Advertisement

ಗ್ರಾಮಸಭೆಗೆ ಬಡಿದ “ಮದ್ಯ’ಗ್ರಹಣ

06:30 AM Aug 08, 2017 | Team Udayavani |

ಪಡುಬಿದ್ರಿ: ನಡ್ಪಾಲು ಹಾಗೂ ಪಾದೆಬೆಟ್ಟು ಗ್ರಾಮ ವ್ಯಾಪ್ತಿಯನ್ನು ಒಳಗೊಂಡಿರುವ ಪಡುಬಿದ್ರಿ ಗ್ರಾ.ಪಂ.ನ 2017 – 18ನೇ ಸಾಲಿನ ಪ್ರಥಮ ಗ್ರಾಮ ಸಭೆಗೆ ಪ್ರಖರ “ಅಬಕಾರಿ ಮದ್ಯ’ ಗ್ರಹಣವು ಬಡಿದಿದೆ. ಪಡುಬಿದ್ರಿ ಸ.ಮಾ.ಹಿ.ಪ್ರಾ. ಶಾಲೆ, ಸ.ಪ.ಪೂ.ಕಾಲೇಜು, ಅಂಗನವಾಡಿಗಳು, ಪ್ರಾ.ಆ.ಕೇಂದ್ರ, ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಜುಮ್ಮಾ ಮಸೀದಿಗಳ ವಠಾರದಲ್ಲಿ ಈಗಾಗಲೇ ತೆರೆದಿರುವ ಬಾರ್‌ ಒಂದನ್ನು ತೆರವುಗೊಳಿಸಬೇಕೇಂಬ ಸಾರ್ವಜನಿಕರ ಆಕ್ರೋಶವು ಇಡೀ ದಿನದ ಗ್ರಾಮಸಭೆಯನ್ನು ತಲ್ಲಣಗೊಳಿಸಿತು. ಗ್ರಾ.ಪಂ.ಅಧ್ಯಕ್ಷರು, ಸದಸ್ಯರು, ಬಂದಿದ್ದ ಅಧಿಕಾರಿಗಳ ಬೆವರಿಳಿಸಿತ್ತು.

Advertisement

ಶ್ರೀ ದೇವಿ ಸಭಾಭವನದಲ್ಲಿ ಆ. 7ರಂದು ನಡೆದಿದ್ದ ಗ್ರಾಮಸಭೆಯ ಆರಂಭದಲ್ಲೇ ದಸಂಸ ನಾಯಕ ಲೋಕೇಶ್‌ ಕಂಚಿನಡ್ಕ ಸೇರಿದಂತೆ ಹಿಂದೂ, ಮುಸಲ್ಮಾನ್‌ ಸಮುದಾಯಕ್ಕೆ ಸೇರಿದ ಬೆಂಗ್ರೆ, ಕಾಡಿಪಟ್ಣ ಪ್ರದೇಶ ಸೇರಿದಂತೆ ಎಲ್ಲಾ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಗ್ರಾ. ಪಂ. ಉಪಾಧ್ಯಕ್ಷ, ವಿವಾದಿತ ಬಾರ್‌ ಮಾಲಕರ ಸಹೋದರ ವೈ. ಸುಕುಮಾರ್‌ ಅನುಪಸ್ಥಿತಿ ಹಾಗೂ ಬಾರ್‌ ತೆರೆದಿರುವ ಬಳಿಕ ಅಲ್ಲಿ ನಡೆಯುತ್ತಿರುವ ಸಮಾಜ ಘಾತುಕ ನಡವಳಿಕೆಗಳ ಬಗೆಗೆ ಗ್ರಾ. ಪಂ. ಗಮನಸೆಳೆದರು. ಗ್ರಾಮಸಭೆಯ ನಿರ್ಣಯದೊಂದಿಗೆ ಬಾರ್‌ಗೆ ಬೀಗ ಜಡಿಯಲೇ ಬೇಕೆಂಬ ತಮ್ಮ ಬೇಡಿಕೆಗೆ ಅಚಲವಾಗಿದ್ದ ಗ್ರಾಮಸ್ಥರು ತಮ್ಮ ನಿರ್ಣಯದ ದಾಖಲಾತಿಗೆ ಆಗ್ರಹಿಸಿದ್ದರು. 

