Advertisement

ಹೊರ ವರ್ತುಲದಲ್ಲಿ ಮೆಟ್ರೋ ಮಾರ್ಗಕ್ಕೆ ಟೆಂಡರ್‌

01:02 AM Dec 22, 2019 | Lakshmi GovindaRaj |

ಬೆಂಗಳೂರು: ನೆನೆಗುದಿಗೆ ಬಿದ್ದಿದ್ದ ಹೊರ ವರ್ತುಲದಲ್ಲಿ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಶುಕ್ರವಾರ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಟೆಂಡರ್‌ ಕರೆದಿದೆ. ಕೆ.ಆರ್‌.ಪುರ- ಸೆಂಟ್ರಲ್‌ ಸಿಲ್ಕ್ಬೋರ್ಡ್‌ ಜಂಕ್ಷನ್‌ ನಡುವಿನ 17 ಕಿ.ಮೀ. ಉದ್ದದ ಈ ಮಾರ್ಗವನ್ನು ಎರಡು ಪ್ಯಾಕೇಜ್‌ಗಳಲ್ಲಿ ನಿರ್ಮಿಸಲು ಟೆಂಡರ್‌ ಆಹ್ವಾನಿಸಲಾಗಿದೆ. ಈ ಸಂಬಂಧ ಅರ್ಜಿ ಸಲ್ಲಿಕೆಗೆ 2020ರ ಫೆ.6ರವರೆಗೆ ಕಾಲಾವಕಾಶ ನೀಡಿದ್ದು, ಅಂದೇ ಬಿಡ್‌ ತೆರೆಯಲಾಗುವುದು.

Advertisement

ಸಿವಿಲ್‌ ಕಾಮಗಾರಿ ಟೆಂಡರ್‌ ಪಡೆದ ದಿನದಿಂದ 27 ತಿಂಗಳಲ್ಲಿ ನಿರ್ಮಾಣ ಕಾರ್ಯ ಮುಗಿಸುವ ಷರತ್ತು ವಿಧಿಸಲಾಗಿದೆ. ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನಿಂದ ಕಾಡುಬೀಸನಹಳ್ಳಿ ವರೆಗಿನ 9.85 ಕಿ.ಮೀ. ಉದ್ದದ ಮಾರ್ಗವನ್ನು ಮೊದಲ ಪ್ಯಾಕೇಜ್‌ನಲ್ಲಿ ಹಾಗೂ ಕೋಡಿಬೀಸನಹಳ್ಳಿ ಯಿಂದ ಕೆ.ಆರ್‌.ಪುರವರೆಗೆ 9.77 ಕಿ.ಮೀ. ಉದ್ದದ ಮಾರ್ಗವನ್ನು ಎರಡನೇ ಪ್ಯಾಕೇಜ್‌ನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಕ್ರಮವಾಗಿ 731.18 ಕೋಟಿ ಮತ್ತು 594.25 ಕೋಟಿ ರೂ. ವೆಚ್ಚ ಅಂದಾಜಿ ಸಲಾಗಿದ್ದು, ನಿಲ್ದಾಣಗಳು ಹಾಗೂ ರಸ್ತೆ ವಿಸ್ತರಣೆ ಕಾಮಗಾರಿಯನ್ನೂ ಇದು ಒಳಗೊಂಡಿದೆ.

ಉದ್ದೇಶಿತ ಯೋಜನೆಗೆ ವಿನೂತನ ಮಾದರಿಯಲ್ಲಿ ಸಂಪನ್ಮೂಲ ಕ್ರೋಢೀಕರಿಸಲು ಚಿಂತನೆ ನಡೆಸಿದೆ. ಅದರಂತೆ, ಕೆ.ಆರ್‌.ಪುರ-ಸಿಲ್ಕ್ಬೋರ್ಡ್‌ ಜಂಕ್ಷನ್‌ ಮಾರ್ಗದುದ್ದಕ್ಕೂ ತಲೆಯೆತ್ತುವ ಹೊಸ ಬಡಾವಣೆಗಳ ಮೇಲೆ ಮೆಟ್ರೋ ಸೆಸ್‌ ಹೇರಿಕೆ, ಪ್ರೀಮಿಯಂ ಫ್ಲೋರ್‌ ಸ್ಪೇಸ್‌ ಇಂಡೆಕ್ಸ್‌ (ಪಿಎಂಎಫ್ಎಸ್‌ಐ), ಐಟಿ ಪಾರ್ಕ್‌ ಗಳಿಗೆ ನೇರ ಮೆಟ್ರೋ ಸಂಪರ್ಕ, ಜಾಹೀರಾತು ಮತ್ತು ಲೀಸ್‌ಗೆ ಅನುವು ಮಾಡಿಕೊಡುವ ಮೂಲಕ ಅಗತ್ಯ ಸಂಪನ್ಮೂಲ ಕ್ರೋಢೀಕರಿಸಲು ನಿಗಮ ಚಿಂತನೆ ನಡೆಸಿದೆ.

