Advertisement

ತಾಟಲಿಂಗುಗೆ ಹೆಚ್ಚಿದ ಬೇಡಿಕೆ

10:07 PM Apr 21, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಬೇಸಿಗೆ ಕಾಲದ ಅಪರೂಪದ ಅತಿಥಿಯಾಗಿರುವ ತಾಟಲಿಂಗುಗೆ ಈಗ ಎಲ್ಲಿಲ್ಲದ ಬೇಡಿಕೆ. ಶಾಲಾ, ಕಾಲೇಜು, ಸಾರ್ವಜನಿಕ ಬಸ್‌ ನಿಲ್ದಾಣ, ಚಿತ್ರ ಮಂದಿರ ಹೀಗೆ ನಗರದ ಪ್ರದೇಶದಲ್ಲಿ ಜನನಿಬಿಡ ರಸ್ತೆಗಳಲ್ಲಿ ಎತ್ತ ಕಣ್ಣಾಯಿಸಿ ನೋಡಿದರೂ ಈಗ ತಾಟಲಿಂಗು ಹಣ್ಣುಗಳದ್ದೇ ದರ್ಶನ.

Advertisement

ಬಿಸಿಲಿನ ತಾಪಕ್ಕೆ ತತ್ತರ: ತಮಿಳುನಾಡು ಮೂಲದ ತಾಟಲಿಂಗು ಹಣ್ಣು ಬೇಸಿಗೆ ಬಂದರೆ ಸಾಕು ಬರದ ನಾಡು ಚಿಕ್ಕಬಳ್ಳಾಪುರ ಜಿಲ್ಲೆಗೆ ಖಾಯಂ ಅತಿಥಿ. ಸದ್ಯ ಜಿಲ್ಲೆಯಾದ್ಯಂತ ತಾಟಲಿಂಗು ಹಣ್ಣುಗಳ ಭರ್ಜರಿ ಮಾರಾಟ ನಡೆಯುತ್ತಿದ್ದು, ಬಿಸಿಲಿನ ಪ್ರತಾಪಕ್ಕೆ ತತ್ತರಿಸುತ್ತಿರುವ ನಾಗರಿಕರು, ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಈಗ ತಾಟಲಿಂಗು ಹಣ್ಣುಗಳ ಮೊರೆ ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಕೇರಳ, ತುಳುನಾಡು ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುವ ಈ ತಾಟಲಿಂಗು ಹಣ್ಣಿಗೆ ಬಯಲು ಸೀಮೆ ಜಿಲ್ಲೆಗಳಲ್ಲಿ ಹೆಚ್ಚು ಬೇಡಿಕೆ. ಬೇಸಿಗೆಯಲ್ಲಿ ಮಾತ್ರ ಜಿಲ್ಲೆಗೆ ಪ್ರವೇಶ ಮಾಡುವ ಈ ಹಣ್ಣು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಬಲು ಅಚ್ಚುಮೆಚ್ಚು. ಸದ್ಯ ಜಿಲ್ಲಾ ಕೇಂದ್ರದ ಜನನಿಬಿಡ ರಸ್ತೆಗಳಲ್ಲಿ, ಜನ ವಸತಿ ಪ್ರದೇಶಗಳಲ್ಲಿ ಹಣ್ಣುಗಳ ಮಾರಾಟ ಭರದಿಂದ ಸಾಗಿದೆ.

ಕೈಗೆಟುಕುವ ಬೆಲೆ: ಬೇಸಿಗೆಯಲ್ಲಿ ತಾಟಲಿಂಗು ಹಣ್ಣುಗಳ ಸೇವಿಸುವರ ಸಂಖ್ಯೆ ಹೆಚ್ಚಾದರೂ ಅದರ ಬೆಲೆ ಮಾತ್ರ ಸಾಮಾನ್ಯರ ಪಾಲಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿದೆ. 10 ರಿಂದ 15 ರೂ.ಗೆ ಸುಭವಾಗಿ ಮಾರಾಟವಾಗುತ್ತಿವೆ. ಉತ್ತಮ ಗುಣಮಟ್ಟದ ಹಣ್ಣು 15 ರಿಂದ 20 ರೂ. ವರೆಗೂ ಮಾರಾಟಗೊಳ್ಳುತ್ತಿವೆ.

