Advertisement

4ನೇ ಗೆಲುವಿನತ್ತ ಆಸ್ಟ್ರೇಲಿಯ

11:49 AM Jan 08, 2018 | Team Udayavani |

ಸಿಡ್ನಿ: ಆ್ಯಶಸ್‌ ಸರಣಿಯನ್ನು ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಳ್ಳಬೇಕೆಂಬ ಆಸ್ಟ್ರೇಲಿಯದ ಯೋಜನೆಗೆ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಅಡ್ಡಿಯಾಗಿತ್ತು. ಆದರೆ ನೂತನ ವರ್ಷಾರಂಭದ ಸಿಡ್ನಿ ಟೆಸ್ಟ್‌ನಲ್ಲಿ ಗೆಲುವಿನತ್ತ ಮುನ್ನಡೆದಿರುವ ಕಾಂಗರೂ ಪಡೆ, ಸರಣಿಯನ್ನು 4-0 ಅಂತರದಿಂದ ಗೆಲ್ಲುವುದು ಬಹುತೇಕ ಖಾತ್ರಿಯಾಗಿದೆ.

Advertisement

ಮಾರ್ಷ್‌ ಸೋದರರ ಮನಮೋಹಕ ಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 303 ರನ್ನುಗಳ ಬೃಹತ್‌ ಮುನ್ನಡೆ ಗಳಿಸಿದ ಆಸೀಸ್‌, 4ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡಿನ 4 ವಿಕೆಟ್‌ಗಳನ್ನು ಕೇವಲ 93 ರನ್ನಿಗೆ ಉದುರಿಸಿದೆ. ರೂಟ್‌ ಪಡೆ ಇನ್ನೂ 210 ರನ್‌ ಹಿನ್ನಡೆಯಲ್ಲಿದ್ದು, ಅಂತಿಮ ದಿನವಾದ ಸೋಮವಾರ ಉಳಿವಿಗಾಗಿ ಹೋರಾಟ ನಡೆಸೀತೇ ಎಂಬುದೊಂದು ಪ್ರಶ್ನೆ.

ಮಾರ್ಷ್‌ ಸೋದರರ ಮೆರೆದಾಟ
4ಕ್ಕೆ 479 ರನ್‌ ಗಳಿಸಿದಲ್ಲಿಂದ ರವಿವಾರದ ಬ್ಯಾಟಿಂಗ್‌ ಮುಂದುವರಿಸಿದ ಆಸ್ಟ್ರೇಲಿಯ ಚಹಾ ವಿರಾಮಕ್ಕೂ ಸ್ವಲ್ಪ ಮೊದಲು 7 ವಿಕೆಟಿಗೆ 649 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತು. ಶಾನ್‌ ಮಾರ್ಷ್‌ 156 ಹಾಗೂ ಮಿಚೆಲ್‌ ಮಾರ್ಷ್‌ 101 ರನ್‌ ಬಾರಿಸಿ “ಸಿಡ್ನಿ ಕ್ರಿಕೆಟ್‌ ಗ್ರೌಂಡ್‌’ನಲ್ಲಿ ಮೆರೆದಾಡಿದರು. ಇದರೊಂದಿಗೆ ಒಂದೇ ಟೆಸ್ಟ್‌ ಇನ್ನಿಂಗ್ಸ್‌ ನಲ್ಲಿ ಶತಕ ದಾಖಲಿಸಿದ ವಿಶ್ವದ 5ನೇ ಹಾಗೂ ಆಸ್ಟ್ರೇಲಿಯದ 3ನೇ ಸೋದರ ಜೋಡಿಯೆಂಬ ಹಿರಿಮೆಗೆ ಪಾತ್ರರಾದರು.

98 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಶಾನ್‌ ಮಾರ್ಷ್‌ 156ರ ತನಕ ಬ್ಯಾಟಿಂಗ್‌ ವಿಸ್ತರಿಸಿದರು. 291 ಎಸೆತಗಳ ಈ ಸೊಗಸಾದ ಆಟದ ವೇಳೆ 18 ಬೌಂಡರಿ ಸಿಡಿಯಲ್ಪಟ್ಟಿತು. ಇದು ಶಾನ್‌ ಮಾರ್ಷ್‌ ಅವರ 6ನೇ ಶತಕವಾದರೆ, ಈ ಸರಣಿಯಲ್ಲಿ ಎರಡನೆಯದು. ಇವರ ಮ್ಯಾರಥಾನ್‌ ಇನ್ನಿಂಗ್ಸ್‌ ರನೌಟ್‌ ಮೂಲಕ ಕೊನೆಗೊಂಡಿತು.

63 ರನ್‌ ಮಾಡಿ ಆಡುತ್ತಿದ್ದ ಮಿಚೆಲ್‌ ಮಾರ್ಷ್‌ 101 ರನ್‌ ಬಾರಿಸಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 2ನೇ ಶತಕ ಸಂಭ್ರಮ ವನ್ನಾಚರಿಸಿದರು. 141 ಎಸೆತ ನಿಭಾಯಿಸಿದ ಮಿಚ್‌ ಮಾರ್ಷ್‌ 15 ಬೌಂಡರಿ, 2 ಸಿಕ್ಸರ್‌ ಬಾರಿಸಿ ರಂಜಿಸಿದರು. 

