ಸಿಡ್ನಿ : ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಉಸ್ಮಾನ್ ಖ್ವಾಜಾ 9ನೇ ಶತಕದ ಮೂಲಕ ತಮ್ಮ ಆಯ್ಕೆಯನ್ನು ಭರ್ಜರಿಯಾಗಿ ಸಮರ್ಥಿಸಿಕೊಂಡಿದ್ದಾರೆ. ಆ್ಯಶಸ್ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯದ ದ್ವಿತೀಯ ದಿನ ಖ್ವಾಜಾ ಅಮೋಘ ಆಟವಾಡಿ 137 ರನ್ ಬಾರಿಸಿದರು. ಆಸ್ಟ್ರೇಲಿಯ 8ಕ್ಕೆ 416 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದು, ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 13 ರನ್ ಮಾಡಿದೆ. ಸ್ಟುವರ್ಟ್ ಬ್ರಾಡ್ 5 ವಿಕೆಟ್ ಉರುಳಿಸಿ ಮಿಂಚಿದರು.
ಮೊದಲ ದಿನದಾಟದ ಬಹುತೇಕ ಅವಧಿಯನ್ನು ಮಳೆಯೇ ನುಂಗಿತ್ತು. ದ್ವಿತೀಯ ದಿನದ ಮೊದಲ ಅವಧಿಯಲ್ಲಿ 3 ಸಲ ಮಳೆಯಿಂದ ಅಡಚಣೆಯಾಯಿತು.
3ಕ್ಕೆ 126 ರನ್ ಮಾಡಿದಲ್ಲಿಂದ ಆಸ್ಟ್ರೇಲಿಯ ಬ್ಯಾಟಿಂಗ್ ಮುಂದುವರಿಸಿತು. ಸ್ಮಿತ್-ಖ್ವಾಜಾ 4ನೇ ವಿಕೆಟಿಗೆ ಶತಕದ ಜತೆಯಾಟ ನಿಭಾಯಿಸಿ ಇಂಗ್ಲೆಂಡ್ ಬೌಲರ್ಗೆ ಬೆವರಿಳಿಸಿದರು. ಈ ಜೋಡಿಯಿಂದ 115 ರನ್ ಹರಿದು ಬಂತು. ಇವರನ್ನು ಬೇರ್ಪಡಿಸಿದ ಬಳಿಕವೇ ರೂಟ್ ಪಡೆ ಹಿಡಿತ ಸಾಧಿಸಿದ್ದು.
8ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರುವ ಮುನ್ನ ಉಸ್ಮಾನ್ ಖ್ವಾಜಾ 260 ಎಸೆತಗಳ ಮ್ಯಾರಥಾನ್ ಇನ್ನಿಂಗ್ಸ್‌ನಲ್ಲಿ 137 ರನ್ ಬಾರಿಸಿ ಮೆರೆದರು. ಸಿಡಿಸಿದ್ದು 13 ಬೌಂಡರಿ. ಸ್ಮಿತ್ 141 ಎಸೆತ ಎದುರಿಸಿ 67 ರನ್ ಹೊಡೆದರು (5 ಬೌಂಡರಿ).
101ಕ್ಕೆ 5 ವಿಕೆಟ್ ಉರುಳಿಸಿದ ಸ್ಟುವರ್ಟ್ ಬ್ರಾಡ್ ಇಂಗ್ಲೆಂಡಿನ ಯಶಸ್ವಿ ಬೌಲರ್. ಅವರು ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಉರುಳಿಸಿದ 19ನೇ ನಿದರ್ಶನ ಇದಾಗಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-8 ವಿಕೆಟಿಗೆ 416 ಡಿಕ್ಲೇರ್ (ಖ್ವಾಜಾ 137, ಸ್ಮಿತ್ 67, ಹ್ಯಾರಿಸ್ 38, ಸ್ಟಾರ್ಕ್ ಔಟಾಗದೆ 34, ಬ್ರಾಡ್ 101ಕ್ಕೆ 5). ಇಂಗ್ಲೆಂಡ್-ವಿಕೆಟ್ ನಷ್ಟವಿಲ್ಲದೆ 13.