ನಗರದ ಎಂಜಿ ರಸ್ತೆಯ ಬಾಲಕರ ಪದವಿ ಹಾಸ್ಟೆಲ್‌ ಮುಂಭಾಗ ತಮಿಳುನಾಡಿನಿಂದ ಬಂದಿರುವ ವ್ಯಾಪಾರಸ್ಥರು ಹಣ್ಣುಗಳನ್ನು ತರಿಸಿಕೊಂಡು ತಳ್ಳುವ ಬಂಡಿಯಲ್ಲಿ ದಿನವಿಡೀ ನಗರ ಪ್ರದೇಶಗಳಲ್ಲಿ ಸುತ್ತಾಡಿ ಮಾರಾಟ ಮಾಡುವ ದೃಶ್ಯಗಳು ಕಂಡು ಬರುತ್ತಿವೆ.

Advertisement

ಎಳನೀರಿಗಿಂತ ಬೆಲೆ ಕಡಿಮೆ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಎಳನೀರು 25 ರಿಂದ 30 ರೂ. ದಾಟಿದೆ. ಇಂತಹ ಸಂದರ್ಭದಲ್ಲಿ ಕಡಿಮೆ ದರದಲ್ಲಿ ಅದರಲ್ಲೂ ಎಳ್ಳುನೀರುಗಿಂತ ಸುಲಭವಾಗಿ ತಾಟಲಿಂಗು ಬಡವರ ಕೈಗೆಟುಕುತ್ತಿದೆ. ಹಣ್ಣು ಸೇವಿಸಿದರೆ ದೇಹದಲ್ಲಿ ಉಷ್ಣಾಂಶ ಕಡಿಮೆ ಆಗುತ್ತದೆ, ಬಿಸಿಲಿನ ಸಂದರ್ಭದಲ್ಲಿ ಸೇವಿಸಿದರೆ ತಂಪು ನೀಡುತ್ತದೆ ಎನ್ನುತ್ತಾರೆ ನಗರದ ಸರ್‌.ಎಂ.ವಿ ಲೇಔಟ್‌ನ ನಿವಾಸಿ ನಾರಾಯಣಸ್ವಾಮಿ.

ತಾಟಲಿಂಗು ಹಣ್ಣುಗಳ ಸೇವನೆಯಿಂದ ಬೇಸಿಗೆಯಲ್ಲಿ ಮನುಷ್ಯನ ದೇಹಕ್ಕೆ ತಂಪು ಕೊಡುತ್ತದೆ. ಇದು ನಮ್ಮ ಜಿಲ್ಲೆಯೊಳಗೆ ಎಲ್ಲೂ ಬೆಳೆಯುವುದಿಲ್ಲ. ಬೇಸಿಗೆ ಅವಧಿಯಲ್ಲಿ ಮಾತ್ರ ನೆರೆಯ ಕೇರಳ, ತಮಿಳುನಾಡಿನಿಂದ ಬರುತ್ತವೆ. ನಾವು ಪ್ರತಿ ವರ್ಷ ಬೇಸಿಗೆಯಲ್ಲಿ ತಾಟಲಿಂಗು ಹಣ್ಣುಗಳನ್ನು ತಪ್ಪದೇ ಸೇವಿಸುತ್ತೇವೆ ಎಂದು ಚಿಕ್ಕಬಳ್ಳಾಪುರ ನಗರದ ನಿವಾಸಿ ಇಸ್ಮಾಯಿಲ್‌ ತಿಳಿಸಿದರು.

ಪ್ರತಿ ವರ್ಷ ನಾವು ಬೇಸಿಗೆಯಲ್ಲಿ ತಾಟಲಿಂಗು ಹಣ್ಣುಗಳನ್ನು ತಮಿಳುನಾಡಿನಿಂದ ಜಿಲ್ಲೆಗೆ ತಂದು ಮಾರಾಟ ಮಾಡುತ್ತೇವೆ. ಈ ಭಾಗದಲ್ಲಿ ತಾಟಲಿಂಗು ಹಣ್ಣು ಇಷ್ಟಪಡುವರ ಸಂಖ್ಯೆ ಹೆಚ್ಚಾಗಿದೆ. ದರ ಕೂಡ ಕಡಿಮೆ. ಒಂದು ಹಣ್ಣು 10 ರೂ.ಗೆ ಮಾರಾಟ ಮಾಡುತ್ತೇವೆ. ನಿತ್ಯ 1,000 ರಿಂದ 1,500 ರೂ. ವರೆಗೂ ವ್ಯಾಪಾರ ಮಾಡುತ್ತೇವೆ.
ಧರ್ಮೇಶ್‌, ವ್ಯಾಪಾರಿ, ಕೃಷ್ಣಗಿರಿ

Advertisement

Udayavani is now on Telegram. Click here to join our channel and stay updated with the latest news.

Next