ಅಮೃತಸರ್: 2006ರಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ ವೇಳೆ ಬಂಧಿಸಲ್ಪಟ್ಟಿದ್ದ ಪಾಕಿಸ್ತಾನಿ ಸಹೋದರಿಯರಾದ ಫಾತಿಮಾ ಮತ್ತು ಮುಮ್ತಾಜ್ ಹಾಗೂ ಫಾತಿಮಾ ಮಗಳು ಗುರುವಾರ ಪಂಜಾಬ್ ನ ಅಮೃತಸರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಫಾತಿಮಾ ಜೈಲಿನಲ್ಲಿಯೇ ಹೆಣ್ಣು ಮಗು ಹಿನಾ(11ವರ್ಷ)ಗೆ ಜನ್ಮ ನೀಡಿದ್ದಳು.
ನಮ್ಮ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷವಾಗಿ ಗಮನಹರಿಸಿದ್ದರು. ಆ ನೆಲೆಯಲ್ಲಿ ನಾವು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತಿದ್ದೇವೆ. ಭಾರತ ದೇಶಕ್ಕೂ ಸಲಾಂ ಎಂದು ಫಾತಿಮಾ ತಿಳಿಸಿದ್ದಾಳೆ.
ಏತನ್ಮಧ್ಯೆ ಇಂದು ಅಟ್ಟಾರಿ ಗಡಿ ಮೂಲಕ ಪಾಕಿಸ್ತಾನಿ ಅಧಿಕಾರಿಗಳಿಗೆ ತಮ್ಮನ್ನು ಹಸ್ತಾಂತರಿಸುವ ಮುನ್ನ ಅಮೃತಸರದ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಲು ಅವಕಾಶ ಮಾಡಿಕೊಡಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
2006ರಲ್ಲಿ ಬಂಧನ:
2006ರ ಮೇ 8ರಂದು ಮಾದಕವಸ್ತುವಿನ ಕಳ್ಳಸಾಗಣೆ ಮಾಡುತ್ತಿದ್ದ ರಷಿದಾ ಹಾಗೂ ಆಕೆಯ ಪುತ್ರಿಯರಾದ ಫಾತಿಮಾ ಹಾಗೂ ಮುಮ್ತಾಳನ್ನು ಅಟ್ಟಾರಿ ಅಂತಾರಾಷ್ಟ್ರೀಯ ಗಡಿಯಲ್ಲಿ ಬಂಧಿಸಲ್ಪಟ್ಟಿದ್ದರು. ಮೂವರ ಮೇಲೂ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ದೋಷಿತರಾದ ಇವರಿಗೆ ಕೋರ್ಟ್ 10 ವರ್ಷ ಜೈಲುಶಿಕ್ಷೆ ವಿಧಿಸಿತ್ತು.
ಮೂವರಿಗೂ ತಲಾ 2 ಲಕ್ಷ ರೂಪಾಯಿ ದಂಡವನ್ನು ವಿಧಿಸಿತ್ತು. ಒಂದು ವೇಳೆ ದಂಡವನ್ನು ಪಾವತಿಸದೇ ಇದ್ದಲ್ಲಿ ಇನ್ನೂ 2 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಬೇಕೆಂದು ಕೋರ್ಟ್ ಆದೇಶ ನೀಡಿತ್ತು. 2008ರ ಮೇ 21ರಂದು ಕೋರ್ಟ್ ಗೆ ಕರೆತರುತ್ತಿದ್ದ ವೇಳೆ ರಷಿದಾ ಕುಸಿದು ಬಿದ್ದಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ. 2008ರ ಜೂನ್ ತಿಂಗಳಿನಲ್ಲಿ ರಷಿದಾ ಶವವನ್ನು ಪಾಕ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು ಎಂದು ವರದಿ ತಿಳಿಸಿದೆ.