ಬೆಂಗಳೂರು: ಸ್ನೇಹಿತನ ಪಿಸ್ತೂಲ್ ಕದ್ದು ರೌಡಿಶೀಟರ್‌ನನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೇಗೂರು ಮೈಲಸಂದ್ರ ರಸ್ತೆಯ ಕೋಟೆ ಬಂಡೆಯ ನಿವಾಸಿಗಳಾದ ಸಂತೋಷ್‌ಕುಮಾರ್ ಅಲಿಯಾಸ್ ಗುಲಾಟ (26) ಮತ್ತು ಆಸYರ್ ಅಲಿಯಾಸ್ ದೋಸಾ (24) ಬಂಧಿತರು. ಆರೋಪಿಗಳಿಂದ ಒಂದು ಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡು, 7 ಲಕ್ಷ ಮೌಲ್ಯದ ಆರು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕವಯಸ್ಸಿನಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿದ್ದ ಆರೋಪಿಗಳು, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ವರ್ತೂರು ಬಳಿ ನಡೆದಿದ್ದ ಜೆಸಿಬಿ ನಾರಾಯಣನ ಸಹಚರನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ, ಜೈಲು ಸೇರಿ, ಇತ್ತೀಚೆಗೆ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಮತ್ತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ಮಧ್ಯೆ ಜೈಲಿನಲ್ಲಿ ಮುಂಬೈ ಮೂಲದ ಗೌರವ್‌ಸಿಂಗ್ ಎಂಬಾತ ಪರಿಚಿತನಾಗಿದ್ದ. ಮೂವರೂ ಒಟ್ಟಿಗೆ ಹೊರಬಂದಿದ್ದರು. ಬಳಿಕ ಆಗಾಗ್ಗೆ ಭೇಟಿಯಾಗುತ್ತಿದ್ದು, ಗೌರವ್‌ಸಿಂಗ್ ಬಳಿಯಿದ್ದ ಪಿಸ್ತೂಲ್ ಕಳವು ಮಾಡಿ ಕೊಲೆಗೆ ಸಂಚು ರೂಪಿಸಿದ್ದರು ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದರು.
ಪಿಸ್ತೂಲ್ ಕಳವು: ಜೈಲಿನಿಂದ ಹೊರಬಂದಿದ್ದ ಆರೋಪಿಗಳು ಅಕ್ಷಯನಗರದ ಸುನೀಲ್ ಎಂಬಾತನ ಹತ್ಯೆಗೆ ಸಿದ್ಧತೆ ನಡೆಸಿದ್ದರು. ಅದಕ್ಕೆ ಪಿಸ್ತೂಲ್ ಖರೀದಿಸಲು ವಿಫಲ ಯತ್ನ ನಡೆಸಿದ್ದರು. ಗೌರವ್‌ಸಿಂಗ್ ಬಳಿ ಪಿಸ್ತೂಲ್ ಇರುವುದ ಮನಗಂಡಿದ್ದ ಆರೋಪಿಗಳು, ಮುಂಬೈಗೆ ತೆರಳಿದ್ದ ಗೌರವ್‌ಸಿಂಗ್‌ನನ್ನು ಬೆಂಗಳೂರಿಗೆ ಬರುವಂತೆ ಹೇಳಿ, ಬರುವಾಗ ಪಿಸ್ತೂಲ್ ತರುವಂತೆ ತಿಳಿಸಿದ್ದರು. ಬಳಿಕ ಆತನಿಂದ ಪಿಸ್ತೂಲ್ ಕದ್ದಿದ್ದರು.
ಇದೇ ಪಿಸ್ತೂಲ್‌ನಿಂದ ಸುನೀಲ್‌ನನ್ನು ಕೊಲೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಬಂಧನದಿಂದ ಬೊಮ್ಮನಹಳ್ಳಿ, ಹುಳಿಮಾವು, ಬನ್ನೇರುಘಟ್ಟ, ಎಲೆಕ್ಟ್ರಾನಿಕ್ ಸಿಟಿಗಳಲ್ಲಿ ದಾಖಲಾಗಿದ್ದ 15ಕ್ಕೂ ಅಧಿಕ ದರೋಡೆ ಪ್ರಕರಣಗಳು ಪತ್ತೆಯಾಗಿವೆ ಎಂದು ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದರು.