ನಾವೊಂದು ಆಟ ಆಡೋಣ್ವ? ಆಕೆ ಹಾಗೆ ಹೇಳುತ್ತಿದ್ದಂತೆ ಮತ್ತು ಆಟದ ಸ್ವರೂಪ ಅರ್ಥ ಮಾಡಿಸುತ್ತಿದ್ದಂತೆ ಕೆಲವರು ಖುಷಿಯಾಗುತ್ತಾರೆ. ಇನ್ನೂ ಕೆಲವರು ಟೆನ್ಶನ್‌ಗೆ ಒಳಗಾಗುತ್ತಾರೆ. ಆಟವೇನೋ ಚೆನ್ನಾಗಿದೆ. ಆದರೆ, ಎಲ್ಲಿ ಯಾರಿಗೂ ಗೊತ್ತಿಲ್ಲದ ತಮ್ಮ ಅಂತರಂಗದ ವಿಷಯಗಳು ಬಹಿರಂಗಗೊಳ್ಳುತ್ತದೋ ಎಂಬ ಭಯದಿಂದ ಆಟ ಬೇಡವೇ ಬೇಡ ಎನ್ನುತ್ತಾರೆ. ಕೊನೆಗೆ ಉಳಿದವರ ಒತ್ತಾಯ ಮತ್ತು ಮನವೊಲಿಕೆಯ ನಂತರ ಆಟಕ್ಕೆ ಒಪ್ಪಿ, ತಮ್ಮ ಮೊಬೈಲ್‌ಗಳನ್ನು ಟೇಬಲ್ ಮೇಲಿಡುತ್ತಾರೆ.
ಅಲ್ಲಿಂದ ತಮ್ಮ ಜೀವನವೇ ಬದಲಾಗುತ್ತದೆ ಮತ್ತು ತಾವು ಎಲ್ಲರೆದುರು ಬೆತ್ತಲಾಗಿ ನಿಲ್ಲಬೇಕಾಗುತ್ತದೆ ಎಂಬ ಕಲ್ಪನೆ ಯಾರಲ್ಲೂ ಇರುವುದಿಲ್ಲ. “ಲೌಡ್ ಸ್ಪೀಕರ್’ ಕನ್ನಡದ ಮಟ್ಟಿಗೆ ಒಂದು ವಿಭಿನ್ನವಾದ ಪ್ರಯತ್ನ ಎಂದರೆ ತಪ್ಪಿಲ್ಲ. ಈ ತರಹದ ಚಿತ್ರಗಳು ಕನ್ನಡದಲ್ಲಂತೂ ಬಂದಿಲ್ಲ. ಇನ್ನು ಭಾರತದ ಬೇರೆ ಯಾವ ಭಾಷೆಯಲ್ಲೂ ಬಂದ ಉದಾಹರಣೆಯಿಲ್ಲ. ಹಾಗಂತ ಇದು ಜಗತ್ತಿನಲ್ಲೇ ಹೊಸದು ಎಂದರೆ ತಪ್ಪಾಗುತ್ತದೆ. 2016ರಲ್ಲಿ ಬಿಡುಗಡೆಯಾದ ಇಟಾಲಿಯನ್ ಚಿತ್ರ “ಪರ್ಫೆಕ್ಟ್ ಸ್ಟ್ರೇಂಜರ್’ನ ಸ್ಫೂರ್ತಿಯಿಂದ ಈ ಚಿತ್ರ ಮಾಡಲಾಗಿದೆ.
