ಗಾಲೆ: ಪ್ರವಾಸಿ ನ್ಯೂಜಿಲ್ಯಾಂಡ್ ತಂಡದೆದುರಿನ ದ್ವಿತೀಯ ಟೆಸ್ಟ್‌ನಲ್ಲಿ ದಿನೇಶ್ ಚಂಡಿಮಾಲ್ ಅವರ ಆಕರ್ಷಕ ಶತಕದಿಂದಾಗಿ ಶ್ರೀಲಂಕಾ ತಂಡವು ಉತ್ತಮ ಸ್ಥಿತಿಯಲ್ಲಿದೆ. ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡವು ಮೂರು ವಿಕೆಟ್ ಕಳೆದುಕೊಂಡಿದ್ದು 306 ರನ್ ಗಳಿಸಿದೆ.
ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವು ಪಥುಮ್ ನಿಸ್ಸಂಕ ಅವರ ವಿಕೆಟನ್ನು ಬೇಗನೇ ಕಳೆದುಕೊಂಡಿತು. ಆಬಳಿಕ ದಿಮುತ್ ಕರುಣರತ್ನ ಅವರನ್ನು ಸೇರಿಕೊಂಡ ದಿನೇಶ್ ಚಂಡಿಮಾಲ್ ತಾಳ್ಮೆಯಿಂದ ಆಡಿ ತಂಡವನ್ನು ಆಧರಿಸಿದರು. ಅವರಿಬ್ಬರು ದ್ವಿತೀಯ ವಿಕೆಟಿಗೆ 122 ರನ್ ಪೇರಿಸಿದ ಬಳಿಕ ಬೇರ್ಪಟ್ಟರು. ಈ ಹಂತದಲ್ಲಿ 46 ರನ್ ಗಳಿಸಿದ್ದ ಕರುಣರತ್ನ ಔಟಾದರು.
ದಿನೇಶ್ ಮತ್ತೆ ಏಂಜೆಲೊ ಮ್ಯಾಥ್ಯೂಸ್ ಜತೆಗೂಡಿ ಮೂರನೇ ವಿಕೆಟಿಗೆ 98 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಈ ನಡುವೆ ಶತಕ ಪೂರೈಸಿದ ದಿನೇಶ್ ಸ್ವಲ್ಪಹೊತ್ತಿನಲ್ಲಿ ಔಟಾದರು. 208 ಎಸೆತ ಎದುರಿಸಿದ ಅವರು 15 ಬೌಂಡರಿ ನೆರವಿನಿಂದ 116 ರನ್ ಗಳಿಸಿ ಔಟಾದರು.
ಏಂಜೆಲೊ ಮ್ಯಾಥ್ಯೂಸ್ ಮತ್ತು ಕಮಿಂಡು ಮೆಂಡಿಸ್ ಅವರು ಎಚ್ಚರಿಕೆಯ ಆಟವಾಡಿ ಇನ್ನಷ್ಟು ಕುಸಿತ ಆಗದಂತೆ ನೋಡಿಕೊಂಡರು. ಮುರಿಯದ ನಾಲ್ಕನೇ ವಿಕೆಟಿಗೆ ಅವರಿಬ್ಬರು ಈಗಾಗಲೇ 85 ರನ್ ಪೇರಿಸಿದ್ದಾರೆ. ಮ್ಯಾಥ್ಯೂಸ್ 78 ಮತ್ತು ಮೆಂಡಿಸ್ 51 ರನ್ನುಗಳಿಂದ ಆಡುತ್ತಿದ್ದಾರೆ.
ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ ಪ್ರಥಮ ಇನ್ನಿಂಗ್ಸ್: ಮೂರು ವಿಕೆಟಿಗೆ 306 (ದಿನೇಶ್ ಚಂಡಿಮಾಲ್ 116, ದಿಮುತ್ ಕರುಣರತ್ನ 46, ಏಂಜೆಲೊ ಮ್ಯಾಥ್ಯೂಸ್ 78 ಬ್ಯಾಟಿಂಗ್, ಕಮಿಂಡು ಮೆಂಡಿಸ್ 51 ಬ್ಯಾಟಿಂಗ್).