ನಮ್ಮ ಸಮಾಜದಲ್ಲಿ ಹಿಂಸಾ ಕೃತ್ಯಗಳು ಹೆಚ್ಚಾಗುತ್ತಿವೆ. ಇದರಿಂದ ಪ್ರಾಣ, ಮಾನ ಹಾನಿ ಸಂಭವಿಸುತ್ತಿದೆ. ಹಾಗಾಗಿ ಈ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಘಟಿತ ಪ್ರಯತ್ನ ಮಾಡಬೇಕು ಎಂದರು.

ಕೇಂದ್ರ ಸಚಿವ ಹಸರಾಜ್‌ ಗಂಗಾರಾಮ್‌ ಅಹಿರ್‌ ಮಾತನಾಡಿ, ಶಾಂತಿ ಮಂತ್ರವನ್ನು ಇಡೀ ವಿಶ್ವಕ್ಕೆ ಸಾರಿದ ಭಗವಾನ್‌ ಬುದ್ಧ, ಮಹಾವೀರ, ಗಾಂಧೀ ಜನಸಿದ ದೇಶ ನಮ್ಮದು. ಹಿಂಸೆಯ ಮೂಲಕ ದೇಶ ಕಟ್ಟಲು ಸಾಧ್ಯವಿಲ್ಲ. ಗಾಂಧಿಜೀ ನಮಗೆ ಸ್ವಾತಂತ್ರ್ಯ ಕೊಡಿಸಿದ್ದು ಅಹಿಂಸಾ ಮಾರ್ಗದಿಂದಲೇ ಎಂಬುದನ್ನು ಯಾರೂ ಮರೆಯಬಾರದು.

ಹೀಗಾಗಿ, ಪ್ರಧಾನಿ ನರೇಂದ್ರ ಮೋದಿಯವರು ಇಡೀ ವಿಶ್ವದ ಸ್ನೇಹಕ್ಕೆ ಮುಂದಾಗಿ ಶಾಂತಿ ಮಂತ್ರವನ್ನು ಸಾರುತ್ತಿದ್ದಾರೆ ಎಂದರು. ಅಮೆರಿಕದ ರಾಷ್ಟ್ರೀಯ ಪೊಲೀಸ್‌ ಫೌಂಡೇಷನ್‌ನ ಡಾ.ಫ್ರಾಂಕ್‌ ಸ್ಟ್ರಾಬ್‌, ಮೈಕೆಲ್‌ ನೀಲಾ, ನಿವೃತ್ತ ಪೊಲೀಸ್‌ ಅಧಿಕಾರಿ ಡಿ.ಆರ್‌.ಕಾರ್ತಿಕೇಯನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next