Advertisement

ಕುಖ್ಯಾತ ಮನೆಕಳ್ಳ ಜಪಾನ್‌ ರಾಜ ಬಂಧನ

01:11 AM May 15, 2019 | Lakshmi GovindaRaj |

ಬೆಂಗಳೂರು: ಕೆಲ ವರ್ಷಗಳ ಹಿಂದೆ ಪೊಲೀಸರ ಬಾಕ್ಮಿದಾರನಾಗಿದ್ದ ಹಾಗೂ ಪೊಲೀಸರ ತನಿಖಾ ವಿಧಾನ ತಿಳಿದುಕೊಂಡು ತನ್ನದೇ ಪ್ರತ್ಯೇಕ ತಂಡ ಕಟ್ಟಿಕೊಂಡು ಮನೆ ಕಳ್ಳತನ ಮಾಡುತ್ತಿದ್ದ ರಾಜ ಅಲಿಯಾಸ್‌ ಜಪಾನ್‌ ರಾಜ, ಆತನ ಸಹೋದರ ಸೇರಿ ಮೂವರು ಮತ್ತೂಮ್ಮೆ ಕೆ.ಪಿ.ಅಗ್ರಹಾರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಜೆ.ಪಿ.ನಗರದ ಬಿಳೇಕಳ್ಳಿ ನಿವಾಸಿ ರಾಜ ಅಲಿಯಾಸ್‌ ಜಪಾನ್‌ ರಾಜ (40), ಆತನ ಸಹೋದರ ಗೋಪಿ (43) ಮತ್ತು ಸ್ನೇಹಿತ ಮಾಗಡಿ ರಸ್ತೆಯ ಡೇವಿಡ್‌ (34) ಬಂಧಿತರು.

ನಗರದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಎಸಗಿದ್ದ 44 ಮನೆಗಳ್ಳನ ಪ್ರಕರಣಗಳಲ್ಲಿ ಡಿ.12ರಂದು ಜೈಲು ಸೇರಿದ್ದ ಜಪಾನ್‌ ರಾಜ, ಫೆಬ್ರವರಿಯಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ಅನಂತರ ತನ್ನ ಸಹೋದರ ಮತ್ತು ಸ್ನೇಹಿತನ ಜತೆ ಸೇರಿಕೊಂಡು 18 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಬಂಧಿತರಿಂದ 35 ಲಕ್ಷ ರೂ. ಮೌಲ್ಯದ 1 ಕೆ.ಜಿ.119 ಗ್ರಾಂ ತೂಕದ ಚಿನ್ನಾಭರಣ ಮತ್ತು 60 ಸಾವಿರ ರೂ. ಮೌಲ್ಯದ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜ.26ರಂದು ಡೇವಿಡ್‌ ಹಾಗೂ ಗೋಪಿ ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯ ಮರಿಯಪ್ಪನಪಾಳ್ಯ ನಿವಾಸಿ ವೆಂಕಟೇಶ್‌ ಎಂಬುವರ ಬೀಗ ಹಾಕಿದ ಮನೆಯಲ್ಲಿ ಕಳ್ಳತನ ಮಾಡಿ, 2,70,000 ರೂ. ಮೌಲ್ಯದ 123 ಗ್ರಾಂ ತೂಕದ ಚಿನ್ನಾಭರಣ,

Advertisement

30 ಸಾವಿರ ರೂ. ನಗದು ಕಳವು ಮಾಡಿ ಪರಾರಿಯಾಗಿದ್ದರು. ಪ್ರಕರಣದ ತನಿಖೆಕೈಗೊಂಡ ಪೊಲೀಸರು ಇತ್ತೀಚೆಗಷ್ಟೇ ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಜಪಾನ್‌ ರಾಜನ ಕೈವಾಡ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಎಂದು ಪೊಲೀಸರು ಹೇಳಿದರು.

