Advertisement

ಮೂರು ಎಕರೆಯಲ್ಲಿ ಹತ್ತಾರು ಬೆಳೆ, ಸಮೃದ್ಧ ಫ‌ಸಲು

12:20 PM Jul 13, 2018 | |

ಆಲಂಕಾರು : ಕೇವಲ 3 ಎಕರೆ ಜಾಗದಲ್ಲಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಸಿ ಮಾದರಿಯಾಗಿ ಯಶಸ್ವಿ ಸಾಧನೆ ಮಾಡಿದ್ದಾರೆ ಪ್ರಗತಿಪರ ಕೃಷಿಕ ಕಡಬ ತಾಲೂಕು ಕುಂತೂರು ಗ್ರಾಮದ ಕೋಡ್ಲ ನಿವಾಸಿ ಉಮೇಶ್‌ ಪೂಜಾರಿ. ಅವರು ಕೈತುಂಬಾ ಸಂಪಾದನೆಯೊಂದಿಗೆ ಸ್ವಾವಲಂಬನೆಯ ಬದುಕು ಮುನ್ನಡೆಸುತ್ತಿದ್ದಾರೆ.

Advertisement

ಬಡ ಕೂಲಿ ಕಾರ್ಮಿಕ ಕುಟುಂಬದಲ್ಲಿ ಜನಿಸಿದ್ದ ಉಮೇಶ್‌ ಅವರಿಗೆ ಸಮರ್ಪಕ ವಿದ್ಯಾಭ್ಯಾಸ ಪಡೆಯಲು ತೊಂದರೆಯಾಯಿತು. ಈ ನಿಟ್ಟಿನಲ್ಲಿ ಅವರು ಅನ್ಯ ಕೆಲಸದತ್ತ ಮುಖ ಮಾಡದೆ ಕೃಷಿ ಕಾರ್ಯದಲ್ಲಿ ತೊಡಗಿಕೊಂಡರು. ತನ್ನ ತಂದೆಯಿಂದ ಬಂದ ಮೂರು ಎಕರೆ ಜಾಗದಲ್ಲಿ ಒಂದಿಂಚೂ ಖಾಲಿ ಬಿಡದಂತೆ ಸದ್ಬಳಕೆ ಮಾಡಿಕೊಂಡು ಲಾಭದಾಯಕ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ.

ತೋಟದಲ್ಲಿ ಎಲ್ಲವೂ ಇದೆ
ಜಮೀನಿನಲ್ಲಿ ಮೊದಲಿಗೆ 60 ತಾಳೆ ಗಿಡಗಳನ್ನು ನೆಟ್ಟು ಕೃಷಿ ಆರಂಭಿಸಿದ ಉಮೇಶ್‌, ನಾಲ್ಕು ವರ್ಷ ಕಳೆದ ಮೇಲೆ ಎರಡು ಕ್ವಿಂಟಲ್‌ ಕಾಯಿ ಇಳುವರಿ ಪಡೆದರು. ಈಗ ಪ್ರತಿ 15 ದಿನಗಳಿಗೊಮ್ಮೆ ತಾಳೆ ಗೊನೆ ಕಟಾವಿಗೆ ಬರುತ್ತದೆ. ಜತೆಗೆ ಲೋಕಲ್‌, ಮಂಗಳಾ, ಸುಮಂಗಳಾ ಪ್ರಭೇದದ 800 ಅಡಿಕೆ ಗಿಡಗಳನ್ನು ಬೆಳೆಸಿದ್ದಾರೆ. ಮಿಶ್ರ ಬೆಳೆಯಾಗಿ ಪಣಿಯೂರು, ಅರಕಳ ಮುಂಡ ಹಾಗೂ ಕರಿಮುಂಡ ಎನ್ನುವ ಮೂರು ಪ್ರಬೇಧದ ಕರಿಮೆಣಸು ಗಿಡಗಳನ್ನು ಬೆಳೆಸಿದ್ದಾರೆ. ತೋಟದ ಸುತ್ತ 60 ತೆಂಗಿನ ಗಿಡಗಳನ್ನು ಬೆಳೆಸಿದ್ದು, ವರ್ಷಕ್ಕೆ 10 ಕ್ವಿಂಟಲ್‌ ತೆಂಗು ಇಳುವರಿಯಾಗುತ್ತಿದೆ. 100 ರಬ್ಬರ್‌ ಮರ ಬೆಳೆಸಿದ್ದು, ದಿನಕ್ಕೆ ಸರಾಸರಿ 10 ಶೀಟ್‌ ಸಿಗುತ್ತಿವೆ. ನಾಲ್ಕು ವರ್ಷ ಪ್ರಾಯದ 100 ರಾಮಪತ್ರೆ ಗಿಡಗಳನ್ನೂ ಬೆಳೆಸಿದ್ದಾರೆ.

