ರಾಮನಗರ: ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಸವಾರ, ಇಬ್ಬರು ಮಕ್ಕಳು ಸೇರಿ ಒಟ್ಟು ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟು, ಓರ್ವ ಮಹಿಳೆ ಗಂಭೀರ ಗಾಯಗೊಂಡ ಘಟನೆ ಜ.9ರ ಗುರುವಾರ ಸಂಭವಿಸಿದೆ.
ರಾಮನಗರದಿಂದ ಕನಕಪುರಕ್ಕೆ ತೆರಳುತ್ತಿದ್ದ ಬಸ್ ಹಾಗೂ ಕನಕಪುರದಿಂದ ರಾಮನಗರಕ್ಕೆ ಆಗಮಿಸುತ್ತಿದ್ದ ಬೈಕ್ ನಡುವೆ ತಾಲೂಕಿನ ಅಚ್ಚಲು ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ.
ಒಂದು ಹೆಣ್ಣು ಮಗು, ಒಬ್ಬ ಬಾಲಕ ಹಾಗೂ ತಂದೆ ಮೃತಪಟ್ಟವರು. ಇದೇ ಬೈಕ್ ನಲ್ಲಿದ್ದ ಮಹಿಳೆಯೊಬ್ಬರ ಸ್ಥಿತಿ ಗಂಭೀರಗೊಂಡಿದೆ ಎಂದು ತಿಳಿದು ಬಂದಿದೆ. ಟಿವಿಎಸ್ ವಾಹನದಲ್ಲಿ ರಾಮನಗರ ಕಡೆ ಬರುತ್ತಿದ್ದ ಬೈಕ್ ಸವಾರರು ಎನ್ನಲಾಗಿದೆ.
ಅಪಘಾತ ಹಿನ್ನೆಲೆ ರಾಮನಗರ-ಕನಕಪುರ ರಸ್ತೆಯಲ್ಲಿ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ರಸ್ತೆಯಲ್ಲಿಯೇ ಮೃತದೇಹಗಳು ಬಿದ್ದಿದ್ದು, ಅಂಬ್ಯುಲೆನ್ಸ್ ತೆರಳೋದಕ್ಕೂ ಆಗದ ಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ.