ಚಾಮರಾಜನಗರ: ಲಾಕ್‌ಡೌನ್ ಅವಧಿಯಲ್ಲಿ ವಿವಿಧ ಕಾರಣಗಳಿಂದ ಬೇರೆ ಜಿಲ್ಲೆಗಳಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರಿಗೆ ಅವರವರ ಸ್ವಂತ ಊರುಗಳಿಗೆ ಹೋಗುವುದಕ್ಕೆ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಇದುವರೆಗೆ 1787 ಕಾರ್ಮಿಕರು ಮರಳಿದ್ದಾರೆ. ಹನೂರು ತಾಲೂಕಿನ 826, ಕೊಳ್ಳೇಗಾಲ ತಾಲೂಕಿನ 185, ಯಳಂದೂರು ತಾಲೂಕಿನ 96, ಚಾಮರಾಜನಗರ ತಾಲೂಕಿನ 481 ಮತ್ತು ಗುಂಡ್ಲುಪೇಟೆ ತಾಲೂಕಿನ 199 ಕಾರ್ಮಿಕರು ಜಿಲ್ಲೆಗೆ ಬಂದಿದ್ದಾರೆ.
ಅರ್ಜಿ ಸಲ್ಲಿಕೆ: ಹೊರರಾಜ್ಯಕ್ಕೆ ಪ್ರಯಾಣಿಸಲು ಚಾಮರಾಜನಗರ ಜಿಲ್ಲೆಯ 420 ಮಂದಿ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 97 ಜನರ ಅರ್ಜಿ ಅನುಮೋದನೆಗೊಂಡಿದೆ. ಆಯಾ ಸಂಬಂಧಿತ ರಾಜ್ಯಗಳ ಅನುಮತಿಯೂ ಅಗತ್ಯವಿದೆ. ಇವರಲ್ಲಿ 36 ಮಂದಿ ಪ್ರಯಾಣಿಸಲು ಅನುಮತಿಸಲಾಗಿದೆ. ಹೊರರಾಜ್ಯಗಳಿಂದಲೂ ಜಿಲ್ಲೆಗೆ
ಆಗಮಿಸಲು ಕಾರ್ಮಿಕರಿಂದ ಅರ್ಜಿ ಸಲ್ಲಿಕೆಯಾಗಿದೆ. ಕ್ವಾರಂಟೈನ್ ಕಡ್ಡಾಯ: ಈಗಾಗಲೇ ಹೊರಜಿಲ್ಲೆ, ರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವ ಚಾಮರಾಜನಗರ ಜಿಲ್ಲೆಯ ಕಾರ್ಮಿಕರಿಗೆ ಸ್ಕ್ರಿನಿಂಗ್ ಮಾಡಲಾಗುತ್ತಿದೆ. ಬಳಕವೇ ಅವರ ಗ್ರಾಮಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತದೆ.
ಆಯಾ ತಾಲೂಕಿನ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಲಾಗಿರುವ ಹಾಸ್ಟೆಲ್‌ಗಳಲ್ಲಿ ಹೊರರಾಜ್ಯದಿಂದ ಬಂದ ಕಾರ್ಮಿಕರು ಕಡ್ಡಾಯವಾಗಿ 14 ದಿನ ಕ್ವಾರೆಂಟೈನ್‌ನಲ್ಲಿರಬೇಕಾಗುತ್ತದೆ. ಅಗತ್ಯ ತಪಾಸಣೆ ಮಾಡಿ ಸುರಕ್ಷಿತವಾಗಿ ಅವರ ಗ್ರಾಮಗಳಿಗೆ ಕಳುಹಿಸಿಕೊಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಶಿಸ್ತುಬದ್ದವಾಗಿ ನಿರ್ವಹಿಸುತ್ತಿದೆ. ಇದಕ್ಕಾಗಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ತಿಳಿಸಿದ್ದಾರೆ.