ಕ್ರೈಸ್ಟ್‌ಚರ್ಚ್: ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಲು ನ್ಯೂಜಿಲೆಂಡ್ ತಂಡವು 285 ರನ್ ಗಳಿಸುವ ಗುರಿ ಪಡೆದಿದೆ. ಮೊದಲ ಇನಿಂಗ್ಸ್‌ನಲ್ಲಿ 18 ರನ್ ಹಿನ್ನಡೆ ಪಡೆದಿದ್ದ ಶ್ರೀಲಂಕಾ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ ಏಂಜೆಲೊ ಮ್ಯಾಥ್ಯೂಸ್ ಅವರ ಸೊಗಸಾದ ಶತಕದ ನೆರವಿನಿಂದ 302 ರನ್ ಗಳಿಸಿ ಆಲೌಟಾಯಿತು. ಇದರಿಂದ ನ್ಯೂಜಿಲೆಂಡ್ ಗೆಲುವಿಗೆ 285 ರನ್ ಗಳಿಸುವ ಅವಕಾಶ ಪಡೆಯಿತು.
ಗೆಲ್ಲಲು ಸುಲಭ ಸವಾಲು ಪಡೆದ ನ್ಯೂಜಿಲೆಂಡ್ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ಕಳೆದುಕೊಂಡಿದ್ದು 28 ರನ್ ಗಳಿಸಿದೆ. ಇನ್ನುಳಿದ ಒಂದು ದಿನದ ಆಟದಲ್ಲಿ ನ್ಯೂಜಿಲೆಂಡ್ ಗೆಲ್ಲಲು 257 ರನ್ ಗಳಿಸಬೇಕಾಗಿದೆ. ಒಂದು ವೇಳೆ ಆತಿಥೇಯ ತಂಡ ಗೆದ್ದರೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಲಿದೆ.
ಮ್ಯಾಥ್ಯೂಸ್ ಶತಕ: 20 ರನ್ನಿನಿಂದ ನಾಲ್ಕನೇ ದಿನದಾಟ ಮುಂದುವರಿಸಿದ ಮ್ಯಾಥ್ಯೂಸ್ ನ್ಯೂಜಿಲೆಂಡ್ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿ ಶತಕ ಪೂರ್ತಿಗೊಳಿಸಿದರು. 235 ಎಸೆತ ಎದುರಿಸಿದ ಅವರು 11 ಬೌಂಡರಿ ನೆರವಿನಿಂದ 115 ರನ್ ಗಳಿಸಿ ಔಟಾದರು. ಅವರಿಗೆ ದಿನೇಶ್ ಚಂಡಿಮಲ್, ದನಂಜಯ ಡಿ’ಸಿಲ್ವ ಉತ್ತಮ ಬೆಂಬಲ ನೀಡಿದರು.
ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ 355 ಮತ್ತು 302 (ಮ್ಯಾಥ್ಯೂಸ್ 115, ದಿನೇಶ್ ಚಂಡಿಮಲ್ 42, ದನಂಜಯ 47, ಬ್ಲೇರ್ ಟಕ್ನರ್ 100ಕ್ಕೆ 4, ಮ್ಯಾಟ್ ಹೆನ್ರಿ 71ಕ್ಕೆ 3);
ನ್ಯೂಜಿಲೆಂಡ್ 373 ಮತ್ತು 1 ವಿಕೆಟಿಗೆ 28.