ಬೆಂಗಳೂರು: ಬಿಬಿಎಂಪಿಯ ಕೊನೆಯ ವರ್ಷದ ಅಧಿಕಾರವಧಿಯನ್ನೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವೇ ನಡೆಸಲು ವಾಮಮಾರ್ಗಗಳನ್ನು ಅನುಸರಿಸಲಾಗುತ್ತಿದೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮತದಾರರ ಪಟ್ಟಿಗೆ, ಅಕ್ರಮವಾಗಿ ಹೆಸರು ಸೇರಿಸಿ, ಮತ್ತೆ ಕೊನೇ ವರ್ಷದಅಧಿಕಾರ ತಾವೇ ನಡೆಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಾಗಿವೆ ಎಂದು ಹೇಳಿದರು.
ದಾವಣಗೆರೆಯ ಮೋಹನ್ ಕೊಂಡಜ್ಜಿ ಸೇರಿದಂತೆ ಬೇರೆ ಜಿಲ್ಲೆಗಳ ಒಟ್ಟು ಮೂವರು ವಿಧಾನ ಪರಿಷತ್ ಸದಸ್ಯರನ್ನು ಬೆಂಗಳೂರು ಮತದಾರರ ಪಟ್ಟಿಗೆ ಅಕ್ರಮವಾಗಿ ಸೇರಿಸಲಾಗಿದೆ. ಬೆಂಗಳೂರಿನ ಜನ ಬಿಜೆಪಿಯನ್ನು ಗೆಲ್ಲಿಸಿದ್ದರೂ,
ಕಾಂಗ್ರೆಸ್ ಮುಖಂಡರು ಬೇರೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರ ಹೆಸರನ್ನು ಪಟ್ಟಿಗೆ ಸೇರಿಸಿ, ಅಕ್ರಮವಾಗಿ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಇದರ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಕಾನೂನು ಓದಿದ್ದಾರೆ. ಆದರೆ, ಇದುವೇನಾ ಅವರು ನಡೆಸುವ ಪ್ರಜಾಪ್ರಭುತ್ವ, ಅಧಿಕಾರದಾಸೆಗೆ ಕಳ್ಳ ಮಾರ್ಗ ಹಿಡಿಯುವುದು ಎಷ್ಟು ಸರಿ ಎಂದು ಸಿದ್ದರಾಮಯ್ಯ ಅವರ ವಿರುದ್ಧವೂ ಪದ್ಮನಾಭರೆಡ್ಡಿ ವಾಗ್ಧಾಳಿ ನಡೆಸಿದರು.
ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಕೂಡ ಈ ಹಿಂದೆ ಇದೇ ರೀತಿ ಒಮ್ಮೆ ಕಳ್ಳ ಮತ ಹಾಕಿದ್ದರು. ನಾವು ಹೋರಾಟ ಮಾಡುತ್ತಿದ್ದಂತೆ ಪರಮೇಶ್ವರ್ ಮೌನ ವಹಿಸಿದ್ದರು. ಬೋಗಸ್ ಓಟುಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ದೂರು ನೀಡಿರೂ ಬಿಬಿಎಂಪಿ ಆಯುಕ್ತರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.
ಆಯುಕ್ತರನ್ನು ಕೈಗೊಂಬೆಯಾಗಿ ಮಾಡಿಕೊಳ್ಳಲಾಗಿದೆ. ಇದರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಮೇಯರ್ ಗಂಗಾಂಬಿಕೆ ಹಾಗೂ ಆಡಳಿತ ಪಕ್ಷದ ನಾಯಕ ವಾಜಿದ್ ನಿರಾಕರಿಸಿದ್ದಾರೆ.