ಮಂಗಳೂರು : ಅಫ್ಘಾನಿಸ್ಥಾನದಲ್ಲಿ ಸಿಲುಕಿರುವ ಮಂಗಳೂರಿನ ಸಿಸ್ಟರ್ ಆಫ್ ಚಾರಿಟಿಯ ಭಗಿನಿ ಕಾಸರಗೋಡಿನ ಬೇಳ ಮೂಲದ ತೆರೆಸಾ ಕ್ರಾಸ್ತಾ ಅವರು ಸುರಕ್ಷಿತವಾಗಿದ್ದಾರೆ ಎಂದು ಸಿಸ್ಟರ್ ಆಫ್ ಚಾರಿಟಿ ಸಂಸ್ಥೆ ಹಾಗೂ ಆಕೆಯ ಕುಟುಂಬದ ಮೂಲಗಳು ತಿಳಿಸಿವೆ.
ಸ್ವತಃ ತೆರೆಸಾ ಕ್ರಾಸ್ತಾ ಅವರು ಧ್ವನಿ ಸಂದೇಶವೊಂದನ್ನು ಕಳುಹಿಸಿ ತಾನು ಕಾಬೂಲ್ ಕಾನ್ವೆಂಟ್‌ನಲ್ಲಿ ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ.
“ನಾನು ಕೆಲಸ ಮಾಡುವ ಇಟೆಲಿಯ ಸಂಸ್ಥೆಯು ನನ್ನ ಸುರಕ್ಷತೆಗೆ ರೋಮ್‌ನಲ್ಲಿರುವ ಇಟಾಲಿಯನ್ ಕಾನ್ಸುಲೇಟ್ ಮೂಲಕ ಕ್ರಮ ಕೈಗೊಂಡಿದೆ ಹಾಗೂ ಸುರಕ್ಷಿತವಾಗಿ ಇಟೆಲಿಗೆ ಕರೆದೊಯ್ಯಲು ಕೆಲವೇ ದಿನಗಳಲ್ಲಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗೊಂದಲ ಇರುವುದರಿಂದ ಈಗ ವಿಮಾನ ನಿಲ್ದಾಣದೊಳಗೆ ಯಾರಿಗೂ ಪ್ರವೇಶ ಇಲ್ಲ.
ಹಾಗಾಗಿ ನಮ್ಮ ಪ್ರಯಾಣವನ್ನು ಮುಂದೂಡಲಾಗಿದೆ. ವಿಮಾನ ನಿಲ್ದಾಣಕ್ಕೆ ಪ್ರವೇಶ ಕಲ್ಪಿಸುವಾಗ ನಮ್ಮನ್ನು ಕರೆದೊಯ್ಯುವರು. ಭಾರತೀಯ ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿದ್ದು, ಅದರ ಜತೆಗೂ ಸಂಪರ್ಕದಲ್ಲಿದ್ದೇನೆೆ. ನಮ್ಮ ಸುರಕ್ಷತೆಗೆ ಅವರೆಲ್ಲರೂ ವ್ಯವಸ್ಥೆ ಮಾಡುತ್ತಿದ್ದಾರೆ. ನಿಮ್ಮೆಲ್ಲರ ಸಹಕಾರಕ್ಕೆ ತುಂಬು ಹೃದಯದ ಕೃತಜ್ಞತೆಗಳು’ ಎಂಬುದಾಗಿ ಭ| ತೆರೆಸಾ ಕ್ರಾಸ್ತಾ ಅವರು ತಿಳಿಸಿದ್ದಾರೆ.
ಭ| ತೆರೆಸಾ ಕ್ರಾಸ್ತಾ ಅವರನ್ನು ಅವರು ಕೆಲಸ ಮಾಡುತ್ತಿರುವ ಇಟೆಲಿಯ ಸಂಸ್ಥೆ 3 ವರ್ಷಗಳ ಹಿಂದೆ ಅಘಾ^ನಿಸ್ಥಾನಕ್ಕೆ ಕಳುಹಿಸಿದ್ದು, ಅಲ್ಲಿ ಅವರು ಬುದ್ಧಿ ಮಾಂದ್ಯ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಪ್ರಸ್ತುತ ಅವರ ಜತೆಗೆ ಇತರ ಸಂಸ್ಥೆಗಳ ಕೆಲವು ಮಂದಿ ಧರ್ಮ ಭಗಿನಿಯರು ಇದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಸಿಸ್ಟರ್ ಆಫ್ ಚಾರಿಟಿ ಸಂಸ್ಥೆಯ ಮೂಲಗಳು ತಿಳಿಸಿವೆ.