ಚಕ್ರದ ಅನ್ವೇಷಣೆಯನ್ನು ಮಾಡಿದ ಆದಿಮಾನವ ಅನುಕೂಲಕ್ಕೆ ಬಂಡಿಗಳನ್ನು ಬಳಸತೊಡಗಿದ. ಅನಂತರ ಬಳಕೆಗೆ ಬಂದದ್ದು ರಥ. ಪರಿಕಲ್ಪನೆ ನಾಗರಿಕತೆಯಷ್ಟೇ ಪುರಾತನ. ಯುದ್ಧ, ಕ್ರೀಡೆ, ಯಾತ್ರೆ, ಪ್ರವಾಸಕ್ಕೆ, ಮೆರವಣಿಗೆಗೆ ರಥದ ಬಳಕೆಯಾಗತೊಡಗಿತು. ಸದ್ಯಕ್ಕೆ ಉತ್ಸವಾದಿಗಳ ಆಚರಣೆಯಲ್ಲಿ ರಥವು ಬಳಕೆಯಲ್ಲಿದೆ. ರಥಬೀದಿಯಲ್ಲಿ ಸಿಂಗಾರಗೊಂಡ ತೇರು ಉತ್ಸವಮೂರ್ತಿಯನ್ನು ಹೊತ್ತು ಸಾಗುವಾಗ ಹೊಮ್ಮುವ ಭಗವನ್ನಾಮದ ವಿದ್ಯುತ್ ಸಂಚಾರ ಜಾತ್ರೆಯ ಅಮೋಘ ಕ್ಷಣಗಳಲ್ಲೊಂದು.
ದೇವಾಲಯಗಳ ಉತ್ಸವ ಬೇಸಗೆಗೆ ಸಾಲುಸಾಲಾಗಿ ಬರುತ್ತಿವೆ. ರಥಗುಡ್ಡೆಗಳು ತೇರಮನೆಯಿಂದ ನೇರವಾಗಿ ರಥಬೀದಿಯ ಮೂಲೆ ಯಲ್ಲಿ ನಿಂತು ಸಿಂಗರಿಸಲು ಅಣಿಯಾಗಿವೆ. ರಥ ನಿರ್ಮಾಣ ವೈಶಿಷ್ಟ್ಯವನ್ನು ಹೊಂದಿರುವ ಗಾಂಭೀರ್ಯದ ಶಾಸ್ತ್ರ. ತೇರಿಗೆ ಗಾಲಿಗಳು, ಗಾಲಿಗಳು ರಥಗಡ್ಡೆಗೆ ಅಂಟಿಕೊಂಡರೆ, ಗಡ್ಡೆಯಮೇಲೆ ಅಟ್ಟೆಯ ಮಂಟಪ, ಮಂಟಪದ ಮೇಲೆ ಪತಾಕೆಯ ಗುಂಡನೆಯ ಗೋಪುರ, ಅದರ ಮೇಲೆ ಮುಕುಟ. ಇವಿಷ್ಟು ರಥವನ್ನು ಕಲ್ಪಿಸಿಕೊಂಡರೆ ಕಣ್ಣಿಗೆ ಕಟ್ಟುವ ಆಕೃತಿಗಳು.
ರಥಶಾಲೆಯಿಂದ ಹೊರಬಂದ ರಥಕಟ್ಟೆ-ಗುಡ್ಡೆಗೆ ಉದ್ದನೆಯ ಕಂಬಗಳನ್ನು ಹುಗಿದು ಬಿದಿರಿನ ಸಹಾಯದಿಂದ ಗೂಡನ್ನು ನಿರ್ಮಿಸುತ್ತಾರೆ. ದಿನ ಸಾಗುತ್ತಿದ್ದಂತೆ ಗೋಲಾಕಾರದ ಗೂಡು ಸಿದ್ಧವಾಗುತ್ತದೆ. ಇದಕ್ಕೆ ಅಡ್ಡಡ್ಡವಾಗಿ ಜಂತಿಗಳನ್ನು ಕಟ್ಟಿ ದರೆ ಪಂಜರದಂತಹ ಅಟ್ಟೆ ಸಿದ್ಧ. ಬಿದಿರಿನ ಕೋಲಿಗೆ ಸಿಕ್ಕಿಸಿದ ಪತಾಕೆಗಳನ್ನು ಈ ವರ್ತುಲದ ಪಂಜರಕ್ಕೆ ಕ್ರಮವಾಗಿ ಜೋಡಿಸಿ ಗೋಪುರವನ್ನು ಸಿಂಗರಿಸುತ್ತಾರೆ. ಇಂತಹ ಸಾವಿರಾರು ಪತಾಕೆ ಗಳನ್ನು ಜತನ-ಜಾಗರೂಕತೆಯಿಂದ ಕಟ್ಟುವುದು ಬಹಳ ನಾಜೂಕಿನ ಕೆಲಸ. ಪತಾಕೆಗಳು ಕೆಂಪು, ಬಿಳಿಯ ವಸ್ತ್ರದವುಗಳು.
