Advertisement

ಬ್ಯಾನರ್‌ ತೆರವು ಬಹುತೇಕ ಪೂರ್ಣ

02:34 PM Mar 29, 2018 | |

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯ ನಂತರ ನಗರದಲ್ಲಿ ಆರಂಭವಾದ ಜಾಹೀರಾತು ತೆರವು ಕಾರ್ಯಾಚರಣೆ ಬುಧವಾರವೂ ಮುಂದುವರಿದಿದ್ದು, ಪಾಲಿಕೆಯ ಸಿಬ್ಬಂದಿ ನಗರದ ನೂರಾರು ಕಡೆಗಳಲ್ಲಿನ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ.

Advertisement

ಚುನಾವಣೆ ಆಯೋಗದ ನಿರ್ದೇಶನದಂತೆ ರಾಜಕೀಯ ಪಕ್ಷಗಳು, ಸರ್ಕಾರದ ಕಾರ್ಯಕ್ರಮಗಳ ಜಾಹೀರಾತುಗಳು, ರಾಜಕೀಯ ಮುಖಂಡರ ಭಾವಚಿತ್ರವಿರುವ ಫ್ಲೆಕ್ಸ್‌, ಬ್ಯಾನರ್‌ ಹಾಗೂ ಜಾಹೀರಾತು ಫ‌ಲಕಗಳನ್ನು ತೆರವುಗೊಳಿಸುತ್ತಿದ್ದು, ಹಲವಾರು ಕಡೆ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಸಾವಿರಾರು ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನದಿಂದಲೇ ಆರಂಭವಾಗಿರುವ ಫ್ಲೆಕ್ಸ್‌, ಬ್ಯಾನರ್‌ ತೆರವು ಕಾರ್ಯಾಚರಣೆಗೆ 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಯಾಗಿದ್ದು ಮರಗಳು, ಟೆಲಿಫೋನ್‌ ಹಾಗೂ ವಿದ್ಯುತ್‌ ಕಂಬಗಳಿಗೆ ಅಳವಡಿಸಿರುವ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸಿ ಟ್ರ್ಯಾಕ್ಟರ್‌ಗಳ ಮೂಲಕ ಪಾಲಿಕೆಯಿಂದ ಗುರುತಿಸಲಾಗಿರುವ ಖಾಲಿ ಜಾಗಗಳಲ್ಲಿ ವಿಲೇವಾರಿ ಮಾಡಲಾಗಿದೆ.

ಕಾರ್ಯಾಚರಣೆಗಾಗಿ ಪಾಲಿಕೆಯಿಂದ ಪ್ರತಿಯೊಂದು ವಲಯದಲ್ಲಿಯೂ ಪ್ರತ್ಯೇಕ ತಂಡ ರಚಿಸಲಾಗಿದ್ದು, ಬುಧವಾರ ರಾತ್ರಿಯೊಳಗೆ ನಗರದಲ್ಲಿನ ಎಲ್ಲ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಹಾಗೂ ಆ ಕುರಿತ ಸಮಗ್ರ ವರದಿ ನೀಡುವಂತೆ ಆಯುಕ್ತರು ಪಾಲಿಕೆಯ ಎಲ್ಲ ವಲಯಗಳ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಬಸ್‌ ತಂಗುದಾಣ: ಪಾಲಿಕೆಯ ಸಿಬ್ಬಂದಿ ನಗರದಲ್ಲಿನ 2 ಸಾವಿರಕ್ಕೂ ಹೆಚ್ಚು ಬಸ್‌ ತಂಗುದಾಣಗಳು ಹಾಗೂ ವಿವಿಧ ವಾರ್ಡ್‌ಗಳಲ್ಲಿ ಶಾಸಕರು, ಸಂಸದರು ಅನುದಾನದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅಳವಡಿಸಲಾಗಿದ್ದ ಜಾಹೀರಾತುಗಳನ್ನು ತೆರವುಗೊಳಿಸಲಾಗಿದೆ.
 
ಸಾರಿಗೆ ಸಂಸ್ಥೆಗೆ ಸೂಚನೆ: ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅಳವಡಿಸಲಾಗಿರುವ ಸರ್ಕಾರದ ಕಾರ್ಯಕ್ರಮಗಳು ಹಾಗೂ ರಾಜಕೀಯ ಮುಖಂಡ ಭಾವಚಿತ್ರವಿರುವ ಜಾಹೀರಾತುಗಳನ್ನು ಬುಧವಾರ ರಾತ್ರಿಯೊಳಗೆ ತೆರವುಗೊಳಿಸುವಂತೆ ಚುನಾವಣಾ ಆಯೋಗ ಹಾಗೂ ಆಯುಕ್ತರು ಎರಡೂ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದೆ.  

Advertisement

ಮಂಗಳವಾರ ಮಧ್ಯಾಹ್ನದಿಂದ ನಡೆಯುತ್ತಿರುವ ಫ್ಲೆಕ್ಸ್‌, ಬ್ಯಾನರ್‌ ತೆರವು ಕಾರ್ಯಾಚರಣೆ ಬುಧವಾರ ಸಂಜೆ ವೇಳೆಗೆ ಶೇ.85ರಷ್ಟು ಮುಗಿದಿದ್ದು, ಬೃಹತ್‌ ಜಾಹೀರಾತು ಫ‌ಲಕಗಳಲ್ಲಿನ ಜಾಹೀರಾತುಗಳನ್ನು ಜೆಸಿಬಿ ಬಳಸಿ ಬುಧವಾರ ರಾತ್ರಿಯೊಳಗೆ ತೆರವುಗೊಳಿಸಲಾಗಿದೆ. ಜತೆಗೆ ಬಸ್‌ಗಳಲ್ಲಿನ ಜಾಹೀರಾತುಗಳನ್ನು ಕೂಡಲೇ ತೆರವು ಮಾಡುವಂತೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಗೆ ಸೂಚಿಸಲಾಗಿದೆ.
-ಎನ್‌.ಮಂಜುನಾಥ ಪ್ರಸಾದ್‌, ನಗರ ಜಿಲ್ಲಾ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next