Advertisement

ಟೆಸ್ಟ್‌ ವಿಶ್ವಕಪ್‌ ಫೈನಲ್‌: ನ್ಯೂಜಿಲ್ಯಾಂಡಿಗೆ ಶಮಿ, ಇಶಾಂತ್‌ ಬ್ರೇಕ್‌

06:37 AM Jun 23, 2021 | Team Udayavani |

ಸೌತಾಂಪ್ಟನ್‌: ಮೊಹಮ್ಮದ್‌ ಶಮಿ ಮತ್ತು ಇಶಾಂತ್‌ ಶರ್ಮ ಅವರ ಕರಾರುವಾಕ್‌ ಬೌಲಿಂಗ್‌ ನೆರವಿನಿಂದ ಟೆಸ್ಟ್‌ ವಿಶ್ವಕಪ್‌ ಫೈನಲ್‌ನಲ್ಲಿ ನ್ಯೂಜಿಲ್ಯಾಂಡಿಗೆ ಕಡಿವಾಣ ಹಾಕುವಲ್ಲಿ ಭಾರತ ಯಶಸ್ವಿಯಾಗಿದೆ. ಆದರೆ ಕಿವೀಸ್‌ 32 ರನ್ನುಗಳ ಅಲ್ಪ ಮುನ್ನಡೆಯೊಂದಿಗೆ ಮೊದಲ ಸರದಿಯ ಗೌರವ ಸಂಪಾದಿಸಿದೆ. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಕೊಹ್ಲಿ ಪಡೆ ಒಂದು ವಿಕೆಟ್‌ಗೆ 32ರನ್‌ ಮಾಡಿ ದಿನದಾಟ ಮುಂದುವರಿಸುತ್ತಿದೆ.

Advertisement

ಭಾರತದ 217 ರನ್ನುಗಳ ಮೊತ್ತಕ್ಕೆ ಜವಾಬು ನೀಡಿದ ನ್ಯೂಜಿಲ್ಯಾಂಡ್‌ 5ನೇ ದಿನದಾಟದ ಚಹಾ ವಿರಾಮಕ್ಕೆ ಸರಿಯಾಗಿ 249ಕ್ಕೆ ಆಲೌಟ್‌ ಆಯಿತು. ಶಮಿ 76ಕ್ಕೆ 4, ಇಶಾಂತ್‌ 48ಕ್ಕೆ 3, ಅಶ್ವಿ‌ನ್‌ 28ಕ್ಕೆ 2 ವಿಕೆಟ್‌ ಕಿತ್ತರು. ಉಳಿ ದೊಂದು ವಿಕೆಟ್‌ ರವೀಂದ್ರ ಜಡೇಜ ಪಾಲಾಯಿತು.

ಕಿವೀಸ್‌ ಕುಸಿತ ಕಾಣುತ್ತ ಹೋದರೂ ನಾಯಕ ಕೇನ್‌ ವಿಲಿಯಮ್ಸ್‌ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ಭಾರತಕ್ಕೆ ಸವಾಲಾದರು (177 ಎಸೆತಗಳಿಂದ 49 ರನ್‌). ತಂಡಕ್ಕೆ ಲೀಡ್‌ ದೊರಕಿಸಿ ಕೊಟ್ಟ ಬಳಿಕವೇ 8ನೇ ವಿಕೆಟ್‌ ರೂಪದಲ್ಲಿ ವಿಲಿಯಮ್ಸನ್‌ ಪೆವಿಲಿಯನ್‌ ಸೇರಿಕೊಂಡರು.

ಭಾರತದ ಮೇಲುಗೈ
ಮೊದಲ ಅವಧಿಯಲ್ಲೇ ಭಾರತದ ಬೌಲರ್ ಮೇಲುಗೈ ಸಾಧಿಸುವ ಮೂಲಕ ಕಿವೀಸ್‌ಗೆ ತಿರುಗೇಟು ನೀಡಿದರು. ಬೆಳಗಿನ ಅವಧಿ ಶಮಿ ಮೆರೆದಾಟಕ್ಕೆ ಮೀಸ ಲಾಯಿತು. ಜತೆಗೆ ಇಶಾಂತ್‌ ಕೂಡ ಮಿಂಚಿನ ದಾಳಿ ಸಂಘಟಿಸಿದರು. ಇವರಿಬ್ಬರು ಸೇರಿಕೊಂಡು ನ್ಯೂಜಿಲ್ಯಾಂಡಿನ ಪ್ರಮುಖ 3 ವಿಕೆಟ್‌ ಉಡಾಯಿಸಿ ಭಾರತದ ಪಾಳೆಯದಲ್ಲಿ ಸಂಭ್ರಮ ಮೂಡಿಸಿದರು. ಕಿವೀಸ್‌ 5ಕ್ಕೆ 135 ರನ್‌ ಗಳಿಸಿ ಲಂಚ್‌ಗೆ ತೆರಳಿತು.

