Advertisement

MNC Company: ಬೆಂಗಳೂರು ಬಿಡಿ, ಆಂಧ್ರಕ್ಕೆ ಬನ್ನಿ: ನಾಯ್ಡು ಪುತ್ರ ಕ್ಯಾತೆ

12:57 AM Oct 25, 2024 | Team Udayavani |

ಅಮರಾವತಿ: ಈ ಹಿಂದೆ ಜುಲೈಯಲ್ಲಿ ಉದ್ಯೋಗ ಮೀಸಲು ಬಗ್ಗೆ ಚರ್ಚೆ ಏರ್ಪಟ್ಟಿದ್ದಾಗ ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪೆನಿಗಳನ್ನು (ಎಂಎನ್‌ಸಿ)ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಆಹ್ವಾನಿಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪುತ್ರ ಹಾಗೂ ಸಚಿವ ನಾರಾ ಲೋಕೇಶ್‌ ವಿವಾದ ಸೃಷ್ಟಿಸಿದ್ದರು. ಇದೀಗ ಮತ್ತೆ ಅದೇ ರೀತಿ ಆಹ್ವಾನ ಮಾಡಿರುವ ನಾರಾ ಲೋಕೇಶ್‌ ಮತ್ತೆ ವಿವಾದವೆಬ್ಬಿಸಿದ್ದಾರೆ.

Advertisement

ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯ ನಿರ್ವಹಣೆಯಲ್ಲಿ ಕರ್ನಾಟಕ ಸರಕಾರ ವಿಫ‌ಲವಾಗಿದೆ ಎಂದು ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ(ಐಎಫ್ಒ) ಮೋಹನ್‌ದಾಸ್‌ ಪೈ ಟೀಕಿಸಿ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ನಾರಾ ಲೋಕೇಶ್‌, ನಮಸ್ಕಾರ ಮೋಹನ್‌ದಾಸ್‌ ಪೈ ಸರ್‌. ಬೆಂಗಳೂರಿನಲ್ಲಿರುವ ಎಲ್ಲ ಎಂಎನ್‌ಸಿಗಳಿಗೂ ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ನಾವು ಆಹ್ವಾನ ನೀಡುತ್ತಿದ್ದೇವೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೊಸ ವ್ಯಾಪಾರ ಸ್ನೇಹಿ ನೀತಿಗಳನ್ನು ರಾಜ್ಯದಲ್ಲಿ ಪರಿಚಯಿಸಿದ್ದಾರೆ. ಉದ್ಯಮಗಳು ನಮ್ಮ ರಾಜ್ಯದ ಕಲ್ಯಾಣ ಹಾಗೂ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾವು ತಿಳಿದಿದ್ದೇವೆ.

ಎಂಎನ್‌ಸಿಗಳಿಗೆ ವಿಶ್ವದರ್ಜೆಯ ಮೂಲಸೌಕರ್ಯ ನೀಡಲು ಹಾಗೂ ಉತ್ತಮ ವ್ಯಾಪಾರಕ್ಕೆ ನೆರವಾಗುವ ವಾತಾವರಣ ಸೃಷ್ಟಿಸಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ.

ಅಭಿವೃದ್ಧಿ ಕಡೆ ಗಮನ ಹರಿಸಿ ಎಂದ ಪೈ
ನಾರಾ ಲೋಕೇಶ್‌ ಅವರ ಆಹ್ವಾನವನ್ನು ನಯವಾಗಿ ತಿರಸ್ಕರಿಸಿರುವ ಮೋಹನ್‌ದಾಸ್‌ ಪೈ, ಆಂಧ್ರಪ್ರದೇಶವು ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಹಿಂದಿನ ಜಗನ್‌ ರೆಡ್ಡಿ ನೇತೃತ್ವದ ಸರಕಾರ ರಾಜಧಾನಿ ಅಮರಾವತಿಯ ಅಭಿವೃದ್ಧಿಯನ್ನು ಅವಗಣಿಸಿದ್ದು, ರಾಜ್ಯದ ಮೇಲಿನ ನಂಬಿಕೆ ಕುಗ್ಗಿಸಿದೆ. ಹಿಂದಿನ ಸರಕಾರದಿಂದಾದ ಹಾನಿಯನ್ನು ಸರಿಪಡಿಸಿಕೊಂಡ ಬಳಿಕ ಆಂಧ್ರ ಬೃಹತ್‌ ಹೂಡಿಕೆದಾರರನ್ನು ಆಕರ್ಷಿಸಬಹುದಾಗಿದೆ.

ಅಮರಾವತಿ ಅಭಿವೃದ್ಧಿಯೆಡೆಗೆ ಗಮನ ಹರಿಸಿದರೆ ಹಿಂದಿನ ಸರಕಾರದಿಂದ ಕುಗ್ಗಿದ್ದ ನಂಬಿಕೆ ಮತ್ತೆ ಬರಬಹುದು. ಬಳಿಕ ಎಂಎನ್‌ಸಿಗಳು ಸ್ಥಳಾಂತರದ ಬಗ್ಗೆ ಚಿಂತಿಸಲಿವೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next