ಆಳುಗಳಿಲ್ಲ, ಮನೆಮಂದಿಯೇ ಎಲ್ಲ
ಉಮೇಶ್‌ ಅವರು ಸೂರ್ಯೋದಯಕ್ಕೂ ಮೊದಲೇ ತೋಟಕ್ಕಿಳಿಯುತ್ತಾರೆ. ಸೂರ್ಯಾಸ್ತದವರೆಗೂ ಕಾಯಕ ಮಾಡುತ್ತಾರೆ. ಯಾವುದೇ ಕೆಲಸಕ್ಕೆ ಇವರ ಮನೆಯವರಲ್ಲದೆ ಬೇರೆ ಕೂಲಿ ಯಾಳುಗಳ ನೆರವು ಪಡೆಯವುದಿಲ್ಲ. ಬೆಳಗ್ಗೆ ರಬ್ಬರ್‌ ಟ್ಯಾಪಿಂಗ್‌ನಿಂದ ಹಿಡಿದು ಅಡಿಕೆಗೆ ಮುದ್ದು ಸಿಂಪರಣೆ, ಕೊಯಿಲು, ಅಡಿಕೆ ಸುಲಿಯುವುದು – ಎಲ್ಲ ಕೆಲಸ ಕಾರ್ಯಗಳನ್ನು ಉಮೇಶ್‌ ಒಬ್ಬರೇ ನಿರ್ವಹಿಸುತ್ತಾರೆ. ಅವರಿಗೆ ಪತ್ನಿ, ತಂದೆ, ತಾಯಿ ಮತ್ತು ಮೂವರು ಮಕ್ಕಳು ಸಹಾಯ ಮಾಡುತ್ತಾರೆ.

25 ಪ್ರಭೇದದ ಹಣ್ಣುಗಳು
ತೋಟದಲ್ಲಿ ಮಲ್ಲಿಗೆ ಕೃಷಿಗೂ ಮಹತ್ವ ನೀಡಿದ್ದಾರೆ. 25 ಪ್ರಭೇದಗಳ ಹಣ್ಣುಗಳ ಗಿಡಗಳನ್ನು ಬೆಳೆಸಿದ್ದಾರೆ. ಇದರಲ್ಲಿ ಥೈಲಾಂಡ್‌ ಹಲಸು, ಗಮ್‌ಲೆಸ್‌ ಹಲಸು, ಚಂದ್ರ ಹಲಸು ಪ್ರಮುಖವಾದವು. ಬರಬಾ, ಜಬೊಟಿಕಬೋ, ಮ್ಯಾಂಗೋಸ್ಟಿನ್‌, ಮಿರಾಕಂಬಲ್‌ ಫ್ರುಟ್‌, ಸರ್ವಸಾಂಬಾರ್‌, ವುಲೋಸಮ್‌, ಎಲಿಫೆಂಟ್‌ ಆ್ಯಪಲ್‌, ಸೂರಿನಂ ಚೆರಿ, ಸ್ಟ್ರಾಬೆರಿ ಪೇರೆಳೆ, ಬೇಕರಿ ಚೆರಿ, ರಾಜಾ ನೆಲ್ಲಿ ಅಲ್ಲದೆ ಕ್ಯಾನ್ಸರ್‌ ಗೆ ರಾಮಬಾಣವಾದ ಹನುಮ ಫ‌ಲ, ಮಂತು ಹುಳಿ, ಗಂಧದ ಗಿಡಗಳನ್ನು ಬೆಳೆಸಿದ್ದಾರೆ.
ಹೈನುಗಾರಿಕೆ, ನಾಟಿ ಕೋಳಿ ಸಾಕಣೆಗೂ ಮಹತ್ವ ನೀಡಿದ್ದಾರೆ.  

Advertisement

ಕೃಷಿ ಬದುಕು ಅತ್ಯಂತ ತೃಪ್ತಿ ತಂದಿದೆ
ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗೇರಬೇಕು ಎನ್ನುವ ಹೆಬ್ಬಯಕೆ ಹೊಂದಿದ್ದೆ. ಆದರೆ ಬಡತನ, ಹಣಕಾಸಿನ ಮುಗ್ಗಟ್ಟಿನಿಂದಾಗಿ ಶೈಕ್ಷಣಿಕ ಆಸೆ ಈಡೇರಿಲ್ಲ. ಆದರೂ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಹಠ ಇತ್ತು. ಕೃಷಿಯ ಆಯ್ಕೆ ನನ್ನನ್ನು ಕೈಬಿಡಲಿಲ್ಲ. ಈಗ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸುವುದೇ ನನ್ನಾಸೆ. ಅವರಿಗೆ ಉದ್ಯೋಗ ಸಿಗದಿದ್ದರೂ ಬೇಸರವಿಲ್ಲ. ನಾನೇ ಕೃಷಿ ಪಾಠ ಮಾಡಿದ್ದೇನೆ. ಅವರ ಬದುಕಿಗೂ ಕೃಷಿ ಆಧಾರವಾಗುತ್ತದೆ. ನನ್ನ ಸಹಿತ ಕುಟುಂಬಕ್ಕೆ ಕೃಷಿ ಬದುಕು ಅತ್ಯಂತ ತೃಪ್ತಿ ತಂದಿದೆ.
– ಉಮೇಶ್‌ ಪೂಜಾರಿ
 ಪ್ರಗತಿಪರ ಕೃಷಿಕ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next