ಟೆಂಡರ್‌ ಪ್ರಕ್ರಿಯೆ ರದ್ದಾಗಿತ್ತು: ಈ ಮೊದಲು ಮೂರು ಪ್ಯಾಕೇಜ್‌ಗಳಲ್ಲಿ ಹೊರವರ್ತುಲ ಮಾರ್ಗದ ಟೆಂಡರ್‌ ಕರೆಯಲು ಉದ್ದೇಶಿಸಲಾಗಿತ್ತು. ಈ ಪೈಕಿ ಒಂದು ಪ್ಯಾಕೇಜ್‌ನ ಫೈನಾನ್ಸ್‌ ಬಿಡ್‌ ಕೂಡ ತೆರೆಯಲಾಗಿತ್ತು. ಆದರೆ, ಅದರಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಐಎಲ್‌ ಆಂಡ್‌ ಎಫ್ಎಸ್‌ ಭಾಗಿಯಾಗಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್‌ ಪ್ರಕ್ರಿಯೆ ರದ್ದುಗೊಳಿಸಲಾಗಿತ್ತು. ಮೊದಲ ಪ್ಯಾಕೇಜ್‌ (ಸಿಲ್ಕ್ಬೋರ್ಡ್‌- ಬೆಳ್ಳಂದೂರು)ನಲ್ಲಿ ನಿಗಮ ನಿಗದಿಪಡಿಸಿದ್ದಕ್ಕಿಂತ ಶೇ.-1ರಷ್ಟು ದರವನ್ನು ಐಎಲ್‌ ಆಂಡ್‌ ಎಫ್ಎಸ್‌ ನಮೂದಿಸಿತ್ತು.

ಸೆಂಟ್ರಲ್‌ ಸಿಲ್ಕ್ ಬೋರ್ಡ್‌, ಎಚ್‌ಎಸ್‌ಆರ್‌ ಲೇಔಟ್‌, ಅಗರ ಕೆರೆ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ.
ಮಾರ್ಗದ ಉದ್ದ- 9.85 ಕಿ.ಮೀ.
ಅಂದಾಜು ವೆಚ್ಚ- 731.18 ಕೋಟಿ ರೂ.

Advertisement

ಕೋಡಿಬೀಸನಹಳ್ಳಿ, ಮಾರತ್‌ಹಳ್ಳಿ, ಇಸ್ರೋ, ದೊಡ್ಡನೆಕ್ಕುಂದಿ, ಡಿಆರ್‌ಡಿಒ ಕ್ರೀಡಾ ಸಂಕೀರ್ಣ, ಸರಸ್ವತಿ ನಗರ, ಕೆ.ಆರ್‌.ಪುರ.
ಮಾರ್ಗದ ಉದ್ದ- 9.77ಕಿ.ಮೀ.
ಅಂದಾಜು ವೆಚ್ಚ- 594.25 ಕೋಟಿ ರೂ.

-ಯೋಜನೆ ಪೂರ್ಣಗೊಂಡ ನಂತರದ ಮೊದಲ ವರ್ಷದಲ್ಲೇ ನಿತ್ಯ ಈ ಮಾರ್ಗದಲ್ಲಿ 3.1 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ.

-15,179 ಚದರ ಮೀಟರ್‌ ಭೂಸ್ವಾಧೀನ ಮಾಡಿಕೊಳ್ಳಬೇಕಿದ್ದು, ಅದರಲ್ಲಿ 5,911 ಚದರ ಮೀಟರ್‌ ಸರ್ಕಾರಿ ಭೂಮಿ ಇದೆ.

-ಹೊರ ವರ್ತುಲ ರಸ್ತೆಗೆ ಹೊಂದಿಕೊಂಡ ಈ ಕಾರಿಡಾರ್‌ನಲ್ಲಿ ನಗರದ ಶೇ.32ರಷ್ಟು ವಾಣಿಜ್ಯ ಸಂಸ್ಥೆಗಳ ಕಚೇರಿಗಳಿದ್ದು, ಸುಮಾರು 8 ಲಕ್ಷ ಜನ ಉದ್ಯೋಗಿಗಳು ಅಲ್ಲಿ ಕೆಲಸ ಮಾಡುತ್ತಾರೆ. ಗಂಟೆಗೆ 18,750 ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. (ಡಿಪಿಆರ್‌ ಪ್ರಕಾರ)

Advertisement

Udayavani is now on Telegram. Click here to join our channel and stay updated with the latest news.

Next