Advertisement

ಯಶಸ್ವಿ ಜೈಸ್ವಾಲ್‌ನ ಸಾಧನೆ, ಅದರೊಂದಿಗಿನ ವೇದನೆ…

07:40 PM Oct 25, 2019 | Team Udayavani |

ಭಾರತ ಕ್ರಿಕೆಟ್‌ನಲ್ಲಿ ಒಬ್ಬ ಹೊಸ ಹುಡುಗನ ಹೆಸರು ಕೇಳಿ ಬರುತ್ತಿದೆ. ಕೆಲವು ತಿಂಗಳ ಹಿಂದೆ 17 ವರ್ಷದ ಈ ಹುಡುಗನ ಹೆಸರು ಬಹಳ ದೊಡ್ಡದಾಗಿಯೇನು ಕೇಳುತ್ತಿರಲಿಲ್ಲ. ಆತ ಪ್ರತಿಭಾವಂತನಾಗಿದ್ದರೂ, ಪ್ರಭಾವೀ ವೇದಿಕೆಯಲ್ಲಿ ಆತ ಕಾಣಿಸಿಕೊಳ್ಳದೇ ಹೋಗಿದ್ದರಿಂದ ಅದಕ್ಕಷ್ಟು ಮಹತ್ವ ಬಂದಿರಲಿಲ್ಲ. ವಿಜಯ್‌ ಹಜಾರೆ ಏಕದಿನ ಕೂಟದಲ್ಲಿ ಮುಂಬೈ ಪರ ಯಶಸ್ವಿ ಜೈಸ್ವಾಲ್‌ ಎಂಬ ಹುಡುಗ 203 ರನ್‌ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದೇ ತಡ, ಎಲ್ಲ ಮಾಧ್ಯಮಗಳಲ್ಲೂ ಆತನದ್ದೇ ಹೆಸರು ರಾರಾಜಿಸುತ್ತಿದೆ.

Advertisement

ದೇಶೀಯ ಏಕದಿನ ಪಂದ್ಯವೊಂದರಲ್ಲಿ ಅತೀ ಕಿರಿಯ ವಯಸ್ಸಿನಲ್ಲಿ ದ್ವಿಶತಕ ಬಾರಿಸಿದ ಆಟಗಾರ ಇವರು. ಜಾರ್ಖಂಡ್‌ ವಿರುದ್ಧ 154 ಎಸೆತಗಳಲ್ಲಿ 17 ಬೌಂಡರಿ, 12 ಸಿಕ್ಸರ್‌ ಸಮೇತ 203 ರನ್‌ ಚಚ್ಚಿದ್ದೇ ತಡ, ಜೈಸ್ವಾಲ್‌ ಸಾಧನೆಯ ಹಿಂದಿನ ವೇದನೆಯ ಕಥೆಗಳು ಹೊರಬಿದ್ದವು. ಬರೀ 11 ವರ್ಷಕ್ಕೆ ಉತ್ತರಪ್ರದೇಶದ ಬಡಕುಟುಂಬವನ್ನು ಬಿಟ್ಟು, ಕ್ರಿಕೆಟ್‌ ಆಡಲು ಜೈಸ್ವಾಲ್‌ ಮುಂಬೈಗೆ ಬಂದರು. ಅಲ್ಲಿ ಉಳಿದುಕೊಳ್ಳಲು ಜಾಗವಿಲ್ಲದೇ ಒಂದು ಡೈರಿಯಲ್ಲಿದ್ದರು. ಹಗಲಿಡೀ ಕ್ರಿಕೆಟ್‌ ಅಭ್ಯಾಸ ನಡೆಸಿ ಸುಸ್ತಾಗಿದ್ದ ಅವರಿಗೆ ರಾತ್ರಿ ಡೈರಿಯಲ್ಲಿ ಮಲಗಿ ನಿದ್ರೆ ಹೋಗಿದ್ದೇ ತಿಳಿಯುತ್ತಿರಲಿಲ್ಲ.

ಒಂದು ದಿನ ಡೈರಿಯಿಂದ ಅವರನ್ನು ಹೊರಹಾಕಿದರು. ಕಡೆಗೆ ಮುಸ್ಲಿಮ್‌ ಯುನೈಟೆಡ್‌ ಕ್ಲಬ್‌ನ ಟೆಂಟ್‌ನಲ್ಲಿ ಆಶ್ರಯ ಪಡೆದರು. ಇಲ್ಲಿ ಎಷ್ಟೋ ದಿನ ರಾತ್ರಿ ಹಸಿದು ಮಲಗಿದ್ದಾರೆ. ವಾರವಿಡೀ ದಿನದೂಡಲು ರಾಮಲೀಲಾ ಮೈದಾನದಲ್ಲಿ ಪಾನಿಪೂರಿ ಮಾರಿದ್ದಾರೆ. ಆಗ ತನ್ನ ತಂಡದ ಸಹ ಆಟಗಾರರು ನೋಡಿದರೇನು ಮಾಡುವುದು ಎಂದು ಅಂಜಿಕೊಂಡಿದ್ದಾರೆ. ಅಷ್ಟೆಲ್ಲ ಬೇಗೆಯಲ್ಲಿ ಬೆಂದ ಹುಡುಗ ಈಗ ತನ್ನ ಸಾಧನೆಗೆ ಫ‌ಲ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next