ನವದೆಹಲಿ: ರಷ್ಯಾದಲ್ಲಿ ನಡೆಯಲಿರುವ 16ನೇ ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಷ್ಯಾಗೆ ಭೇಟಿ ನೀಡಲಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆ ಪ್ರಧಾನಿ ತೆರಳುತ್ತಿದ್ದು, ಭಾರತವು ಬ್ರಿಕ್ಸ್ಗೆ ಅತಿದೊಡ್ಡ ಮೌಲ್ಯವನ್ನು ತಂದುಕೊಟ್ಟಿದೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.
ಪ್ರಧಾನಿ ಭೇಟಿ ಕುರಿತಂತೆ ಮಾಧ್ಯಮಗಳಿಗೆ ಮಿಸ್ರಿ ಮಾಹಿತಿ ನೀಡಿದ್ದು, ರಷ್ಯಾದ ಕಜಾನ್ನಲ್ಲಿ ಶೃಂಗಸಭೆ ಮಂಗಳವಾರ ಆರಂಭವಾದರೂ, ಮುಖ್ಯ ಸಭೆ ಇರುವುದು ಬುಧವಾರ. ಆ ಸಭೆಯ ಬಳಿಕ ಪ್ರಧಾನಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಜತೆಗೆ ದ್ವಿಪಕ್ಷೀಯ ಸಭೆಗಳನ್ನೂ ನಡೆಸಲಿದ್ದಾರೆ. ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆಯಲ್ಲಿ ಬಹು ಪಾಲುದಾರಿಕೆಯನ್ನು ಹೆಚ್ಚಿಸುವುದು ಈ ಬಾರಿ ಶೃಂಗಸಭೆಯ ಧ್ಯೇಯವಾಗಿದೆ ಎಂದಿದ್ದಾರೆ.
ಅಲ್ಲದೇ, ಭಾರತವು ಬ್ರಿಕ್ಸ್ನ ಸಂಸ್ಥಾಪಕ ಸದಸ್ಯನಾಗಿದ್ದು, ಪ್ರತಿ ಕಾರ್ಯಕ್ರಮಗಳಲ್ಲಿ ಯೋಜನೆಗಳಲ್ಲಿ ಅಭೂತಪೂರ್ವ ಕೊಡುಗೆಗಳನ್ನು ನೀಡುವ ಮೂಲಕ ಬ್ರಿಕ್ಸ್ಗೆ ಬಹುದೊಡ್ಡ ಮೌಲ್ಯ ತಂದುಕೊಟ್ಟಿದೆ. ಬ್ರಿಕ್ಸ್ ವಿಸ್ತಾರವಾದ ಬಳಿಕದ ಮೊದಲ ಮಹತ್ವದ ಶೃಂಗದಲ್ಲೂ ಭಾರತ ಭಾಗಿಯಾಗುತ್ತಿದ್ದು, ಈ ಶೃಂಗವು ಆರ್ಥಿಕ ಸಹಕಾರ ಹಾಗೂ ಇಂಧನ, ಆಹಾರ ಭದ್ರತೆ, ಆರೋಗ್ಯ ಕ್ಷೇತ್ರಗಳಲ್ಲಿನ ಸಹಕಾರವನ್ನೂ ಹೆಚ್ಚಿಸಲಿದೆ ಎಂದಿದ್ದಾರೆ. 2009ರಲ್ಲಿ ಕಡೆಯದಾಗಿ ರಷ್ಯಾದಲ್ಲಿ ಬ್ರಿಕ್ಸ್ ಶೃಂಗ ಸಭೆ ನಡೆದಿತ್ತು.
ಇರಾನ್ ಅಧ್ಯಕ್ಷರ ಭೇಟಿ ಸಾಧ್ಯತೆ
ಬ್ರಿಕ್ಸ್ ಸಮ್ಮೇಳನದ ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೇಶ್ಕಿಯಾನ್ ಅವರು ದ್ವಿಪಕ್ಷೀಯ ಸಭೆ ನಡೆಸುವ ಸಾಧ್ಯತೆ ಇದೆ. ಇಸ್ರೇಲ್-ಇರಾನ್ ನಡುವಿನ ಬಿಕ್ಕಟ್ಟು ಉಲ್ಬಣಿಸಿರುವಂತೆಯೇ ಈ ಭೇಟಿ ಮಹತ್ವ ಪಡೆಯಲಿದೆ. ಜತೆಗೆ ಇರಾನ್ ಅಧ್ಯಕ್ಷರಾಗಿ ಮಸೌದ್ ಅಧಿಕಾರವಹಿಸಿಕೊಂಡ ಬಳಿಕ ಪ್ರಧಾನಿ ಮೋದಿ ಅವರ ಜತೆಗಿನ ಮೊದಲ ಭೇಟಿಯೂ ಇದೇ ಆಗಿರಲಿದೆ.
ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ ಉಗ್ರರಿಗೆ ಇರಾನ್ ಬೆಂಬಲ ನೀಡಿದ್ದು, ಲೆಬನಾನ್ನಲ್ಲಿರುವ ಹೆಜ್ಬುಲ್ಲಾ ಉಗ್ರರಿಗೂ ಮಣೆಹಾಕಿದೆ ಎಂದು ಇಸ್ರೇಲ್ ಆರೋಪಿಸಿ ಇತ್ತೀಚೆಗೆ ಇರಾನ್ ಮೇಲೆ ದಾಳಿ ನಡೆಸಿತ್ತು. ಪ್ರತಿಯಾಗಿ ಇರಾನ್ ಕೂಡ ಕ್ಷಿಪಣಿ ದಾಳಿ ನಡೆಸಿ ಮಧ್ಯಪ್ರಾಚ್ಯ ಬಿಕ್ಕಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಶಾಂತಿ ಸಂಧಾನಕ್ಕೆ ಪುಟಿನ್ ಆಸಕ್ತಿ ವಹಿಸಿದ್ದು, ಪ್ರಧಾನಿ ಮೋದಿ ಅವರ ಜತೆಗಿನ ಭೇಟಿಯಲ್ಲೂ ಈ ವಿಚಾರ ಪ್ರಸ್ತಾಪವಾಗುವ ನಿರೀಕ್ಷೆ ಇದೆ.