ಸಮಜಾಯಿಷಿಗೆ ಮಣಿಯದ ಗ್ರಾಮಸ್ಥರು
ಈ ಗಲಾಟೆ, ಗದ್ದಲಗಳ ನಡುವೆಯೇ ಗ್ರಾಮಸಭೆಗೆ ಬಂದಿದ್ದ ಉಡುಪಿ ತಾ. ಪಂ. ಅಧಿಕಾರಿ ಹರಿಕೃಷ್ಣ ಶಿವತ್ತಾಯ, ಜಿ. ಪಂ. ಸದಸ್ಯ ಶಶಿಕಾಂತ್‌ ಪಡುಬಿದ್ರಿ, ತಾ. ಪಂ. ಸದಸ್ಯ ದಿನೇಶ್‌ ಕೋಟ್ಯಾನ್‌ ಗ್ರಾಮಸಭೆ ಮುಂದುವರಿಯುವ ನಿಟ್ಟಿನಲ್ಲಿ ಸಂತ್ರಸ್ತರನ್ನು ಓಲೈಸಲು ನಡೆಸಿದ ಪ್ರಯತ್ನ, ಸಮಜಾಯಿಷಿಗಳೆಲ್ಲವೂ ವಿಫಲವಾದವು. ಈ ನಡುವೆ ಅಧಿಕಾರಿ ಹರಿಕೃಷ್ಣ ಶಿವತ್ತಾಯರು ಬಾರ್‌ ನಡೆಸಲಾಗುತ್ತಿರುವ ಪ್ರದೇಶ, ಅದರ ಸುತ್ತಲಿರುವ ಶಾಲೆಗಳು, ಶ್ರದ್ಧಾಕೇಂದ್ರಗಳು, ಜನವಸತಿ ಪ್ರದೇಶದ ಪರಿಶೀಲನೆಯನ್ನೂ ನಡೆಸಿ ಬಂದರು. ಬಾರ್‌ ಮುಚ್ಚುಗಡೆಯಾಗಬೇಕೆಂಬ ಸಾರ್ವತ್ರಿಕ ಅಭಿಪ್ರಾಯಗಳು ನೂರಕ್ಕೆ ನೂರು ಸರಿಯಾಗಿವೆ ಎಂಬ ಅಭಿಪ್ರಾಯವನ್ನು ಶಿವತ್ತಾಯ ಸಭೆ ಯಲ್ಲಿ ಪ್ರಕಟಪಡಿಸಿದರು. ಪಡುಬಿದ್ರಿ ಪ್ರಾ. ಆ. ಕೇಂದ್ರದ ವೈದ್ಯಾಧಿಕಾರಿ ಬಾರ್‌ ಪರವಾನಿಗೆ ಆರೋಗ್ಯ ಇಲಾಖೆಯ ಸುಪರ್ದಿಗೆ ಬರುವುದಿಲ್ಲ. ತಾವು ಬಾರ್‌ ಪರವಾಗಿ ಕರ್ತವ್ಯ ನಿರ್ವಹಿಸಿಲ್ಲವೆಂದರು. 

ಸಭೆಯಲ್ಲಿ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ರಾಜೇಶ್‌ ಶೇರಿಗಾರ್‌, ಕರ್ನಾಟಕ ರಕ್ಷಣಾ ವೇದಿಕೆಯ ನಿಜಾಮ್‌, ಜೈ ಕರ್ನಾಟಕ ಸಂಘಟನೆಯ ಅಬ್ದುಲ್‌ ರಹಿಮಾನ್‌ ಮತ್ತಿತರರು ಸಾರ್ವಜನಿಕ ಆಕ್ಷೇಪಣೆಗಳ ನಡುವೆ ನಡೆಸಲಾಗುತ್ತಿರುವ ಬಾರನ್ನು ಸಾಮಾಜಿಕ ಸ್ವಾಸ್ಥವನ್ನು ಕಾಪಾಡುವ ನಿಟ್ಟಿನಲ್ಲಿ ಕಟ್ಟಡ ಪರವಾನಿಗೆಯನ್ನು ರದ್ದುಗೊಳಿಸಲು ಸೂಕ್ತ ಕ್ರಮ ಕೈಗೊಂಡು ಗ್ರಾಮಸಭೆಯನ್ನು ಮುಂದುವರಿಸುವಂತೆ ಆಗ್ರಹಿಸಿದರು. 

