ಹೊಸದಿಲ್ಲಿ : ‘ಪಾಕಿಸ್ಥಾನದಲ್ಲಿ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಮೂಲ ಸೌಕರ್ಯಗಳು ಹಾಗೆಯೇ ಉಳಿದಿವೆ ಮತ್ತು ಜಮ್ಮು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳು ಸ್ಥಳೀಯರನ್ನು ಭಾರತದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
‘ಭಾರತವನ್ನು ಗುರಿ ಇರಿಸುವ ಭಯೋತ್ಪಾದಕ ಮೂಲ ಸೌಕರ್ಯವನ್ನು ಪಾಕಿಸ್ಥಾನ ಬೆಂಬಲಿಸುತ್ತಿದೆ’ ಎಂದು ಆ ದೇಶವನ್ನು ಬೆಟ್ಟು ಮಾಡಿ ರಾಜನಾಥ್ ಸಿಂಗ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
‘ಪಾಕಿಸ್ಥಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಶಿಬಿರಗಳು ಈಗಲೂ ಇವೆ; ಉಗ್ರರ ಲಾಂಚಿಂಗ್ ಪ್ಯಾಡ್ ಗಳಿವೆ ಮತ್ತು ಸಂಪರ್ಕ ನಿಯಂತ್ರಣ ಸ್ಟೇಶನ್ ಗಳಿವೆ. ದೇಶೀಯ ಉಗ್ರರಿಗೆ ಮತ್ತು ಪ್ರತ್ಯೇಕತಾವಾದಿಗಳಿಗೆ ಗಡಿಯಾಚೆಯಿಂದ ಹಣ ಒದಗಣೆಯಾಗುತ್ತಿದೆ. ಇದು ನಿಜಕ್ಕೂ ಕಳವಳದ ಸಂಗತಿ’ ಎಂದು ರಾಜನಾಥ್ ಬರೆದಿದ್ದಾರೆ.
‘ಪ್ರತ್ಯೇಕತಾವಾದಿಗಳು ಪ್ರತಿಯೊಂದು ಅವಕಾಶವನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸುತ್ತಿದ್ದು ಸ್ಥಳೀಯರನ್ನು ಭಾರತದ ವಿರುದ್ಧ ಎತ್ತಿಕಟ್ಟು ಸಂಘರ್ಷಕ್ಕೆ ದೂಡುತ್ತಿದ್ದಾರೆ; ಇದರಿಂದ ಕಾಶ್ಮೀರ ಮತ್ತು ಸುವ್ಯವಸ್ಥೆಯ ಸಮಸ್ಯೆ ಎದುರಾಗುತ್ತಿದೆ. ಹಾಗಿದ್ದರೂ ಈಚಿನ ದಿನಗಳಲ್ಲಿ ಭಾರತೀಯ ಸೇನಾ ಪಡೆಯನ್ನು ಗುರಿ ಇರಿಸಿ ನಡೆಯುವ ಕಲ್ಲೆಸೆತದ ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾಗಿವೆ’ ಎಂದು ರಾಜನಾಥ್ ಬರೆದಿದ್ದಾರೆ.