ಸಿಂಧನೂರು: ಯಾವುದೇ ಕೆಲಸಕ್ಕೆ ಗುದ್ದಲಿ ಪೂಜೆ ನೆರವೇರಿಸಿದರೂ ಆ ಕೆಲಸ ಆರಂಭವಾಗಲು ತಿಂಗಳುಗಳೇ ಬೇಕಾಗುತ್ತವೆ ಎಂಬುದಕ್ಕೆ ಗಂಗಾನಗರ ಮಾರ್ಗದ 40ನೇ ಉಪಕಾಲುವೆ ಮಾರ್ಗದ ಕಾಲುವೆ ಸಾಕ್ಷಿಯಾಗಿದೆ.
ಶಾಸಕ ವೆಂಕಟರಾವ್ ನಾಡಗೌಡರು ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಎರಡು ತಿಂಗಳ ಬಳಿಕ ಸಿಸಿ ರಸ್ತೆಯನ್ನು ನಿರ್ಮಿಸುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಅಂದಾಜು ಎರಡು ಕೋಟಿ ರೂ.ವೆಚ್ಚದ ಕಾಮಗಾರಿಯನ್ನು ಆರಂಭಿಸಿರುವುದಕ್ಕೆ ಸುತ್ತಲಿನ ವಾರ್ಡ್‌ನ ಜನ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಳಂಬದ ಮೂಲ ಗುತ್ತಿಗೆ: ಕೆಆರ್‌ಐಡಿಎಲ್‌ಗೆ ಸಿಸಿ ರಸ್ತೆ ಕಾಮಗಾರಿ ನಿರ್ಮಾಣದ ಜವಾಬ್ದಾರಿ ವಹಿಸಿದ್ದರೂ ಅದನ್ನು ಕೈಗೆತ್ತಿಕೊಳ್ಳಲು ಏಜೆನ್ಸಿ ಮುಂದಾಗಲಿಲ್ಲ. ದಾಖಲೆಗಳಲ್ಲಿ ಇಂದಿಗೂ ಏಜೆನ್ಸಿಯೇ ಕೆಲಸ ಕೈಗೆತ್ತಿಕೊಂಡಿದೆ ಎಂಬ ಮಾಹಿತಿ ದೊರಕುತ್ತದೆ. ವಾಸ್ತವದಲ್ಲಿ ಉಪಗುತ್ತಿಗೆದಾರಿಕೆಯಲ್ಲಿ ಉಂಟಾದ ಆಂತರಿಕ ಗುದ್ದಾಟವೇ ವಿಳಂಬಕ್ಕೆ ಆಸ್ಪದ ನೀಡಿದೆ. ಜತೆಗೆ ಜೆಡಿಎಸ್‌ನಲ್ಲಿ ಗುತ್ತಿಗೆ ಕೆಲಸಕ್ಕೆ ಏರ್ಪಡುತ್ತಿರುವ ಆಂತರಿಕ ಕಚ್ಚಾಟಕ್ಕೂ ಈ ಕಾಮಗಾರಿ ನಿದರ್ಶನ ಎಂಬ ಮಾತು ಜೆಡಿಎಸ್ ವಲಯದಲ್ಲಿ ಕೇಳಿ ಬರುತ್ತಿವೆ. ಶಾಸಕ ವೆಂಕಟರಾವ್ ನಾಡಗೌಡರು ಗುದ್ದಲಿ ಪೂಜೆ ನೆರವೇರಿಸಿ ಕಾಲಮಿತಿಯಲ್ಲಿ ಕೆಲಸ ನಿರ್ವಹಿಸಿ ಎಂಬ ಸೂಚನೆ ಅಸಲಿ ಗುತ್ತಿಗೆದಾರರಿಗೆ ಮಾತ್ರ ಅನ್ವಯಿಸುತ್ತಿದೆ ಎಂಬ ಅಣಕ ವ್ಯಕ್ತವಾಗಿದೆ.
ದಾಸರಿ ಸತ್ಯನಾರಾಯಣ ಮೇಲುಗೈ: ರಾಯಚೂರು-ಗಂಗಾವತಿ ರಸ್ತೆಯ ಕಮ್ಮಾವಾರಿ ಭವನದಿಂದ ಆರಂಭವಾಗುವ ಸಿಸಿ ರಸ್ತೆ ಕಾಮಗಾರಿಗೆ 2 ಕೋಟಿ ರೂ.ಅಂದಾಜು ವೆಚ್ಚ ನಿಗದಿಯಾಗಿದೆ. ಈ ಕೆಲಸವನ್ನು ಉಪಗುತ್ತಿಗೆ ತೆಗೆದುಕೊಳ್ಳಲು ತೀವ್ರ ಪೈಪೋಟಿ ನಡೆದ ಹಿನ್ನೆಲೆಯಲ್ಲಿ ಎರಡು ತಿಂಗಳು ವಿಳಂಬವಾಗಿದೆ. ಈ ನಡುವೆ ಮಳೆಗಾಲದಲ್ಲಿ ರಸ್ತೆ ಹದಗೆಟ್ಟು ಹತ್ತಾರು ವಾರ್ಡ್‌ನ ಜನರು ಸಮಸ್ಯೆ ಅನುಭವಿಸಿದ್ದು, ಅದಕ್ಕೆ ಉತ್ತರ ಇಲ್ಲವಾಗಿದೆ.
ಕಾಲುವೆ ಮೇಲಿನ ರಸ್ತೆ ದುರಸ್ತಿಗೆ ಒತ್ತಾಯವಿತ್ತು. ಎರಡ್ಮೂರು ದಿನಗಳಿಂದ ಈ ಕೆಲಸ ಆರಂಭವಾಗಿದೆ. ವಿಳಂಬಕ್ಕೆ ಶಾಸಕರು ಕಾರಣವಲ್ಲ. ಮಳೆಗಾಲ ಇದ್ದ ಕಾರಣ ಕೆಲಸ ತಡವಾಗಿದ್ದು, ಎರಡು ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ.
-ಸತ್ಯನಾರಾಯಣ ದಾಸರಿ, 17ನೇ ವಾರ್ಡ್‌ನ ನಗರಸಭೆ ಸದಸ್ಯ. ಸಿಂಧನೂರು
-ಯಮನಪ್ಪ ಪವಾರ