ಮಂಗಳೂರು: ಬೆಂಗಳೂರಿನಲ್ಲಿ ಬಾಕಿಯಾಗಿದ್ದ ಕರಾವಳಿ ಮೂಲದ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚಿನ ಮಂದಿ ವಲಸೆ ಕಾರ್ಮಿಕರು ಮೂರು ದಿನಗಳಿಂದ ರಾಜ್ಯ ಸರಕಾರದ ನೇತೃತ್ವದ ಬಸ್‌ಗಳ ಮೂಲಕ ತಮ್ಮ ಊರುಗಳಿಗೆ ಮರಳಿದ್ದಾರೆ.
ಕರಾವಳಿಗೆ ಬಂದಿರುವ ಎಲ್ಲ ಕಾರ್ಮಿಕರನ್ನು ಮುಂದಿನ 14 ದಿನಗಳವರೆಗೆ ಹೋಂ ಕ್ವಾರಂಟೈನಲ್ಲಿ ಇರುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಬೆಂಗಳೂರಿನಿಂದ ಮಂಗಳೂರು, ಉಡುಪಿ, ಕಾರವಾರ, ಮಡಿಕೇರಿ ಪ್ರದೇಶಕ್ಕೆ ಮೇ 3ರಿಂದ 5ರ ವರೆಗೆ ಒಟ್ಟು ಬಸ್ 70 ಬಸ್‌ಗಳಲ್ಲಿ ಕಾರ್ಮಿಕರು ಆಗಮಿಸಿದ್ದಾರೆ. ಮಂಗಳೂರು ಡಿಪೋಗೆ 25 ಬಸ್, ಉಡುಪಿ-9, ಕುಂದಾಪುರ-24 ಮತ್ತು ಮಡಿಕೇರಿಗೆ 12 ಬಸ್‌ಗಳು ಬಂದಿವೆ.
ಎಲ್ಲ ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದ್ದು, ಕಾರ್ಮಿಕರು ಬಸ್‌ಗೆ ಆಗಮಿಸುವ ವೇಳೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಬಸ್ ಕರಾವಳಿ ಗಡಿ ಪ್ರದೇಶಕ್ಕೆ ಬರುತ್ತಿದ್ದಂತೆ ಮತ್ತೂಮ್ಮೆ ತಪಾಸಣೆ ನಡೆಯುತ್ತಿದೆ. ಪ್ರತಿಯೊಬ್ಬರ ಫೋಟೋ, ಹೆಸರು, ಪೂರ್ತಿ ವಿಳಾಸ, ಮೊಬೈಲ್ ಸಂಖ್ಯೆ ಸಹಿತ ಪ್ರಮುಖ ಮಾಹಿತಿ ಸಂಗ್ರಹಸಿ, ಬಳಿಕ ಕೈಗೆ ಸೀಲ್ ಹಾಕಿ, ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗುತ್ತಿದೆ.
ನಿಗಾ ಇಡಲು “ಕ್ವಾರಂಟೈನ್ ವಾಚ್’ ಆ್ಯಪ್
ಹೊರ ಜಿಲ್ಲೆಗಳಿಂದ ಆಗಮಿಸಿದ ಕಾರ್ಮಿಕರ ಬಗ್ಗೆ ನಿಗಾ ಇಡುವಂತೆ ಪ್ರತಿಯೊಬ್ಬರ ಮೊಬೈಲ್‌ಗೂ “ಕ್ವಾರಂಟೈನ್ ವಾಚ್’ ಎಂಬ ಆ್ಯಪ್ ಅಳವಡಿಸಲಾಗುತ್ತದೆ. ಮೊಬೈಲ್ ಜಿಪಿಎಸ್ ಮುಖೇನ ಈ ಆ್ಯಪ್ ಕಾರ್ಯಾಚರಣೆ ನಡೆಸುತ್ತದೆ. ಕ್ವಾರಂಟೈನ್‌ನಲ್ಲಿ ಇರುವ ವ್ಯಕ್ತಿ ಒಂದು ವೇಳೆ ಮನೆ ಬಿಟ್ಟು ಬೇರೆಡೆಗೆ ತೆರಳಿದರೆ ಆ ಮಾಹಿತಿ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ರವಾನೆಯಾಗುತ್ತದೆ.
ಉಡುಪಿ: 793 ಮಂದಿ ಉತ್ತರ ಕರ್ನಾಟಕ
ಉಡುಪಿಯಿಂದ ಮಂಗಳವಾರ 793 ಮಂದಿ ವಲಸೆ ಕಾರ್ಮಿಕರು ಉತ್ತರ ಕರ್ನಾಟಕದ ವಿವಿಧ ಭಾಗಗಳಿಗೆ ತೆರಳಿದ್ದಾರೆ.