ಬೆಂಗಳೂರು: ಸ್ವಾತಂತ್ರ್ಯಾನಂತರ ದೇಶದಲ್ಲಿ ಜನರ ಹಣವನ್ನು ತಿಂದುಂಡು ಕೊಬ್ಬಿ ಲೂಟಿ ಮಾಡಿದ ಲೂಟಿಕೋರರ ಪಕ್ಷವಾದ ಕಾಂಗ್ರೆಸ್, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯವರ ವಿರುದ್ಧ ಆಧಾರರಹಿತ ಆರೋಪ ಮಾಡುವುದು ಖಂಡನೀಯ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧವಾಗಿ ಕಾಂಗ್ರೆಸ್ ನಾಯಕರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ, ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗಿದೆ, ರೈತರ ಆತ್ಮಹತ್ಯೆ ಹೆಚ್ಚಾಗಿದೆ, ಆರ್‌ಸಿಇಪಿಗೆ ಭಾರತ ಸಹಿ ಹಾಕಿದೆ ಎಂದೆಲ್ಲಾ ಹಳೆಯ ಪುರಾಣವನ್ನೇ ಹಾಡಿದ್ದಾರೆ.
“ಸಿ.ಡಿ. ಸಿದ್ದರಾಮಯ್ಯ’ ಅವರು ಮಾಹಿತಿ ಇಲ್ಲದೆ ಆಧಾರರಹಿತ ಆರೋಪ ಮಾಡಿರುವುದು ಖಂಡನೀಯ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರು ಒಂದು ವರ್ಷ ಕೋಚಿಂಗ್ ಪಡೆದು ನಂತರ ಮಾತನಾಡಲಿ ಎಂದು ವ್ಯಂಗ್ಯವಾಡಿದರು. ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತಂದು ಪ್ರತಿ ಮನೆಗೆ 15 ಲಕ್ಷ ರೂ. ಕೊಡುವುದಾಗಿ ಹೇಳಿದ್ದ ಪ್ರಧಾನಿ ಮೋದಿಯವರು ಈವರೆಗೆ 15 ಲಕ್ಷ ರೂ. ನೀಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಪ್ರಧಾನಿ ಮೋದಿಯವರು ಎಲ್ಲಿಯೂ ಆ ರೀತಿ ಹೇಳಿಲ್ಲ. ವಿದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಕಪ್ಪು ಹಣ ಇದೆ ಎಂದರೆ ಅದನ್ನು ದೇಶಕ್ಕೆ ತಂದರೆ ಪ್ರತಿ ಮನೆಗೂ 15 ಲಕ್ಷ ರೂ. ನೀಡಬಹುದು ಎಂದು ಹೇಳಿದ್ದರು. ಒಂದೊಮ್ಮೆ ಸಿದ್ದರಾಮಯ್ಯ ಅವರು ಹೇಳುವಂತೆ ಪ್ರಧಾನಿ ಹೇಳಿಕೆ ನೀಡಿದ್ದರೆ ಆ ವಿಡಿಯೋ ವಿವರ ನೀಡಲಿ. ನಂತರ ನಾವು ಉತ್ತರ ನೀಡುತ್ತೇವೆ ಎಂದು ಹೇಳಿದರು.
ಕಾರ್ಮಿಕರ ಭವಿಷ್ಯ ನಿಧಿ ನಿಯತಕಾಲಿಕೆ ಪ್ರಕಾರ ದೇಶದಲ್ಲಿ ಪ್ರತಿ ವರ್ಷ 1.5 ಕೋಟಿ ಉದ್ಯೋಗ ಸೃಷ್ಟಿಯಾಗಿದೆ ಎಂಬ ಮಾಹಿತಿ ಇದೆ. ಆದರೆ ಸಿದ್ದರಾಮಯ್ಯ ಅವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಆರ್‌ಸಿಇಪಿಗೆ ಪ್ರಧಾನಿ ಸಹಿ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಪ್ರಧಾನಿಯವರು ಒಪ್ಪಂದಕ್ಕೆ ಸಹಮತ ಇಲ್ಲ ಎಂದು ಹೇಳಿ ಹೊರಗೆ ಬಂದಿರುವ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ಬ್ಯಾಂಕಿಂಗ್ ವ್ಯವಸ್ಥೆ ಹದಗೆಟ್ಟಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಇದೀಗ ಪ್ರಧಾನಿ ಮೋದಿಯವರು ಬ್ಯಾಂಕಿಂಗ್‌ಗೆ ಸಂಬಂಧಪಟ್ಟಂತೆ ಕೈಗೊಂಡ ನೀತಿಗಳನ್ನು ಜಗತ್ತು ಕೊಂಡಾಡುತ್ತಿದೆ. ಇನ್ನಾದರೂ ಕಾಂಗ್ರೆಸ್ ನಾಯಕರು ಆಧಾರರಹಿತ ಆರೋಪ ಮಾಡುವುದನ್ನು ಬಿಡಲಿ ಎಂದು ಆಗ್ರಹಿಸಿದರು.
ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ಮಾತನಾಡಿ, ಕಾಂಗ್ರೆಸ್‌ನಲ್ಲಿ ಮೂಲ ಹಾಗೂ ವಲಸಿಗ ನಾಯಕರ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ. ಇದನ್ನು ಮರೆಮಾಚಲು ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ವಿರುದ್ಧ ಟೀಕೆ ಮಾಡುವುದು, ಸಾರ್ವಜನಿಕವಾಗಿ ವ್ಯಂಗ್ಯವಾಗಿ ಆರೋಪಿಸುತ್ತಿದ್ದು, ಅದು ಚಾಳಿಯಂತಾಗಿದೆ ಎಂದರು. ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ಸಂಚಾಲಕ ಎ.ಎಚ್.ಆನಂದ್, ಸಹ ವಕ್ತಾರ ಎಸ್.ಪ್ರಕಾಶ್ ಉಪಸ್ಥಿತರಿದ್ದರು.