Advertisement

ಮಕ್ಕಳಿಗೆ ಪಾಠದೊಂದಿಗೆ ಸಾಮಾನ್ಯ ಜ್ಞಾನ ಬೋಧಿಸಿ: ವೀಣಾ

04:57 PM Jun 02, 2018 | |

ಬಾಗಲಕೋಟೆ: ಹೊಸ ಹೊಸ ಆವಿಷ್ಕಾರಗಳಿಗಾಗಿ ಶಿಕ್ಷಣ ಅವಶ್ಯವಿದ್ದು, ಮಕ್ಕಳಿಗೆ ಪಾಠದ ಜೊತೆಗೆ ಸಾಮಾನ್ಯ ಜ್ಞಾನ ಬೋಧಿಸಬೇಕೆಂದು ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು. ನಗರದ ಬಿಟಿಡಿಎ ಆವರಣದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಶಾಲಾ ಪ್ರಾರಂಬೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಮನುಷ್ಯನ ಅಭಿವೃದ್ಧಿಗೆ ಶಿಕ್ಷಣ ಅವಶ್ಯವಿದ್ದು, ಪರಿಪೂರ್ಣ ಮಾನವನನ್ನಾಗಿ ನಿರ್ಮಿಸಲು ಮಕ್ಕಳಿಗೆ ಮೊಬೈಲ್‌ ಬದಲು ಪುಸ್ತಕಗಳನ್ನು ನೀಡುವುದರ ಜೊತೆಗೆ ಓದುವ ಹವ್ಯಾಸ ಬೆಳೆಸಬೇಕು ಎಂದರು. ರಜೆಯ ದಿನಗಳಲ್ಲಿ ಮಕ್ಕಳು ಮರಕೋತಿ ಆಟ, ಈಜು ಮುಂತಾದ ಜಾನಪದ ಕ್ರೀಡೆಗಳಲ್ಲಿ ಭಾಗವಹಿಸಿ ಮನರಂಜನೆ ಜೊತೆಗೆ ಸದೃಢ ದೇಹ ಹೊಂದುತ್ತಿದ್ದರು. ಆದರೆ ಮೊಬೈಲ್‌ ಬಂದಾಗಿನಿಂದ 4 ಗೋಡೆಗಳ ಮಧ್ಯೆ ಮಕ್ಕಳ ಆಟವಾಡುವ ಕಾಲ ಬಂದಿದ್ದರಿಂದ ದೈಹಿಕ ಹಾಗೂ ಮಾನಸಿಕವಾಗಿ ಕುಬ್ಜವಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಸರಕಾರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಕಲ ರೀತಿಯ ಸಹಾಯ ಮಾಡುವುದರ ಜೊತೆಗೆ ಪಠ್ಯದ ಜೊತೆ ಬಿಸಿ ಊಟ, ಸಮವಸ್ತ್ರ, ಶೂಗಳನ್ನು ನೀಡುವುದರ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಸರಕಾರದಿಂದ ಶಿಕ್ಷಣಕ್ಕೆ ದೊರೆಯಬಹುದಾದ ಸೌಲಭ್ಯಗಳ ಕುರಿತಾದ ಮಾಹಿತಿಯುಳ್ಳ ಕರಪತ್ರ ಬಿಡುಗಡೆ, ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲಾಯಿತು.

ಶಿಕ್ಷಣ ಇಲಾಖೆ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ತಾ.ಪಂ ಸದಸ್ಯೆ ಶಕುಂತಲಾ ಯಾಳಗಿ, ನಗರಸಭೆ ಸದಸ್ಯ ಬಸವರಾಜ ನಾಶಿ, ಎಸ್‌ಡಿಎಂಸಿ ಅಧ್ಯಕ್ಷ ಕೂಡ್ಲಪ್ಪ, ಶಿಕ್ಷಣ ಇಲಾಖೆಯ ಎನ್‌.ವೈ. ಕುಂದರಗಿ, ಎನ್‌.ಬಿ. ಗೊರವರ, ಬಸಣ್ಣವರ, ಆರ್‌.ಜಿ. ಸನ್ನಿ, ಆರ್‌.ಡಿ. ಅಂಗಡಿ, ಅರ್ಜುನ ಕಂಬೋಗಿ, ಮುಖ್ಯ ಗುರುಮಾತೆ ಬಲೋಲಮಟ್ಟಿ ಸೇರಿದಂತೆ ಇತರರು ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕಾಮಾಕ್ಷಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಂಭದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮಹಾದ್ವಾರದಿಂದ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ವೀಣಾ ಕಾಶಪ್ಪನವರ ಮತ್ತು ಶಾಸಕ ವೀರಣ್ಣ ಚರಂತಿಮಠ ಅವರನ್ನು ಮಕ್ಕಳು ಇಳಕಲ್ಲ ಸೀರೆ ಉಟ್ಟು ಆರತಿ ಬೆಳಗುವ ಮೂಲಕ ಸ್ವಾಗತಿಸಿ ಸಕಲ ವಾದ್ಯಗಳ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next