ಮಳೆಯಿಂದಾಗಿ ಅಂತಿಮ ದಿನದಾಟ ತುಸು ವಿಳಂಬವಾಗಿ ಮೊದಲ್ಗೊಂಡಿತ್ತು. ಮೊದಲ ಅವಧಿಯ 23 ಓವರ್‌ಗಳ ಆಟದಲ್ಲಿ ಕಿವೀಸ್‌ಗೆ ಗಳಿಸಲು ಸಾಧ್ಯವಾದದ್ದು 34 ರನ್‌ ಮಾತ್ರ.

Advertisement

ಸಂಕ್ಷಿಪ್ತ ಸ್ಕೋರ್‌: ಭಾರತ-217. ನ್ಯೂಜಿಲ್ಯಾಂಡ್‌-249 (ಕಾನ್ವೆ 54, ವಿಲಿಯಮ್ಸನ್‌ 49, ಲ್ಯಾಥಂ 30, ಸೌಥಿ 30, ಶಮಿ 76ಕ್ಕೆ 4, ಇಶಾಂತ್‌ 48ಕ್ಕೆ 3, ಅಶ್ವಿ‌ನ್‌ 28ಕ್ಕೆ 2, ಜಡೇಜ 20ಕ್ಕೆ 1).

450 ಓವರ್‌ ಆಟ ಪೂರ್ತಿಗೊಳಿಸಲು ಆಕಾಶ್‌ ಚೋಪ್ರಾ ಸಲಹೆ
ಹೊಸದಿಲ್ಲಿ: ಐಸಿಸಿ ವಿಶ್ವಕಪ್‌ ಟೆಸ್ಟ್‌ ಫೈನಲ್‌ ಪಂದ್ಯವನ್ನು 450 ಓವರ್‌ ಪೂರ್ತಿಗೊಳಿಸುವ ತನಕ ಮುಂದುವರಿಸಲು ಮಾಜಿ ಕ್ರಿಕೆಟಿಗ, ಹಾಲಿ ವಿಶ್ಲೇಷಕ ಆಕಾಶ್‌ ಚೋಪ್ರಾ ಸಲಹೆ ನೀಡಿದ್ದಾರೆ.

“ಟೆಸ್ಟ್‌ ಕ್ರಿಕೆಟಿಗೆ 144 ವರ್ಷಗಳ ಸುದೀರ್ಘ‌ ಇತಿಹಾಸವಿದೆ. ಇಂಥದೊಂದು ಐತಿಹಾಸಿಕ ಸರಣಿಯ ಫೈನಲ್‌ಗಾಗಿ ಕಳೆದ ಎರಡು ವರ್ಷಗಳಿಂದಲೂ ಕಾಯಲಾಗಿದೆ. ಆದರೆ ಪ್ರಶಸ್ತಿ ಸೆಣಸಾಟಕ್ಕೆ ಮಳೆ ಅಡ್ಡಿಪಡಿಸಿದೆ. ಎರಡು ದಿನಗಳ ಪೂರ್ತಿ ಆಟ ನಷ್ಟವಾಗಿದೆ. ಸ್ಪಷ್ಟ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಮೀಸಲು ದಿನವೂ ಸೇರಿದಂತೆ ಇನ್ನೊಂದು ಹೆಚ್ಚುವರಿ ದಿನಕ್ಕೆ ಪಂದ್ಯವನ್ನು ವಿಸ್ತರಿಸಿ ಪೂರ್ತಿ 450 ಓವರ್‌ಗಳ ಆಟ ಆಡುವುದು ಒಳ್ಳೆಯ ನಿರ್ಧಾರವೆನಿಸಲಿದೆ’ ಎಂದು ಚೋಪ್ರಾ ಹೇಳಿದರು.

“ಆರನೇ ದಿನದಾಟ ಸ್ವಾಗತಾರ್ಹ. ಆದರೆ ಆಗಲೂ ಪಂದ್ಯ ಸ್ಪಷ್ಟ ಫಲಿತಾಂಶ ಕಾಣುವ ಸಾಧ್ಯತೆ ಇಲ್ಲ. ಹೀಗಾಗಿ ಪಂದ್ಯವನ್ನು 7ನೇ ದಿನಕ್ಕೆ ವಿಸ್ತರಿಸಿ 450 ಓವರ್‌ಗಳ ಕೋಟಾವನ್ನು ಪೂರ್ತಿಗೊಳಿ ಸಬಹುದಾಗಿದೆ’ ಎಂದರು. ಟೆಸ್ಟ್‌ ಪಂದ್ಯದ ವೇಳೆ ದಿನಕ್ಕೆ 90 ಓವರ್‌ಗಳ ಆಟದಂತೆ, 5 ದಿನಗಳಲ್ಲಿ 450 ಓವರ್‌ಗಳ ಆಟ ಸಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next