ಕೃತ್ಯ ಹೇಗೆ?: ಕೆಲ ವರ್ಷಗಳ ಹಿಂದೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ ರಾಜ ಸ್ಥಳೀಯ ಪೊಲೀಸರಿಗೆ ಬಾತ್ಮೀದಾರನಾಗಿದ್ದ. ಆ ವೇಳೆಯೇ ಪೊಲೀಸರು ಯಾವ ಪ್ರಕರಣದಲ್ಲಿ ಹೇಗೆ ತನಿಖೆ ನಡೆಸುತ್ತಾರೆ ಎಂದು ತಿಳಿದುಕೊಂಡಿದ್ದ. ಅನಂತರ ಮೋಜಿನ ಜೀವನಕ್ಕಾಗಿ ಹತ್ತು ವರ್ಷಗಳಿಂದ ಮನೆಗಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ರಾಜ ತನ್ನ ಸಹಚರರ ಜತೆ ಸೇರಿಕೊಂಡು ಮನೆ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದ.

ಮೊದಲಿಗೆ ಕಳವು ಮಾಡಿದ ದ್ವಿಚಕ್ರ ವಾಹನಗಳಲ್ಲಿ ಮೂವರು ಆರೋಪಿಗಳು ನಗರದ ಪ್ರತಿಷ್ಠಿತ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ದಿನಗಟ್ಟಲೇ ಮನೆ ಮುಂದೆ ಬಿದ್ದಿರುವ ಪೇಪರ್‌, ರಂಗೋಲಿ ಹಾಕದೆ ಕಸ ಬಿದ್ದಿರುವ ಮನೆಗಳನ್ನು ಗುರುತಿಸುತ್ತಿದ್ದರು. ಬಳಿಕ ಅದೇ ದಿನ ರಾತ್ರಿ ಅಥವಾ ಮರು ದಿನ ಬೆಳಗ್ಗೆ ವೇಳೆಯಲ್ಲಿ ಅಂತಹ ಮನೆಗಳ ಬಳಿ ಬಂದು ಕೃತ್ಯಕ್ಕೆ ಸಜ್ಜಾಗುತ್ತಿದ್ದರು.

ಈ ಪೈಕಿ ರಾಜ ಅಲಿಯಾಸ್‌ ಜಪಾನ್‌ ರಾಜ ತನ್ನ ಬಳಿಯಿದ್ದ ಕಬ್ಬಿಣದ ಆಯುಧದಿಂದ ಮನೆಗಳ ಬೀಗ ಹಾಗೂ ಚೀಲಕಗಳನ್ನು ಮೀಟಿ ಒಳ ಪ್ರವೇಶಿ, ಮನೆಗಳಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ. ಈ ಸಂದರ್ಭದಲ್ಲಿ ಸಹೋದರ ಗೋಪಿ ಹಾಗೂ ಡೇವಿಡ್‌ ಮನೆಯ ಹೊರಗಡೆ ನಿಂತು ನಿಗಾವಹಿಸುತ್ತಿದ್ದರು.

ಪತ್ನಿಯರ ಸಾಥ್‌: ಜಪಾನ್‌ ರಾಜನಿಗೆ ಇಬ್ಬರು ಪತ್ನಿಯರಿದ್ದು, ಕಳವು ಮಾಡಿದ ಚಿನ್ನಾಭರಣಗಳನ್ನು ಹೆಂಡತಿಯರ ಮೂಲಕ ಜ್ಯುವೆಲ್ಲರಿ ಅಂಗಡಿ ಮತ್ತು ಕೆಲ ಬ್ಯಾಂಕ್‌ಗಳಲ್ಲಿ ಅಡಮಾನ ಇಟ್ಟು ಹಣ ಪಡೆಯುತ್ತಿದ್ದರು. ಇದೇ ಹಣದಲ್ಲಿ ಮೋಜು-ಮಸ್ತಿ, ಪ್ರವಾಸ ಎಂದೆಲ್ಲಾ ಐಷಾರಾಮಿ ಜೀವನ ನಡೆಸುತ್ತಿದ್ದರು.

ಪ್ರತಿ ಬಾರಿ ಕೃತ್ಯವೆಸಗಿದ ಬಳಿಕ ತಮಿಳುನಾಡು, ಆಂಧ್ರಪ್ರದೇಶ, ಕೇರಳದ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದರು. ಅಲ್ಲದೆ, ಜಪಾನ್‌ ರಾಜ ದಿನಕ್ಕೆ ಐದು ಸಾವಿರ ರೂ. ಖರ್ಚು ಮಾಡುತ್ತಿದ್ದ ಎಂಬುದು ವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next