Advertisement

Test; ಮೆಕ್‌ಗ್ರಾತ್‌, ಪೆರ್ರಿ ಹೋರಾಟ: ಇನ್ನಿಂಗ್ಸ್‌ ಸೋಲಿನಿಂದ ಪಾರಾದ ಆಸೀಸ್ ವನಿತೆಯರು

11:57 PM Dec 23, 2023 | Team Udayavani |

ಮುಂಬಯಿ: ಮಧ್ಯಮ ಕ್ರಮಾಂಕದ ಆಟಗಾರ್ತಿ ಟಹ್ಲಿಯಾ ಮೆಕ್‌ಗ್ರಾತ್‌ ಅವರ ಸತತ 2ನೇ ಅರ್ಧ ಶತಕ ಸಾಹಸದಿಂದ ಆಸ್ಟ್ರೇಲಿಯದ ವನಿತೆಯರು ಇನ್ನಿಂಗ್ಸ್‌ ಸೋಲಿನಿಂದ ಪಾರಾಗಿದ್ದಾರೆ. ಟೆಸ್ಟ್‌ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ 5 ವಿಕೆಟಿಗೆ 233 ರನ್‌ ಮಾಡಿದ್ದು, ಆಸೀಸ್‌ 46 ರನ್‌ ಮುನ್ನಡೆ ಸಾಧಿಸಿದೆ. ಇನ್ನೂ 5 ವಿಕೆಟ್‌ ಕೈಲಿದೆ.

Advertisement

187 ರನ್‌ ಹಿನ್ನಡೆಗೆ ಸಿಲುಕಿದ ಬಳಿಕ ಆಸೀಸ್‌ ಉತ್ತಮ ಬ್ಯಾಟಿಂಗ್‌ ಹೋರಾಟ ತೋರ್ಪಡಿಸಿತು. ಪ್ರವಾಸಿಗರ ಬ್ಯಾಟಿಂಗ್‌ ಪ್ರಥಮ ಇನ್ನಿಂಗ್ಸ್‌ಗಿಂತಲೂ ಉತ್ತಮಮಟ್ಟದಲ್ಲಿತ್ತು. ಬೆತ್‌ ಮೂನಿ (33) ಮತ್ತು ಫೋಬ್‌ ಲಿಚ್‌ಫೀಲ್ಡ್‌ (18) ಮೊದಲ ವಿಕೆಟಿಗೆ 49 ರನ್‌ ಒಟ್ಟು ಗೂಡಿಸಿದರು. ಇವರಿಬ್ಬರ ವಿಕೆಟ್‌ 7 ರನ್‌ ಅಂತರದಲ್ಲಿ ಉರುಳಿದಾಗ ಭಾರತದ ಬೌಲರ್ ಮೇಲುಗೈ ಸಾಧಿಸುವ ನಿರೀಕ್ಷೆ ಇತ್ತು. ಆದರೆ 3ನೇ ವಿಕೆಟಿಗೆ ಜತೆಗೂಡಿದ ಎಲ್ಲಿಸ್‌ ಪೆರ್ರಿ (45) ಮತ್ತು ಟಹ್ಲಿಯಾ ಮೆಕ್‌ಗ್ರಾತ್‌ (73) ಆತಿಥೇಯರ ಬೌಲಿಂಗ್‌ ದಾಳಿಗೆ ಸಡ್ಡು ಹೊಡೆದು ನಿಂತರು. ಸ್ಕೋರ್‌ 140ಕ್ಕೆ ಏರಿತು.

ಆಗ ಸ್ನೇಹ್‌ ರಾಣಾ ಎಸೆತದಲ್ಲಿ ಎಲ್ಲಿಸ್‌ ಪೆರ್ರಿ ವಿಕೆಟ್‌ ಉರುಳಿತು. ಮೆಕ್‌ಗ್ರಾತ್‌ ಮತ್ತು ನಾಯಕಿ ಅಲಿಸ್ಸಾ ಹೀಲಿ (32) ಸೇರಿಕೊಂಡು ಇನ್ನೊಂದು ಸುತ್ತಿನ ಬ್ಯಾಟಿಂಗ್‌ ಹೋರಾಟ ಆರಂಭಿಸಿದರು. 4ನೇ ವಿಕೆಟಿಗೆ 66 ರನ್‌ ಒಟ್ಟುಗೂಡಿತು.

ತಂಡದ ಪ್ರಧಾನ ಬೌಲರ್‌ಗಳು ವಿಕೆಟ್‌ ಉರುಳಿಸಲು ವಿಫ‌ಲ ಪ್ರಯತ್ನ ಮಾಡುತ್ತಿದ್ದಾಗ ಅಖಾಡಕ್ಕಿಳಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಬೇರೂರಿದ ಈ ಇಬ್ಬರೂ ಬ್ಯಾಟರ್‌ಗಳನ್ನು ಔಟ್‌ ಮಾಡಲು ಯಶಸ್ವಿಯಾದರು. ಮೊದಲು ಅಪಾಯಕಾರಿ ಹೀಲಿ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರೆ, 15 ರನ್‌ ಆಗುವಷ್ಟರಲ್ಲಿ ಮೆಕ್‌ಗ್ರಾತ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. 177 ಎಸೆತ ಎದುರಿಸಿ ನಿಂತ ಮೆಕ್‌ಗ್ರಾತ್‌ 10 ಬೌಂಡರಿ ಸಿಡಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಮೆಕ್‌ಗ್ರಾತ್‌ ಕೊಡುಗೆ 50 ರನ್‌.

ಅನ್ನಾಬೆಲ್‌ ಸದರ್‌ಲ್ಯಾಂಡ್‌ (12) ಮತ್ತು ಅಶ್ಲಿ ಗಾರ್ಡನರ್‌ (7) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

ಭಾರತ 406 ರನ್‌
ಇದಕ್ಕೂ ಮುನ್ನ 7ಕ್ಕೆ 376 ರನ್‌ ಮಾಡಿದ್ದ ಭಾರತ, ಶನಿವಾರದ ಆಟ ಮುಂದುವರಿಸಿ 406ಕ್ಕೆ ಆಲೌಟ್‌ ಆಯಿತು. ದೀಪ್ತಿ ಶರ್ಮ 70ರಿಂದ 78ಕ್ಕೆ, ಪೂಜಾ ವಸ್ತ್ರಾಕರ್‌ 33ರಿಂದ 47ಕ್ಕೆ ತನಕ ತಲುಪಿದರು. ಆಲ್‌ರೌಂಡರ್‌ ದೀಪ್ತಿ 171 ಎಸೆತ ಎದುರಿಸಿ ನಿಂತರು (9 ಬೌಂಡರಿ). ಪೂಜಾ ನಿಭಾಯಿಸಿದ್ದು 126 ಎಸೆತ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-219 ಮತ್ತು 5 ವಿಕೆಟಿಗೆ 233 (ಮೆಕ್‌ಗ್ರಾತ್‌ 73, ಪೆರ್ರಿ 45, ಮೂನಿ 33, ಹೀಲಿ 32, ರಾಣಾ 54ಕ್ಕೆ 2, ಕೌರ್‌ 23ಕ್ಕೆ 2). ಭಾರತ-406.

Advertisement

Udayavani is now on Telegram. Click here to join our channel and stay updated with the latest news.

Next