ಗ್ರಾಮಸಭೆಯೊಳಗೊಂದು ಪಂ. ಸದಸ್ಯರ ಸಭೆ
ಗ್ರಾಮಸ್ಥರ ಆಕ್ರೋಶಕ್ಕೆ ಮಣಿದು ಗ್ರಾಮಸಭೆಯ ನಡುವೆಯೇ ಗ್ರಾಮಸಭೆಯ ನೋಡೆಲ್‌ ಅಧಿಕಾರಿ ಪಶು ಸಂಗೋಪನಾ ಇಲಾಖೆಯ ಡಾ | ದಯಾನಂದ ಪೈ, ಗ್ರಾ. ಪಂ. ಪಿಡಿಒ ಪಂಚಾಕ್ಷರೀ ಸ್ವಾಮಿ, ಜಿ. ಪಂ., ತಾ. ಪಂ. ಸದಸ್ಯರು,  ಪಂಚಾಯತ್‌ ಸದಸ್ಯರೊಂದಿಗೆ ಪಂಚಾಯತ್‌ ಅಧ್ಯಕ್ಷೆ ದಮಯಂತಿ ವಿ. ಅಮೀàನ್‌ ಗ್ರಾಮಸಭೆಯ ನಿರ್ಣಯವನ್ನು ಕೈಗೊಳ್ಳಲು ನಡೆಸಿದ ತುರ್ತು ಸಭೆಯು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮುಂದುವರಿಯಿತು. ಮತ್ತೆ ಮುಂದುವರಿದ ಗ್ರಾಮಸಭೆಯಲ್ಲಿ ಪಡುಬಿದ್ರಿ ಪಂಚಾಯತ್‌ ವಿವಾದಿತ ಬಾರ್‌ ಮಾಲಕರಿಗೆ ನೀಡಿರುವ ಕಟ್ಟಡ ಪರವಾನಿಗೆ ಹಾಗೂ ನಿರಾಕ್ಷೇಪಣಾ ಪತ್ರವನ್ನು ರದ್ದುಗೊಳಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

Advertisement

ಗ್ರಾಮಸಭೆಗೆ ಅಬಕಾರಿ ಅಧಿಕಾರಿಗಳ ಪ್ರವೇಶ, ಉದ್ದಟತನದ ಉತ್ತರ
ಜಿ. ಪಂ. ಸದಸ್ಯ ಶಶಿಕಾಂತ್‌ ಪಡುಬಿದ್ರಿ ಅಬಕಾರಿ ಜಿಲ್ಲಾಧಿಕಾರಿ ರೂಪಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಇಲ್ಲಿನ ಜನತೆಯ ಆಕ್ರೋಶದ ಬಗೆಗೆ ವಿವರಿಸಿದರು. ತಾನು ಆ ಕೂಡಲೇ ಸಭೆಗೆ ಅಬಕಾರಿ ಅಧಿಕಾರಿಗಳನ್ನು ಸಭೆ ನಡೆವಲ್ಲಿಗೆ ರವಾನಿಸುವುದಾಗಿ ಹೇಳಿದರು. ಹಾಗೆ ಪಡುಬಿದ್ರಿ ಗ್ರಾಮಸಭೆಗೆ ಅಬಕಾರಿ ಸಬ್‌ ಇನ್ಸ್‌ಪೆಕ್ಟರ್‌ ಚಂದ್ರಶೇಖರ್‌, ಗೋಪಾಲ್‌ ಮತ್ತಿತರರು ಆಗಮಿಸುವಂತಾಯಿತು. ತಮಗೊಂದು ಮನವಿ ನೀಡಿರಿ. ಪರಿಶೀಲಿಸುತ್ತೇವೆ ಎಂದಾಗ ನಿಮಗೆ ಐದು ಮನವಿಗಳನ್ನು ಈ ಹಿಂದೆಯೇ ನೀಡಿದ್ದೇವೆ. ಅದಕ್ಕುತ್ತರ ಬಯಸಿದ್ದೇವೆ ಎಂದು ಗ್ರಾಮಸ್ಥರು ಆಗ್ರಹಿಸಿದರೂ ತಾವೇನೂ ಮಾಡುವಂತಿಲ್ಲ. ಅಬಕಾರಿ ಕಮಿಶನರ್‌ಗೆ ದೂರು ನೀಡಿರಿ. ಮುಂದಿನ ಕ್ರಮ ಅವರು ಕೈಗೊಳ್ಳುತ್ತಾರೆ. ಅಲ್ಲದೇ ನಿಮ್ಮ ಗ್ರಾಮ ಪಂಚಾಯತ್‌ ಅಥವಾ ಗ್ರಾಮಸಭೆಯು ಅಬಕಾರಿ ಕಾನೂನಿನ ಮುಂದೆ ಏನೂ ಮಾಡಲಾಗದು ಎಂಬ ಉದ್ದಟತನದ ಉತ್ತರವನ್ನು ಅಬಕಾರಿ ಅಧಿಕಾರಿ ಚಂದ್ರಶೇಖರ್‌ ಸಭೆಗೆ ನೀಡಿದರು. ಆದರೆ ಈ ಉತ್ತರಗಳಿಗೆಲ್ಲಾ ಜನತೆಯ ಧಿಕ್ಕಾರ, ಆಕ್ರೋಶಗಳ ಮಧ್ಯೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬರಿಗೈಲಿ ತಂಡವು ವಾಪಸಾಯಿತು.

Advertisement

Udayavani is now on Telegram. Click here to join our channel and stay updated with the latest news.

Next