Advertisement
ಕಳೆದ ಕೆಲವು ವರ್ಷಗಳಿಂದ ಹಲವಾರು ಕಂಪನಿಗಳು ಓವರ್ ದಿ ಏರ್ ಚಾರ್ಜಿಂಗ್ ನನ್ನು ಅಭಿವೃದ್ಧಿಪಡಿಸುವತ್ತ ಕಾರ್ಯನಿರ್ವಹಿಸುತ್ತಿವೆ. ಥೇಲ್ಸ್, ಅಫರ್ಮ್ಡ್ ನೆಟ್ ವರ್ಕ್, ಮೀಟಾಬೋರ್ಡ್ಸ್ ಇತ್ಯಾದಿ. ಹೈ ಫ್ರೀಕ್ವೆನ್ಸಿ ರೇಡಿಯೋ ತರಂಗಗಳನ್ನು ಬಳಸಿಕೊಂಡು, ದೂರದಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವತ್ತ ಇದು ಪ್ರಯತ್ನ ಮಾಡುತ್ತಿದೆ. ಇದರಿಂದಾಗಿ, ಅತ್ಯಂತ ದೂರದ ಪ್ರದೇಶಗಳಿಗೂ ಯಾವುದೇ ತಂತಿಯ ಸಹಾಯವಿಲ್ಲದೆ ವಿದ್ಯುತ್ ತಲುಪಿಸಬಹುದಾಗಿದೆ.
Related Articles
Advertisement
ಇನ್ನೂ ಮುಂದುವರೆಯಬಹುದಾದರೆ ಸೀಲಿಂಗ್ ನಲ್ಲಿರುವ ಲೈಟ್ ಗಳಿಂದ ಅಥವಾ ಪ್ಲಗ್ ಇನ್ ಮಾಡಿದ ಇತರ ವಿದ್ಯುತ್ ಉಪಕರಣಗಳ ಮೂಲಕ ನಮ್ಮ ಗ್ಯಾಜೆಟ್ ಗಾಳಿಯ ಮೂಲಕವೇ ವಿದ್ಯುತ್ ಪಡೆಯಬಹುದು. ಇದಲ್ಲದೆ, ವೈಫೈ ರೂಟರ್ ಗಳಂತೆ ಚಾರ್ಜಿಂಗ್ ಡಿವೈಸ್ ಗಳು ಬಂದರೂ ಅಚ್ಚರಿಯಿಲ್ಲ. ಅದನ್ನು ಒಂದು ಕಡೆ ಇಟ್ಟು, ಒಂದಷ್ಟು ಮೀಟರ್ ವ್ಯಾಪ್ತಿಯಲ್ಲಿ ನಮ್ಮ ಮೊಬೈಲ್ ಅಥವಾ ಇತರ ಸಾಧನಗಳನ್ನು ಇಟ್ಟರೆ ಸ್ವಯಂಚಾಲಿತವಾಗಿ ಚಾರ್ಜ್ ಆಗುವ ಉಪಕರಣ ಬರಬಹುದು.
ಕಳೆದ ಐದಾರು ವರ್ಷಗಳಿಂದ, ಒಂದಷ್ಟು ಕಂಪನಿಗಳು ಈ ಕುರಿತಂತೆ ಭರವಸೆಗಳನ್ನು ನೀಡುತ್ತಲೇ ಬಂದಿದೆ. ಗಾಳಿಯಲ್ಲಿ ಫೋನ್ ಚಾರ್ಜಿಂಗ್ ಸಾಧ್ಯವಿದೆ ಎಂದು ಕೆಲವರು ತೋರಿಸಿಕೊಟ್ಟದ್ದೂ ಇದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಇದು ಇನ್ನೂ ಮಾರುಕಟ್ಟೆಗೆ ಲಗ್ಗೆಯಿಟ್ಟಿಲ್ಲ.