ತೇರಿನ ಗೋಪುರವು ಕೆಂಪು-ಬಿಳಿಯ ಕ್ರಮಬದ್ಧ ವರ್ಣದಿಂದ ನೋಡುಗರನ್ನು ಸೆಳೆಯುತ್ತದೆ. ಕೆಲಕಡೆಗಳಲ್ಲಿ ಗೋಪುರದ ಪಂಜರಕ್ಕೆ ಬಟ್ಟೆಯನ್ನು ಹೊಡೆಸುವ ವಿಧಾನವೂ ಬಳಕೆಯಲ್ಲಿದೆ. ದಿನಕಳೆದಂತೆ ಕಾಷ್ಠ ಗುಡ್ಡೆಯು ಬ್ರಹ್ಮರಥವಾಗಿ ಮೈದಳೆಯುವ ವಿಧಾನ ಬಹು ರೋಮಾಂಚಕ.
ತೇರಿನ ಗಡ್ಡೆ ಸಾಮಾನ್ಯವಾಗಿ ಚೌಕ, ನಕ್ಷತ್ರ, ಕಮಲ, ದ್ವಾದಶ, ವರ್ತುಲಾಕೃತಿಯಲ್ಲಿರುತ್ತವೆ. ಗಡ್ಡೆಯ ಹೊರಮೈಸುತ್ತಲೂ ನವಗ್ರಹ, ದಶಾವತಾರ, ಕಿನ್ನರ, ದ್ವಾರಪಾಲಕ, ಗಂಧರ್ವ, ದೇವತೆ, ಗಜಸಿಂಹ, ಕುಂಜರ, ಮಕರ, ನಾಗ, ಹನುಮಂತ, ಗರುಡ, ಪ್ರಾಣಿಪಕ್ಷಿ, ಹೀಗೆ ಹಲವಾರು ಬಗೆಯ ಕುಸುರಿ ಕೆತ್ತನೆ ಕಂಡು ಬರುತ್ತದೆ. ತೇರಿಗೆ ನಾಲ್ಕು, ಆರು ಚಕ್ರಗಳ ಬಳಕೆಯಿದೆ. ಪುರಿಯ ಜಗನ್ನಾಥನ ರಥಕ್ಕೆ ಹದಿನಾರು ಚಕ್ರಗಳು.
ರಥಕಟ್ಟುವ ಕೆಲಸ ಬಹಳ ನಾಜೂಕಿನ ಕೆಲಸ. ಕೌಶಲಯುಕ್ತ ಕಾರ್ಯವೂ ಹೌದು. ಕೆಲವು ಕಡೆ ಕೇವಲ ಹಗ್ಗದಿಂದ, ಬೆತ್ತದಿಂದ ರಥಕಟ್ಟುವ ಕಾಯಕ ಚಾಲ್ತಿಯಲ್ಲಿದೆ. ಕಾರ್ಮಿಕರ ಅಭಾವದಿಂದ ಬಹಳ ಕಡೆಗಳಲ್ಲಿ ಕಬ್ಬಿಣದ ಗ್ರಿಲ್ಸ್‌ಗಳು ಶಿಖರದ ಬಿದಿರನ್ನು ಆಕ್ರಮಿಸಿಕೊಂಡಿವೆ. ಬೋಲ್ಟಾಗಳ ಜೋಡಣೆಯಲ್ಲಿ ಅರ್ಧದಿನಕ್ಕೇ ರಥ ಶಿಖರದ ಮೆರುಗನ್ನು ಹೊಂದುತ್ತದೆ. ರಜತ-ಸ್ವರ್ಣ ರಥಗಳ ನಡುವೆಯೂ ಮರದ ಗಡ್ಡೆಯ ರಥಗಳು ಜಾತ್ರೆಯ ಸೊಬಗನ್ನು, ವಿಜೃಂಭಣೆಯ ಮೆರುಗನ್ನು, ಆರಾಧನೆಯ ಉತ್ಸಾಹವನ್ನು ಹೆಚ್ಚಿಸಿವೆ.
- ವಿಶ್ವನಾಥ ಭಟ್
ಧಾರವಾಡ