ಬೆಂಗಳೂರು: ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಕಾಂಕ್ಷಿಗಳಿಂದ ಕೋಟ್ಯಂತರ ರೂ. ಹಣ ಪಡೆದು ವಂಚಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಒಬ್ಬ ಮಹಿಳಾ ಪೇದೆ ಸೇರಿ, ಪೊಲೀಸ್ ಇಲಾಖೆಯ ಐವರು ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಪೇದೆ ಲಕ್ಷ್ಮೀಕಾಂತ್ ಎಂಬಾತನನ್ನು ಬಂಧಿಸಿದ್ದ ಪೊಲೀಸರು, ಈತನ ಮಾಹಿತಿ ಮೇರೆಗೆ ರಾಜೇಶ್, ಲೋಕೇಶ್, ಕೆ.ಪಿ.ರಾಜೇಶ್, ಎಚ್. ನಾಗರಾಜ್, ಶಬಾನಾ ಬೇಗಂ ಎಂಬುವವರನ್ನು ಬಂಧಿಸಿದ್ದಾರೆ.
ಪೊಲೀಸ್ ನೇಮಕಾತಿ ಘಟಕದ ಕಚೇರಿ ಅಧೀಕ್ಷಕ ರಾಜೇಶ್, ವಿವಿಧ ಡಿಜಿಪಿಗಳ ಆಪ್ತ ಸಹಾಯಕನಾಗಿದ್ದ ಎಚ್.ನಾಗರಾಜ್, ಸಿಎಆರ್‌ನಲ್ಲಿ ಪೇದೆಗಳಾಗಿದ್ದ ಲಕ್ಷ್ಮೀಕಾಂತ, ಲೋಕೇಶ್ ಹಾಗೂ ಉಪ್ಪಾರಪೇಟೆ ಸಂಚಾರ ಠಾಣೆ ಮುಖ್ಯಪೇದೆಯಾಗಿ ಶಬಾನಾ ಬೇಗಂ ಕೆಲಸ ಮಾಡುತ್ತಿದ್ದಾರೆ. ಆರೋಪಿಗಳು ಕಳೆದ ನಾಲ್ಕೈದು ವರ್ಷಗಳಿಂದ ಅಕ್ರಮ ನಡೆಸುತ್ತಿದ್ದು, ಇದುವರೆಗೂ 14 ಕೋಟಿ ರೂ.ಗೂ ಅಧಿಕ ಹಣ ವಂಚಿಸಿದ್ದಾರೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ನೇಮಕಾತಿ ಕಚೇರಿಯಲ್ಲಿ ಬಿಲ್ ಮಾಡುವುದು, ವೇತನ, ಟಪಾಲು, ನಿಯಮಗಳು ಸೇರಿದಂತೆ ಕ್ಲರಿಕಲ್ ಕೆಲಸ ಮಾಡುತ್ತಿದ್ದ ರಾಜೇಶ್ ಜತೆ ಬಂಧಿತ ಆರೋಪಿ ಪೇದೆ ಲಕ್ಷ್ಮೀಕಾಂತ ಹಾಗೂ ಲೋಕೇಶ್ ನಿರಂತರ ಸಂಪರ್ಕದಲ್ಲಿದ್ದರು. ಅಲ್ಲದೇ, ಇವರು ಆಗಾಗ್ಗೆ ಭೇಟಿ ಮಾಡುತ್ತಿದ್ದರು. ಉದ್ಯೋಗ ಕೇಳಿಕೊಂಡು ಬರುವವರಿಂದ ಹಣ ಪಡೆಯಲು ಆರೋಪಿ ಲಕ್ಷ್ಮೀಕಾಂತ್, ರಾಜೇಶ್ ಅವರನ್ನೇ ಭೇಟಿ ಮಾಡಿಸುತ್ತಿದ್ದ.
ನೇಮಕಾತಿ ಘಟಕದಲ್ಲೇ ಕೆಲಸ ಮಾಡುತ್ತಿದ್ದ ಕಾರಣ ನಿಜಕ್ಕೂ ಇವರು ಕೆಲಸ ಕೊಡಿಸುವವರೇ ಎಂದು ನಂಬಿದ
ರಾಜ್ಯದ ಕೋಲಾರ, ಬೆಳಗಾವಿ, ವಿಜಯಪುರ, ಬೆಂಗಳೂರು, ಕಲಬುರಗಿ, ಬಾಗಲಕೋಟೆ ಜಿಲ್ಲೆಯ ಅಮಾಯಕ ನೂರಾರು ಮಂದಿ ನಿರುದ್ಯೋಗಿಗಳು ಕೋಟ್ಯಂತರ ರೂ. ಹಣ ಕೊಟ್ಟು ವಂಚನೆಗೊಳಗಾಗಿದ್ದಾರೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಕೆಲಸ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿರುವ ಕುರಿತು ದೂರುಗಳು
ಬಂದ ಹಿನ್ನೆಲೆಯಲ್ಲಿ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ರಾಘವೇಂದ್ರ ಔರಾದ್ಕರ್
ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ತನಿಖೆಗೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ
ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿ ಪೇದೆಗಳು ಕಳೆದ ಸುಮಾರು ನಾಲ್ಕು ವರ್ಷಗಳಿಂದ ಸಾರ್ವಜನಿಕರಿಂದ ಕೋಟ್ಯಂತರ ರೂ. ಹಣ ಪಡೆದು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.