“ಯಾವುದೇ ಒಬ್ಬ ವ್ಯಕ್ತಿಗೆ, ಗಾಳಿಯಲ್ಲಿ ಚಾರ್ಜಿಂಗ್ ಮಾಡುವುದು ಒಂದು ಕನಸು. ಇದು ಯಾರಿಗೇ ಆಗಲಿ, ಒಂದು ವಿಶಿಷ್ಟ ಅನುಭವನ್ನು ನೀಡುತ್ತದೆ. ಆದರೆ ಸಮಸ್ಯೆಯೆಂದರೆ, ಇದನ್ನು ನಿಜವಾಗಿಯೂ ಪ್ರಾಯೋಗಿಕವಾಗಿ ಹೊರತರಬೇಕಾದರೆ, ಹಲವಾರು ಅಡೆತಡೆಗಳಿವೆ” ಎಂದು ವೈಯರ್ ಲೆಸ್ ಚಾರ್ಜಿಂಗ್ ತಂತ್ರಜ್ಞಾನ ಕಂಪನಿಯಾದ ಐರಾದ ಮುಖ್ಯ ಕಾರ್ಯನಿರ್ವಾಹಕ ಜೇಕ್ ಸ್ಲಾಯಟ್ನಿಕ್ ಹೇಳಿದ್ದರು.
ಹೀಗಂತ ಯಾರೂ ತಮ್ಮ ಪ್ರಯತ್ನಗಳನ್ನು ನಿಲ್ಲಿಸಲಿಲ್ಲ. ಕಳೆದ ಒಂದೆರಡು ವರ್ಷಗಳಲ್ಲಿ, ಕನಿಷ್ಠ ನಾಲ್ಕು ರಿಂದ ಆರು ಕಂಪನಿಗಳು ಓವರ್ ದಿ ಏರ್ ಚಾರ್ಜಿಂಗ್ ಕುರಿತಾದ ತಮ್ಮ ಪರಿಕಲ್ಪನೆಗಳನ್ನು ಅನಾವರಣಗೊಳಿಸಿವೆ.
ಕೆಲ ತಿಂಗಳ ಹಿಂದಷ್ಟೇ, ‘ಕೇಬಲ್ ಅಥವಾ ಚಾರ್ಜಿಂಗ್ ಸ್ಟ್ಯಾಂಡ್ ಗಳಿಲ್ಲದ ಏರ್ ಚಾರ್ಜಿಂಗ್’ ಮಾಡೆಲ್ ಅನ್ನು ಚೀನಾದ ಸ್ಮಾರ್ಟ್ಫೋನ್ ಕಂಪನಿ ಒಪ್ಪೊ ಪ್ರಸ್ತುತಪಡಿಸಿತ್ತು. ತನ್ನ ಪ್ರದರ್ಶನ ವೀಡಿಯೊ ಒಂದರಲ್ಲಿ, ಚಾರ್ಜಿಂಗ್ ಸ್ಟಾ ಸ್ಟ್ಯಾಂಡ್ ನಿಂದ ಮೊಬೈಲ್ ಎತ್ತಿದರೂ ಚಾರ್ಜ್ ಆಗುತ್ತಿರುವುದನ್ನು ತೋರಿಸಿದ್ದರು.
ಆದರೆ, ಈ ವರ್ಷ ಜನವರಿಯಲ್ಲಿ, ಶಿಯೋಮಿ ಎಂಐ ಕಂಪನಿಯು ಏರ್ ಚಾರ್ಜಿಂಗ್ ಅನ್ನು ಲೇವಡಿ ಮಾಡಿತ್ತು. ಅದೇ ತಿಂಗಳು, “ಮೊಟೊರೊಲಾ ಒನ್ ಹೈಪರ್” ಎಂದು ಕರೆಯಲ್ಪಡುವ ಡಿಸ್ಟೆನ್ಸ್ ಚಾರ್ಜಿಂಗ್ ಕೇಂದ್ರವನ್ನು ಮೊಟೊರೊಲಾ ಕಂಪನಿಯು ಡೆಮೊ ಮಾಡಿ ತೋರಿಸಿತು. ಹಾಗೆಯೇ, ಟೋಕಿಯೊ ಮೂಲದ ಈಟರ್‌ಲಿಂಕ್ ಕಂಪನಿಯು, “ಏರ್‌ಪ್ಲಗ್” ಒಂದನ್ನು ಪರಿಚಯಿಸಿತು. ಇದು 65 ಅಡಿಗಳಷ್ಟು ದೂರದಲ್ಲಿರುವ ಸಾಧನಗಳನ್ನು ಚಾರ್ಜ್ ಮಾಡಬಹುದು ಎಂದು ಅದು ಹೇಳಿಕೊಂಡಿತ್ತು.
