Advertisement
ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ನಿರ್ಧಾರದ ವಿರುದ್ಧ ಹೋರಾಟ ಕುರಿತಂತೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಮಾಲೋಚನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಜೂ. 14ರಂದು ಬೆಳಗ್ಗೆ 11 ಗಂಟೆಯಿಂದ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ 48 ಗಂಟೆ ಕಾಲ ಅಹೋರಾತ್ರಿ ಧರಣಿ ನಡೆಸಲಾಗುವುದು. ಸರ್ಕಾರ ಸ್ಪಂದಿಸದಿದ್ದರೆ ಜೂ. 16ರಂದು ಮಧ್ಯಾಹ್ನ 12ಕ್ಕೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು. ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
Related Articles
Advertisement
ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಸಂಬಂಧ 2011ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಎಕರೆಗೆ 90,000 ರೂ. ನಿಗದಿಪಡಿಸಲು ಸಂಪುಟದಲ್ಲಿ ನಿರ್ಣಯವಾಗಿತ್ತು ಎಂಬ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಆ ಸಂದರ್ಭದಲ್ಲಿ ನಾನು ಸಚಿವನಾಗಿದ್ದೆ. ಈ ಬಗ್ಗೆ ಪರಿಶೀಲಿಸಲಾಗುವುದು. ಗುತ್ತಿಗೆ ನೀಡಲು ನಮ್ಮ ಆಕ್ಷೇಪವಿಲ್ಲ ಎಂದು ತಿಳಿಸಿದರು.
ಸರ್ಕಾರ ಐಸಿಯುನಲ್ಲಿದ್ದು, ಜೀವ ರಕ್ಷಕ ಕೊನೆಯ ಚುಚ್ಚುಮದ್ದಿನಂತೆ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ನಂತರ ರೋಗಿ ಬದುಕಬಹುದು ಇಲ್ಲವೇ ಸಾಯಬಹುದು. ರಾಜ್ಯದಲ್ಲಿ ತೀವ್ರ ಬರವಿದ್ದರೂ ತಾಜ್‌ವೆಸ್ಟ್‌ಎಂಡ್ ಹೋಟೆಲ್‌ನಲ್ಲಿದ್ದ ಮುಖ್ಯಮಂತ್ರಿಗಳು ಇದೀಗ ತಾಲ್ಲೂಕು ವೆಸ್ಟ್‌ಎಂಡ್‌ಗೆ ಹೋಗುತ್ತಿದ್ದಾರೆ. ಇದರಿಂದ ಏನು ಪ್ರಯೋಜನ. ಜನ ಸಂಕಷ್ಟದಲ್ಲಿರುವಾಗ ಶಾಲಾ ವಾಸ್ತವ್ಯ ಅಗತ್ಯವೇ ಎಂಬುದನ್ನು ಮುಖ್ಯಮಂತ್ರಿಗಳು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ ಎಂದು ಹೇಳಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ, ಮುಖಂಡ ಚಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಸಿಎಂ ಮಾಧ್ಯಮಗಳ ಕ್ಷಮೆ ಕೇಳಲಿ: ಮಾಧ್ಯಮಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ನಿರಂತರವಾಗಿ ಮಾಡುತ್ತಿದೆ. ಮಹೇಶ್ ವಿಕ್ರಮ್ ಹೆಗಡೆ, ಶಾರದಾ ಡೈಮಂಡ್, ಶ್ರುತಿ ಬೆಳ್ಳಕ್ಕಿ, ಹೇಮಂತ್ ಕುಮಾರ್ ಇತರರ ಮೇಲೆ ಪ್ರಕರಣ ದಾಖಲಿಸಿ ಕೆಲವರನ್ನು ಬಂಧಿಸಲಾಗಿತ್ತು. ಅವರ ಶಾಪ ಸರ್ಕಾರಕ್ಕೆ ತಟ್ಟಲಿದೆ. ಇತ್ತೀಚೆಗೆ ಹಿರಿಯ ಪತ್ರಕರ್ತರಿಗೆ ಬಹಿರಂಗ ಸಭೆಯಲ್ಲಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡುತ್ತಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹರಣದ ವಿರುದ್ಧ ಹೋರಾಟ ನಡೆಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದವರೇ ಮಾಧ್ಯಮ ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆ ತೋರುತ್ತಿರುವುದು ದುರಂತ. ಮಾಧ್ಯಮಗಳಿಗೆ ಸವಾಲು ಹಾಕುವುದು ಹೇಸಿಗೆ ತರುವ ವಿಚಾರ. ಕೂಡಲೇ ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸೂಪರ್ ಮ್ಯಾನ್ ತುಟಿ ಬಿಚ್ಚುತ್ತಿಲ್ಲ: ಇನ್ನೊಂದೆಡೆ ಸರ್ಕಾರದ ಸೂಪರ್ ಮ್ಯಾನ್ ಎಂಬಂತಿರುವ ಸಿದ್ದರಾಮಯ್ಯ ಅವರು ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ಈ ಹಿಂದೆ ಅಕ್ರಮ ಗಣಿಗಾರಿಕೆ ವಿರೋಧಿಸಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದರು. ಆದರೆ ಈ ವಿಚಾರದಲ್ಲಿ ಅವರು ಗಪ್‌ಚುಪ್. ಸಿದ್ದರಾಮಯ್ಯ ಅವರು ಮತ್ತೆ ಯಾವಾಗ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಆರಂಭಿಸುತ್ತಾರೆ? ಅವರಿಗೆ ನಮ್ಮ ಸಹಕಾರವಿದೆ. ಈಗಲಾದರೂ ಬಾಯಿ ಬಿಡಿ ಎಂದು ಅಶೋಕ್ ವ್ಯಂಗ್ಯವಾಡಿದರು.