Advertisement

ಎಸಿಎಫ್ ಹೆಸರಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ

06:00 AM Oct 07, 2018 | Team Udayavani |

ಬೆಳಗಾವಿ: ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌.ಸ್ವಾಮಿ ಮತ್ತು ಬಿಡಿಎ ಎಂಜಿನಿಯರ್‌ ಎನ್‌.ಜಿ.ಗೌಡಯ್ಯ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಎಸಿಬಿ ಅಧಿಕಾರಿಗಳು ಶನಿವಾರ ಕುಂದಾನಗರಿ ಬೆಳಗಾವಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಮನೆ ಮೇಲೆ ಶನಿವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಅಪಾರ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಖಾನಾಪುರ ಉಪ ವಿಭಾಗದ ಎಸಿಎಫ್‌ ಚಂದ್ರಗೌಡ ಪಾಟೀಲ ಅವರ ರಾಮತೀರ್ಥ ನಗರದ ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅಕ್ರಮ ಆಸ್ತಿ ಬಗ್ಗೆ ಕಾಗದ ಪತ್ರಗಳನ್ನು ಸಂಗ್ರಹಿಸಿ ಪರಿಶೀಲಿಸಿದರು. ಜತೆಗೆ ಎಸಿಎಫ್‌ ಚಂದ್ರಗೌಡ ಪಾಟೀಲ ಅವರಿಗೆ ಸಂಬಂಧಿಸಿದ ಖಾನಾಪುರದ ಅರಣ್ಯ ಇಲಾಖೆ ಕಚೇರಿ, ಯರಗಟ್ಟಿಯ ಸಿಮೆಂಟ್‌ ಫ್ಯಾಕ್ಟರಿ ಮೇಲೂ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಿದರು.

ದಾಳಿ ವೇಳೆ ರಾಮತೀರ್ಥ ನಗರದ ನಿವಾಸದಲ್ಲಿ 6.30 ಲಕ್ಷ ರೂ. ನಗದು, 670 ಗ್ರಾಂ ಚಿನ್ನಾಭರಣ, 6 ಕೆಜಿ ಬೆಳ್ಳಿ ಆಭರಣಗಳು ಇದ್ದವು. ಕುವೆಂಪು ನಗರದಲ್ಲಿ ನಿವೇಶನ, ಸವದತ್ತಿ ತಾಲೂಕಿನ ಯರಗಟ್ಟಿಯಲ್ಲಿ ಸುಮಾರು ಒಂದು ಕೋಟಿ ರೂ. ಮೌಲ್ಯದ ಸಿಮೆಂಟ್‌(ಬ್ರಿಕ್ಸ್‌) ಫ್ಯಾಕ್ಟರಿ, ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪ್ಯಾÉಟ್‌, ಕಾರು, ಎರಡು ಬೈಕ್‌ ಸೇರಿ ಬೈಲಹೊಂಗಲದಲ್ಲಿ ಸಹೋದರನಿಗೆ ಸೇರಿದ ಎರಡು ಜೆಸಿಬಿಗಳನ್ನು ವಶಕ್ಕೆ ಪಡೆದಿದ್ದಾರೆ.

ಸಿದ್ನಾಳ ಗ್ರಾಮದಲ್ಲಿ ಪಿತ್ರಾರ್ಜಿತ ಆಸ್ತಿ ಇದ್ದು, ಎಲ್ಲ ಸಹೋದರರು ಈ ಭೂಮಿ ಹಂಚಿಕೊಂಡಿದ್ದಾರೆ. ಒಣ ಭೂಮಿ ಇರುವುದರಿಂದ ಆದಾಯ ಕಡಿಮೆ ಇದೆ. ಜೊತೆಗೆ ಎಸಿಎಫ್‌ ಚಂದ್ರಗೌಡ ಪಾಟೀಲ ಅವರಿಗೆ ಇನ್ನೂ ಎಲ್ಲೆಲ್ಲಿ ಆಸ್ತಿ ಇದೆ ಎಂಬುದರ ಬಗ್ಗೆ ಎಸಿಬಿ ಅ ಧಿಕಾರಿಗಳು ತನಿಖೆ ಚುರುಕು ನಡೆಸಿದ್ದಾರೆ. ರಾತ್ರಿವರೆಗೂ ರಾಮತೀರ್ಥ ನಗರದ ನಿವಾಸದಲ್ಲಿ ಅ ಧಿಕಾರಿಗಳು ಕಡತ ಹಾಗೂ ದಾಖಲೆಗಳನ್ನು ತಪಾಸಣೆ ಮುಂದುವರಿಸಿದ್ದರು. ಎಸಿಬಿ ಎಸ್‌ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಡಿಎಸ್‌ಪಿ ರಘು ಜೆ., ಇನ್ಸ್‌ಪೆಕ್ಟರ್‌ಗಳಾದ ವಿಶ್ವನಾಥ, ವೈ.ಎಸ್‌. ಧರನಾಯಕ ಸೇರಿದಂತೆ ಸಿಬ್ಬಂದಿ ನಾಲ್ಕು ತಂಡ ರಚಿಸಿ ಶನಿವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.

ಆದಾಯಕ್ಕೂ ಮೀರಿದ ಆಸ್ತಿ ಇತ್ತು: ಐಜಿಪಿ
ಬೆಂಗಳೂರು:
ಕೆಐಎಡಿಬಿ ಮತ್ತು ಬಿಡಿಎ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ನಡೆದ ದಾಳಿ ವೇಳೆ ಪತ್ತೆಯಾದ ದಾಖಲೆಗಳ ಪ್ರಕಾರ ಆರೋಪಿತ ಅಧಿಕಾರಿಗಳು ಶೇಕಡ ಪ್ರಮಾಣದಲ್ಲಿ ಆದಾಯಕ್ಕೂ ಮೀರಿ ಆಸ್ತಿಗಳಿಸಿರುವುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಐಜಿಪಿ ಚಂದ್ರಶೇಖರ್‌ ಹೇಳಿದ್ದಾರೆ. ಭ್ರಷ್ಟ ಅಧಿಕಾರಿಗಳ ಮೇಲಿನ ದಾಳಿ ಬಳಿಕ ಶನಿವಾರ ಸುದ್ದಿಗೋಷ್ಠಿ ನಡೆಸಿದ ಚಂದ್ರಶೇಖರ್‌, ಸ್ವಾಮಿ ಮತ್ತು ಗೌಡಯ್ಯ ಅಕ್ರಮವಾಗಿ ಸಂಪಾದಿಸಿರುವ ಆಸ್ತಿ ಹಾಗೂ ನಗದು ಬಗ್ಗೆ ಸಾರ್ವಜನಿಕರೇ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಆರೋಪಿತ ಅಧಿಕಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದು, ಶನಿವಾರ ಸಂಜೆವರೆಗೂ ಪರಿಶೀಲಿಸಲಾಯಿತು. ವಿದೇಶಿ ಕರೆನ್ಸಿ ಸೇರಿ ಕೋಟ್ಯಂತರ ರೂ. ನಗದು ಸಿಕ್ಕಿರುವುದರಿಂದ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೂ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

Advertisement

ಸಹಾಯವಾಣಿ
ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಯಾವುದೇ ಸಂಸ್ಥೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲು ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯ. ಹೀಗಾಗಿ ಎಸಿಬಿ ಸಹಾಯವಾಣಿ 1064 ಮತ್ತು 080 22342100 ಅಥವಾ 9480806300ಗೆ ಕರೆ ಮಾಡಿ ಮಾಹಿತಿ ನೀಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next