ಇದನ್ನೂ ಓದಿ : ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯ ಪರಿಹಾರದ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ : ಶೆಟ್ಟರ್
ಏರ್ ಚಾರ್ಜಿಂಗ್ ಕೇಂದ್ರಗಳನ್ನು ನಿಯೋಜಿಸಲು ಬಯಸುವ ಕಂಪನಿಗಳು ಹಲವಾರು ಸವಾಲುಗಳನ್ನು ಎದುರಿಸುತ್ತವೆ. ಅವುಗಳಲ್ಲಿ ಪ್ರಮುಖವಾದದ್ದು ಅಂತರದ ಬಗ್ಗೆ. ನಾವು ಪ್ರಸ್ತುತ ಬಳಸುವ ವೈಫೈ ರೂಟರ್‌ಗಳನ್ನೇ ಗಮನಿಸಿದರೆ, ನಾವು ಅದಕ್ಕಿಂತ ದೂರ ಹೋದಷ್ಟು ಇಂಟರ್ ನೆಟ್ ವೇಗ ಕಡಿಮೆಯಾಗುತ್ತಾ ಸಾಗುತ್ತದೆ. ಹಾಗೆಯೇ, ಓವರ್ ದಿ ಏರ್ ಚಾರ್ಜಿಂಗ್ ರೂಟರ್‌ಗಳನ್ನು ಪರಿಚಯಿಸಿದರೂ, ದೂರ ಇದ್ದಷ್ಟು ಚಾರ್ಜಿಂಗ್ ವೇಗ ಕಡಿಮೆಯಾಗುತ್ತದೆ. ಹೀಗಾದಾಗ ಇದರ ಪ್ರಯೋಜನವೇನು?
ಅದೇ ರೀತಿ, ಗಾಳಿಯ ಮೂಲಕ ಚಲಿಸಬಲ್ಲ ರೇಡಿಯೊ-ಫ್ರೀಕ್ವೆನ್ಸಿಯ ಪ್ರಮಾಣವನ್ನು ಸೀಮಿತಗೊಳಿಸಲು ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್‌ನ ಕೆಲವೊಂದಿಷ್ಟು ಮಾರ್ಗಸೂಚಿಗಳಿವೆ. ವೇಗದ ವೈಯರ್ ಲೆಸ್ ಚಾರ್ಜಿಂಗ್ ಒದಗಿಸಲು ಈ ಮಾರ್ಗಸೂಚಿಗಳನ್ನು ಮೀರಿ ಹೋದರೆ, ಮನುಷ್ಯರ ಮೇಲೆ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಹೀಗೆ ಎಲ್ಲಾ ವಿಷಯಗಳಂತೆ ಓವರ್ ದಿ ಏರ್ ಚಾರ್ಜಿಂಗ್ ಕುರಿತಂತೆಯೂ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಹಾಗಂತ ಯಾವ ಇಂಜಿನಿಯರ್‌ಗಳೂ ಸಹ ಕೈ ಕಟ್ಟಿ ಕುಳಿತುಕೊಂಡಿಲ್ಲ. ಇನ್ನೂ ಕನಸಾಗಿಯೇ ಉಳಿದಿರುವ ಏರ್ ಚಾರ್ಜಿಂಗ್ ಸಿಸ್ಟಂ, ಮನುಷ್ಯರಿಗಾಗಲಿ, ಪರಿಸರಕ್ಕಾಗಲಿ ಯಾವುದೇ ಹಾನಿಯನ್ನುಂಟು ಮಾಡದೇ, ಉತ್ಕೃಷ್ಟ ಮಟ್ಟದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿ ಎಂಬುವುದೊಂದೇ ನಮ್ಮ ಆಶಯ.