Advertisement

ಶಾನ್‌-ಮಿಚೆಲ್‌ ಸೇರಿಕೊಂಡು 5ನೇ ವಿಕೆಟಿಗೆ 169 ರನ್‌ ಪೇರಿಸಿದರು. 2001ರ ಆ್ಯಶಸ್‌ ಸರಣಿಯ ಓವಲ್‌ ಟೆಸ್ಟ್‌ ಬಳಿಕ ಆಸ್ಟ್ರೇಲಿಯದ ಸೋದರರಿಬ್ಬರು ಒಂದೇ ಇನ್ನಿಂಗ್ಸ್‌ನಲ್ಲಿ ಬಾರಿಸಿದ ಶತಕ ಸಾಧನೆ ಇದಾಗಿದೆ. ಅಂದು ವೋ ಬ್ರದರ್ ಈ ಸಾಹಸಗೈದಿದ್ದರು.

 ಇಂಗ್ಲೆಂಡ್‌ ಕುಸಿತ
ಇಂಗ್ಲೆಂಡ್‌ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕುಕ್‌ (10), ಸ್ಟೋನ್‌ಮ್ಯಾನ್‌ (0), ವಿನ್ಸ್‌ (18), ಮಾಲನ್‌ (5) ವಿಕೆಟ್‌ ಕಳೆದುಕೊಂಡಿದೆ. ನಾಯಕ ರೂಟ್‌ (42) ಮತ್ತು ಬೇರ್‌ಸ್ಟೊ (17) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌-346 ಮತ್ತು 4 ವಿಕೆಟಿಗೆ 93 (ರೂಟ್‌ ಬ್ಯಾಟಿಂಗ್‌ 42, ಬೇರ್‌ಸ್ಟೊ ಬ್ಯಾಟಿಂಗ್‌ 17, ಲಿಯೋನ್‌ 31ಕ್ಕೆ 2). ಆಸ್ಟ್ರೇಲಿಯ-7 ವಿಕೆಟಿಗೆ ಡಿಕ್ಲೇರ್‌ 649 (ಖ್ವಾಜಾ 171, ಶಾನ್‌ ಮಾರ್ಷ್‌ 156, ಮಿಚೆಲ್‌ ಮಾರ್ಷ್‌ 101, ಅಲಿ 170ಕ್ಕೆ 2). 

ಸೋದರರ ಶತಕದ ಸವಾಲ್‌!
ಟೆಸ್ಟ್‌ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಸೋದರ ಜೋಡಿ
1. ಇಯಾನ್‌ ಚಾಪೆಲ್‌-ಗ್ರೆಗ್‌ ಚಾಪೆಲ್‌ (3 ಸಲ)
2. ಸ್ಟೀವ್‌ ವೋ-ಮಾರ್ಕ್‌ ವೋ (2 ಸಲ)
3. ಮುಷ್ತಾಕ್‌ ಮೊಹಮ್ಮದ್‌-ಸಾದಿಕ್‌ ಮೊಹಮ್ಮದ್‌
4. ಗ್ರ್ಯಾಂಟ್‌ ಫ್ಲವರ್‌-ಆ್ಯಂಡಿ ಫ್ಲವರ್‌
5. ಶಾನ್‌ ಮಾರ್ಷ್‌-ಮಿಚೆಲ್‌ ಮಾರ್ಷ್‌

ಆಸ್ಟ್ರೇಲಿಯದ ಗ್ರೆಗ್‌ ಚಾಪೆಲ್‌-
ಇಯಾನ್‌ ಚಾಪೆಲ್‌ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ವಿಶ್ವದ ಏಕೈಕ ಸೋದರ ಜೋಡಿ ಎನಿಸಿದೆ. 1974ರ ನ್ಯೂಜಿಲ್ಯಾಂಡ್‌ ಎದುರಿನ ವೆಲ್ಲಿಂಗ್ಟನ್‌ ಟೆಸ್ಟ್‌ ಪಂದ್ಯದಲ್ಲಿ ಗ್ರೆಗ್‌ ಚಾಪೆಲ್‌ 247 ಮತ್ತು 133 ರನ್‌, ಇಯಾನ್‌ ಚಾಪೆಲ್‌ 145 ಮತ್ತು 121 ರನ್‌ ಹೊಡೆದಿದ್ದರು. 

ಅತಿ ದೊಡ್ಡ ಜತೆಯಾಟ ನಡೆಸಿದ ಸೋದರ ಜೋಡಿಯ ದಾಖಲೆ ಜಿಂಬಾಬ್ವೆಯ ಆ್ಯಂಡಿ ಮತ್ತು ಗ್ರ್ಯಾಂಟ್‌ ಫ್ಲವರ್‌ ಅವರ ದಾಗಿದೆ. 1995ರ ಪಾಕಿಸ್ಥಾನ ವಿರುದ್ಧದ ಹರಾರೆ ಟೆಸ್ಟ್‌ನಲ್ಲಿ ಇವರು 269 ರನ್‌ ಪೇರಿಸಿದ್ದರು. ಗ್ರ್ಯಾಂಟ್‌ 201 ಮತ್ತು ಆ್ಯಂಡಿ 156 ರನ್‌ ಹೊಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next