ಆ ಚಿತ್ರದ ಕಥೆಯನ್ನು ಒಂದಿಷ್ಟು ಹಿಗ್ಗಿಸಿ, ಒಂದು ಸಂದೇಶ ಸೇರಿಸಿ ಕನ್ನಡದಲ್ಲಿ ಚಿತ್ರ ಮಾಡಲಾಗಿದೆ. ಇಲ್ಲಿ ಮೂರು ಜೋಡಿಗಳಿವೆ. ಜೊತೆಗೊಬ್ಬ ಡೈವೋರ್ಸಿ. ಈ ಏಳು ಜನರಿಗೆ ವೀಕೆಂಡ್ ಪಾರ್ಟಿ ಮಾಡುವ ಖಯಾಲಿ. ಅದೊಮ್ಮೆ ಒಂದು ಜೋಡಿ ಮನೆಯಲ್ಲಿ, ಮಿಕ್ಕವರೆಲ್ಲಾ ಪಾರ್ಟಿಗೆಂದು ಸೇರುತ್ತಾರೆ. ಆ ಸಂದರ್ಭದಲ್ಲಿ ಒಬ್ಬಳಿಗೆ ಒಂದು ಐಡಿಯಾ ಹೊಳೆಯುತ್ತದೆ. ಒಂದು ಹೊಸ ಆಟ ಆಡುವುದಕ್ಕೆ ಮನಸ್ಸಾಗುತ್ತದೆ. ಆ ಆಟದ ರೂಪುರೇಷೆ ಏನೆಂದರೆ, ಆಟ ಶುರುವಾದಾಗಿನಿಂದ ಎಲ್ಲರೂ ತಮ್ಮ ಮೊಬೈಲ್‌ಗಳನ್ನು ಟೇಬಲ್ ಮೇಲಿಡಬೇಕು.
ಪಾರ್ಟಿ ಮುಗಿಯುವವರೆಗೂ ಯಾರ್ಯಾರ ಮೊಬೈಲ್‌ಗೆ ಏನೇನೆಲ್ಲಾ ಮೆಸೇಜುಗಳು ಬರುತ್ತವೋ ಅದನ್ನೆಲ್ಲಾ ಬಹಿರಂಗಪಡಿಸಬೇಕು ಮತ್ತು ಫೋನ್ ಕಾಲ್‌ಗಳು ಬಂದರೆ ಅದನ್ನು ಲೌಡ್‌ಸ್ಪೀಕರ್ ಮೂಲಕ ಎಲ್ಲರಿಗೂ ಕೇಳಿಸಬೇಕು. ಮೊದಲೇ ಹೇಳಿದಂತೆ, ವಿರೋಧದ ನಡುವೆಯೇ ಆಟ ಶುರುವಾಗುತ್ತದೆ. ಆ ನಂತರ ಒಂದೊಂದೇ ಫೋನ್ ಕಾಲ್‌ಗಳು, ಒಂದೊಂದೇ ಮೆಸೇಜುಗಳು ಅವರನ್ನು ಬೆತ್ತಲಾಗಿಸುತ್ತಾ ಹೋಗುತ್ತದೆ. ಕ್ರಮೇಣ ಅವರ ನಡುವೆ ಇರುವ ಪ್ರೀತಿ, ಸ್ನೇಹ, ವಿಶ್ವಾಸ ಎಲ್ಲವೂ ಕಡಿಮೆಯಾಗುತ್ತಾ ಹೋಗಿ, ಅವರೆಲ್ಲಾ ಕ್ರಮೇಣ ದೂರವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ನಂತರ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಮೊದಲೇ ಹೇಳಿದಂತೆ, “ಲೌಡ್ ಸ್ಪೀಕರ್’ ಕನ್ನಡದ ಮಟ್ಟಿಗೆ ವಿಭಿನ್ನವಾಗ ಪ್ರಯೋಗ. ಇಲ್ಲಿ ಯಾವುದೇ ಹೊಡೆದಾಟ, ಹಾಡು ಇಲ್ಲದೆ ಸೀಮಿತ ಪಾತ್ರಗಳು ಮತ್ತು ಸೀಮಿತ ಪರಿಸರದಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಜೊತೆಗೆ ಜೀವವಿಲ್ಲದ ಮೊಬೈಲ್‌ಗಳ ಜೊತೆಗೆ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವ ಬದಲು, ಜೀವ ಇರುವವರ ಜೊತೆಗೆ ನಿಮ್ಮ ಅಮೂಲ್ಯ ಕ್ಷಣಗಳನ್ನು ಕಳೆಯಿರಿ ಎಂಬ ಸಂದೇಶವಿದೆ. ಇದನ್ನು ನೀಟ್ ಆಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಶಿವತೇಜಸ್.
ಹಲವು ಟ್ವಿಸ್ಟ್‌ಗಳ ಮೂಲಕ ಚಿತ್ರವನ್ನು ನಿರೂಪಿಸುತ್ತಾ ಹೋಗುವ ಅವರು, ಆಗಾಗ ಪ್ರೇಕ್ಷಕರಿಗೆ ಶಾಕ್ ಕೊಡುತ್ತಾರೆ. ಕೊನೆಗೆ ಒಂದು ಒಳ್ಳೆಯ ಸಂದೇಶದೊಂದಿಗೆ ಚಿತ್ರವನ್ನು ಮುಗಿಸಿದ್ದಾರೆ. ಹಾಗೆ ನೋಡಿದರೆ, ಚಿತ್ರಕಥೆಯೇ ಈ ಚಿತ್ರದ ಹೈಲೈಟು ಮತ್ತು ಅದನ್ನೇ “ಪರ್ಫೆಕ್ಟ್ ಸ್ಟ್ರೇಂಜರ್’ ಚಿತ್ರದಿಂದ ಎರವಲು ಪಡೆದಿರುವುದರಿಂದ ಅರ್ಧ ಕೆಲಸ ಸುಲಭವಾಗಿದೆ. ಇನ್ನರ್ಧ ಜವಾಬ್ದಾರಿ ಕಲಾವಿದರು ಮತ್ತು ತಂತ್ರಜ್ಞರ ಮೇಲಿದ್ದು, ಎಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಭಾಸ್ಕರ್ ನೀನಾಸಂ, ಕಾವ್ಯಾ ಶಾ, ಸುಮಂತ್ ಭಟ್, ದಿಶಾ ದಿನಕರ್, ರಂಗಾಯಣ ರಘು, ದತ್ತಣ್ಣ, ಅಭಿಶೇಕ್ ಸೇರಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಸೀಮಿತ ವಾತಾವರಣದಲ್ಲಿ ಕಥೆ ನಡೆಯುವುದರಿಂದ ಛಾಯಾಗ್ರಾಹಕ ಕಿರಣ್ ಹಂಪಾಪುರ್ ಅವರ ಮೇಲೆ ಜವಾಬ್ದಾರಿ ಜಾಸ್ತಿಯೇ ಇದೆ ಮತ್ತು ಕಿರಣ್ ಬಹಳ ಚೆನ್ನಾಗಿ ಇಡೀ ಪರಿಸರವನ್ನು ಕಟ್ಟಿಕೊಟ್ಟಿದ್ದಾರೆ. ಇನ್ನು ಕೆ.ಎಂ. ಪ್ರಕಾಶ್ ಎಂದಿನಂತೆ ತಮ್ಮ ಚಾಕಚಕ್ಯತೆ ಪ್ರದರ್ಶಿಸಿ, ಚಿತ್ರ ನಿಧಾನವಾಗದಂತೆ ಮತ್ತು ಹೆಚ್ಚು ಬೋರಾಗದಂತೆ ಕತ್ತರಿಸಿಕೊಟ್ಟಿದ್ದಾರೆ.
ಚಿತ್ರ: ಲೌಡ್ ಸ್ಪೀಕರ್
ನಿರ್ದೇಶನ: ಶಿವತೇಜಸ್
ನಿರ್ಮಾಣ: ಡಾ.ಕೆ. ರಾಜು
ತಾರಾಗಣ: ಭಾಸ್ಕರ್ ನೀನಾಸಂ, ಕಾವ್ಯಾ ಶಾ, ಸುಮಂತ್ ಭಟ್, ದಿಶಾ ದಿನಕರ್, ರಂಗಾಯಣ ರಘು, ದತ್ತಣ್ಣ, ಅಭಿಶೇಕ್ ಮುಂತಾದವರು
* ಚೇತನ್ ನಾಡಿಗೇರ್